ಕಾಗವಾಡ: ಸಾಮಾನ್ಯ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಸರ್ಕಾರ ಪ್ರತಿ ಗ್ರಾಮದಲ್ಲಿ ಜನಸಂಖ್ಯೆ ಆಧಾರದಲ್ಲಿ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಿದೆ. ಆದರೆ ನಿರ್ವಹಣೆ ಇಲ್ಲದೇ ಘಟಕಗಳು ಸ್ಥಗಿತಗೊಂಡಿರುವುದರಿಂದ ಗ್ರಾಮಸ್ಥರಿಗೆ ನೀರಿನ ಸಮಸ್ಯೆ ಹೆಚ್ಚುತ್ತಿದೆ.
ಕಾಗವಾಡ ಮತ್ತು ಅಥಣಿ ತಾಲೂಕಿನಲ್ಲಿ ಸುಮಾರು 5.25 ಲಕ್ಷ ಜನಸಂಖ್ಯೆಯಿದ್ದು, ಬೇಸಿಗೆ ಪ್ರಾರಂಭವಾದರೆ ಸಾಕು ಕೆಲ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗುತ್ತದೆ. ಕಾಗವಾಡ ತಾಲೂಕಿನಲ್ಲಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗಳು ಪ್ರಾರಂಭಿಸಲಾಗಿದ್ದು, ಇದು 46 ಗ್ರಾಮಗಳನ್ನು ಒಳಗೊಂಡಿದೆ. ಈಗಾಗಲೇ ಕಾಗವಾಡ ಮತ್ತು ಅಥಣಿ ತಾಲೂಕಿನಲ್ಲಿ 154 ನೀರಿನ ಘಟಕಗಳು ಪ್ರಾರಂಭಿಸಲಾಗಿದ್ದು, ಇದರಲ್ಲಿ 8 ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ.
ಶೀಘ್ರವೇ ಕಾರ್ಯ ನಿರ್ವಹಿಸದ ಘಟಕಗಳನ್ನು ದುರಸ್ತಿಗೊಳಿಸಿ ಮರು ಪ್ರಾರಂಭಿಸಲಾಗುವುದು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ವೀರಣ್ಣಾ ವಾಲಿ ತಿಳಿಸಿದ್ದಾರೆ.
ಸರ್ಕಾರ ಗ್ರಾಮೀಣ ಜನರಿಗೆ ಶುದ್ಧ ನೀರು ಒದಗಿಸುವ ನಿಟ್ಟಿನಲ್ಲಿ ಪ್ರಾರಂಭಿಸಿದ ಶುದ್ಧ ಕುಡಿಯುವ ನೀರಿನ ಯೋಜನೆ ಕುಂಟುತ್ತ ಸಾಗುತ್ತಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಗ್ರಾಮೀಣ ಭಾಗದ ಜನರಿಗೆ ಶುದ್ಧ ನೀರು ಒಗಿಸಲು ಮುಂದಾಗಲಿ ಎಂಬುದು ಗ್ರಾಮೀಣ ಜನರ ಒತ್ತಾಯವಾಗಿದೆ.
ಸದ್ಯ ಬೇಸಿಗೆ ಪ್ರಾರಂಭಗೊಂಡಿದ್ದು, ಇಲ್ಲಿಯ ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುತ್ತಿದೆ. ತಾಲೂಕಾಧಿಕಾರಿಗಳು ಕೂಡಲೇ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಿ.
ವಿನಾಯಕ ಬಾಗಡಿ,
ಜಿಪಂ ಮಾಜಿ ಸದಸ್ಯ, ಮದಬಾವಿ.
ಕಾಗವಾಡ ನಗರದ ಜನತೆಗಾಗಿ ಸಚಿವ ಶ್ರೀಮಂತ ಪಾಟೀಲ ಅವರು 2 ಕೋಟಿ ವೆಚ್ಚದ ಸ್ಯಾಂಡ್ ಫಿಲ್ಟರ್ ನೀರು ಸರಬರಾಜು ಯೋಜನೆ ಮಂಜೂರು ಮಾಡಿದ್ದಾರೆ. ಇದು ಶೇ. 90ರಷ್ಟು ಪೂರ್ಣಗೊಂಡಿದೆ. ಸದ್ಯಕ್ಕೆ ನೀರಿನ ಸಮಸ್ಯೆಯಿಲ್ಲ.
ಶ್ರೀದೇವಿ ಚೌಗುಲೆ,
ಗ್ರಾಪಂ ಅಧ್ಯಕ್ಷರು ಕಾಗವಾಡ.