Advertisement

ಕಡು ಬಡವರಿಗೂ ಸರ್ಕಾರದ ಸೌಲಭ್ಯ ಸಿಗಲಿ

05:14 PM Nov 20, 2019 | Naveen |

ಕಡೂರು: ಸರ್ಕಾರ, ಸರ್ಕಾರೇತರ ಸಂಘ, ಸಂಸ್ಥೆಗಳು ಸಮಾಜದ ಕಡು ಬಡವರಿಗೆ ನೀಡುವ ಸೌಲಭ್ಯಗಳು ಕಟ್ಟ ಕಡೆಯ ಜನರಿಗೂ ಸುಲಭವಾಗಿ ತಲುಪಬೇಕು ಎಂಬ ಆಶಯ ನಮ್ಮ ಸಂಸ್ಥೆಯದ್ದಾಗಿದೆ ಎಂದು ಹಾಸನದ ಸಿಎಂಎಸ್‌ಎಸ್‌ಎಸ್‌ ಸಂಸ್ಥೆಯ ನಿರ್ದೇಶಕ ಮಾರ್ಸೆಲ್‌ ಪಿಂಟೋ ತಿಳಿಸಿದರು.

Advertisement

ಪಟ್ಟಣದ ಮರಿಯ ನಿವಾಸ ಚರ್ಚ್‌ ಆವರಣದಲ್ಲಿ ಮಂಗಳವಾರ ಚಿಕ್ಕಮಗಳೂರು ಮಲ್ಟಿಪರ್ಪಸ್‌ ಸೋಶಿಯಲ್‌ ಸರ್ವಿಸ್‌ ಸೊಸೈಟಿ ಆಯೋಜಿಸಿದ್ದ ಉಚಿತ ಸೋಲಾರ್‌ ಲ್ಯಾಂಪ್‌ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 41 ವರ್ಷಗಳ ಹಿಂದೆ ಸಿಎಂಎಸ್‌ ಎಸ್‌ಎಸ್‌ ಸಂಸ್ಥೆಯು ಕಡೂರಿನಲ್ಲಿ ಜನ್ಮತಾಳಿ ಹಾಸನ ನಗರದಲ್ಲಿ ಕೇಂದ್ರಸ್ಥಾನ ಮಾಡಿಕೊಂಡು ಸುಮಾರು 500ಕ್ಕೂ ಹೆಚ್ಚಿನ ಮಹಿಳಾ ಒಕ್ಕೂಟಗಳನ್ನು ಆರಂಭಿಸಿ ಒಕ್ಕೂಟದ ಮಹಿಳೆಯರಿಗೆ ಸ್ವಯಂ ಉದ್ಯೋಗ, ಲಕ್ಷಾಂತರ ರೂ. ಸಾಲ ವಿತರಣೆ ಮಾಡಿ ಮಹಿಳೆಯರು ಸ್ವ-ಉದ್ಯೋಗ ನಡೆಸಲು ಪ್ರೇರಣೆ ನೀಡುತ್ತ ಬಂದಿದೆ.

ವಿಕಲಚೇತನರನ್ನು ಗುರುತಿಸಿ ಅವರಿಗೆ ಸರ್ಕಾರದಿಂದ ಮತ್ತು ನಮ್ಮ ಸಂಸ್ಥೆಯಿಂದ ಅನೇಕ ಸೌಲಭ್ಯ ನೀಡುತ್ತಿದ್ದು. ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹಣಕಾಸಿನ ವ್ಯವಸ್ಥೆ, ಉದ್ಯೋಗ ಕಲ್ಪಿಸಲಾಗಿದೆ. ಎಚ್‌ಐವಿ ಸೋಂಕು ಇರುವವರಿಗೆ ಸಂಸ್ಥೆ ಆರ್ಥಿಕ ಸಹಾಯ ನೀಡಿ ಅವರನ್ನು ಸಮಾಜದ ಇತರರಂತೆ ಬಾಳಲು ಅವಕಾಶ ನೀಡಿದೆ. 170 ಎಚ್‌ಐವಿ ಸೋಂಕಿತ
ಮಕ್ಕಳಿಗೆ ಉಚಿತವಾಗಿ ವಿದ್ಯಾಭ್ಯಾಸದ ಸೌಲಭ್ಯ ಕಲ್ಪಿಸಿ ಸುಮಾರು 250 ಕುಟುಂಬಗಳಿಗೆ ಆಸರೆ ನೀಡಲಾಗಿದೆ ಎಂದರು.

ನಾವು ನಿತ್ಯ ಸೇವಿಸುವ ಗಾಳಿ, ಜಲ, ಬೆಳಕು ಕಲುಷಿತವಾಗಿದ್ದು. ಪರಿಸರದ ಸಮತೋಲನದಲ್ಲಿ ವ್ಯತ್ಯಯವಾಗಿ ಜೀವರಾಶಿಗೆ ಕುತ್ತು ಬಂದಿದೆ. ಇದನ್ನು ಉಳಿಸಲು ಪರಿಸರ ಸಂರಕ್ಷಿಸಬೇಕಾಗಿದೆ. ಇದಕ್ಕೆ ನಮ್ಮ ಸಂಸ್ಥೆಯು ಹೆಚ್ಚಿನ ಒತ್ತು ನೀಡಿದ್ದು, ಸೌರ ಶಕ್ತಿ ಬಳಕೆಯ ಬಗ್ಗೆ ಅರಿವು ಮೂಡಿಸಲು ಸೋಲಾರ್‌ ಲ್ಯಾಂಪ್‌ಗ್ಳನ್ನು ಸುಮಾರು 110 ಕುಟುಂಬಗಳಿಗೆ ವಿತರಿಸಲಾಗಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಸಂಘದ ಮಹಿಳೆಯರಿಗೆ ಮನವಿ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಉಪ ತಹಶೀಲ್ದಾರ್‌ ಶಿವಮೂರ್ತಿ ಮಾತನಾಡಿ, ಸಿಎಂಎಸ್‌ಎಸ್‌ಎಸ್‌ ಸಂಸ್ಥೆಯು ಕಡೂರು ಮತ್ತುಹಾಸನ ಜಿಲ್ಲೆಗಳಲ್ಲಿ ನೂರಾರು ಒಕ್ಕೂಟಗಳನ್ನು ತೆರೆದು ಅಲ್ಲಿನ ಸದಸ್ಯರಿಗೆ ಜೀವನೋಪಾಯದ ಮಾರ್ಗವನ್ನು ಕಲ್ಪಿಸಿದೆ. ಜತೆಯಲ್ಲಿ ಸಮಾಜಮುಖೀ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

Advertisement

ಕಡೂರು ರೋಟರಿ ಸಂಸ್ಥೆಯ ಅಧ್ಯಕ್ಷ ಎಚ್‌.ಎಸ್‌. ಮಂಜುನಾಥ್‌ ಮಾತನಾಡಿ,
ರೋಟರಿಯ ಸಂಸ್ಥೆಯಂತೆಯೇ ಈ ಒಕ್ಕೂಟಗಳು ಕಾರ್ಯನಿರ್ವಹಿಸುತ್ತಿದ್ದು, ಉದ್ದೇಶಗಳು ಒಂದೇ ಆಗಿವೆ. ಸಂಘ, ಸಂಸ್ಥೆಗಳು ಸಮಾಜಮುಖೀ ಕೆಲಸ ಮಾಡಿದರೆ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದರು. ರೋಟರಿ ಕಾರ್ಯದರ್ಶಿ ಶಿರಹಟ್ಟಿ ಮತ್ತು ಪುರಸಭೆಯ ಆರೋಗ್ಯಾ ಧಿಕಾರಿ ಹರೀಶ್‌ ಮಾತನಾಡಿದರು.  ಅಧ್ಯಕ್ಷತೆ ವಹಿಸಿದ್ದ ಕಡೂರು ಚರ್ಚ್‌ ಗುರುಗಳಾದ ರಾಜೇಶ್‌ ಮಾತನಾಡಿ, ಸಿಎಂಎಸ್‌ ಎಸ್‌ಎಸ್‌ ಸಂಸ್ಥೆಯು ಕಳೆದ 41 ವರ್ಷಗಳಿಂದ ಬಡವರ, ವಿಕಲಚೇತನರ, ದುರ್ಬಲರ ಪರವಾಗಿ ನೂರಾರು ಯೋಜನೆ ರೂಪಿಸಿ ಅವರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಸೌರಶಕ್ತಿ ಬಳಕೆಯನ್ನು ಮಾಡಿಕೊಂಡು ಅದರಿಂದಲೂ ದುಡಿಮೆ ಮಾಡಿಕೊಳ್ಳುವುದರ ಬಗ್ಗೆ ಮಾಹಿತಿ ನೀಡಿ ಸೋಲಾರ್‌ ದೀಪವನ್ನು ನೀಡಿರುವುದನ್ನು ತಾವುಗಳು ಸದುಪಯೋಗ ಮಾಡಿಕೊಂಡರೆ ಮಾತ್ರ ಅದಕ್ಕೆ ಬೆಲೆ ಸಿಗಲಿದೆ ಎಂದರು.

ಕಡೂರು ಸಿಡಿಪಿಒ ಆಶಾ ಮಾತನಾಡಿ, ಇಲಾಖೆ ಮಹಿಳೆಯರಿಗೆ ಅನೇಕ ಯೋಜನೆ ನೀಡುತ್ತಿದ್ದು, ಇದರ ಬಗ್ಗೆ ಮಾಹಿತಿ ಪಡೆಯಿರಿ ಎಂಬ ಸಲಹೆ ನೀಡಿದರು. ಸಂಸ್ಥೆಯ ಸಂಯೋಜಕಿ ಕಲ್ಪನಾ, ನೇತ್ರಾ ಮತ್ತು ಶೋಭಾ ಹಾಗೂ ಒಕ್ಕೂಟಗಳ ನೂರಾರು ಮಹಿಳೆಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next