Advertisement

ಕಡೂರು ಹೈವೆ ಶಾಲಾ ಅಂಗಳದಲ್ಲಿ ಕೃತಕ ತಾರಾಲಯ

03:46 PM Jan 08, 2020 | Naveen |

ಕಡೂರು: ಮಕ್ಕಳಿಗೆ ಖಗೋಳ ವಿಜ್ಞಾನದ ಬಗ್ಗೆ ಅರಿವು ಮೂಡಿಸಲು ಬೆಂಗಳೂರಿನ ಕ್ರಿಪ್ಟ ಟೆಕ್ನಾಲಜಿಯಿಂದ ತಾರಾಲಯದ ಬಗ್ಗೆ ಮಾಹಿತಿ ನೀಡುತ್ತಿರುವುದು ಮಕ್ಕಳ ಕಲಿಕೆಗೆ ಪೂರಕವಾಗಿದೆ ಎಂದು ಪಟ್ಟಣದ ಹೈವೆ ಇಂಗ್ಲಿಷ್‌ ಶಾಲೆಯ ಕಾರ್ಯದರ್ಶಿ ಜತನ್‌ ಲಾಲ್‌ ಡಾಗಾ ತಿಳಿಸಿದರು.

Advertisement

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮಾನ್ಯತೆ ಪಡೆದ ಕ್ರಿಪ್ಟ ಟೆಕ್ನಾಲಜಿ ಸಂಸ್ಥೆಯ ಸಹಕಾರದೊಂದಿಗೆ ಮಂಗಳವಾರ ಏರ್ಪಡಿಸಿದ್ದ ಕೃತಕ ಬಾಹ್ಯಾಕಾಶ ವೀಕ್ಷಣೆಗೆ ಚಾಲನೆ ನೀಡಿ ಮಾತನಾಡಿದರು.

ನಮ್ಮ ಶಾಲೆಯಲ್ಲಿ ಇದೇ ಮೊದಲ ಬಾರಿಗೆ ಸಂಚಾರಿ ತಾರಾಲಯಕ್ಕೆ ಅವಕಾಶ ದೊರೆತಿದೆ. ಇದರಿಂದ ದೂರದ ಬೆಂಗಳೂರು, ಮಂಗಳೂರು(ಪಿಲಿಕುಳ)ಮಣಿಪಾಲ್‌ಗೆ ಹೋಗಿ ವೀಕ್ಷಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಮಕ್ಕಳು ಖಗೋಳ ವಿಜ್ಞಾನದ ಬಗ್ಗೆ ಪಠ್ಯದಲ್ಲಿ ಓದಿರುತ್ತಾರೆ. ಆದರೆ, ಖಗೋಳದಲ್ಲಿರುವ ನಕ್ಷತ್ರಗಳು, ಉಪಗ್ರಹ ಉಡಾವಣೆ, ಕಕ್ಷೆ, ಗ್ರಹಗಳು, ಚಂದ್ರಯಾನ, ಆರ್ಮಸ್ಟ್ರಾಂಗ್‌, ರಾಕೆಟ್‌ ಉಡಾಯಿಸುವುದು, ಅಂತರಿಕ್ಷದ ಜೊತೆಗೆ ಮನರಂಜನೆಗಾಗಿ ಡೈನೊಸಾರ್‌ ಲೋಕಕ್ಕೂ ಮಕ್ಕಳನ್ನು ಕರೆದೊಯ್ಯಲಾಯಿತು ಎಂದು ತಿಳಿಸಿದರು.

ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಕಾರ್ಯಾಚರಣೆಗಳನ್ನು ವೀಕ್ಷಿಸಲು ಸಂಚಾರಿ ತಾರಾಲಯ ಸಹಕಾರಿಯಾಗಿದೆ. ವಿಜ್ಞಾನದ ಹೊಸ ಆವಿಷ್ಕಾರಗಳ ಮೂಲಕ ಮಾನವ ನಭೋ ಮಂಡಲದ ವಿಸ್ಮಯ ಮತ್ತು ನಿಗೂಢತೆಗಳನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾನೆ.

Advertisement

ವಿಜ್ಞಾನದ ಅಚ್ಚರಿಗಳು ತಾರಾ ಮಂಡಲದ ಕೌತುಕಗಳನ್ನು ನೋಡಿ ತಿಳಿದುಕೊಳ್ಳಲು ಮತ್ತು ಪರಿಣಾಮಕಾರಿಯಾಗಿ ಅರ್ಥೈಸಿಕೊಳ್ಳಲು ಶಾಲಾ ಅಂಗಳದಲ್ಲಿ ತಾರಾಲಯ ನೆರವಾಗಿದೆ ಎಂದು ಹೇಳಿದರು.

4 ಪ್ರೊಜೆಕ್ಟರ್‌ ಸಿಸ್ಟಮ್‌ 30×30 ಸುತ್ತಳತೆ ಹೊಂದಿರುವ, 18 ಅಡಿ ಎತ್ತರ, 360 ಡಿಗ್ರಿಯಲ್ಲಿ ಗುಮ್ಮಟಾಕಾರದಲ್ಲಿದೆ. ಇದರೊಳಗೆ ಬೃಹತ್‌ ಪರದೆ ಇದ್ದು, ಒಮ್ಮೆಗೆ 70 ಮಕ್ಕಳಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಯಿತು. ಕಾಲ್ಪನಿಕ ಖಗೋಳ ಸೃಷ್ಟಿಸಿ ನೈಜ ರೂಪದಲ್ಲಿ ತೋರಿಸಬಹುದು ಎಂಬ ಮಾಹಿತಿಯನ್ನು ಸಂಸ್ಥೆಯ ನಾಯಕ್‌ ನೀಡಿದರು. ಶಾಲೆಯ ಪ್ರಾಚಾರ್ಯ ವಾಲ್ಟರ್‌ ಕಾಡೋಜ, ಮಂಜುನಾಥ್‌, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next