ಕಡೂರು: ಮಾನವೀಯ ಸಂಬಂಧಗಳು ಸಡಿಲಗೊಳ್ಳುತ್ತಿರುವ ಸಂದರ್ಭದಲ್ಲಿ ಅರಿವು, ಆದರ್ಶಗಳನ್ನು ಬೋಧಿಸುವುದರ ಮೂಲಕ ಜಗತ್ತಿಗೆ ಜಾಗೃತಿ ಉಂಟು ಮಾಡುವುದೇ ಗುರುವಿನ ನಿಜವಾದ ಧರ್ಮ ಎಂದು ಬಾಳೆಹೊನ್ನೂರು ರಂಭಾಪುರಿ ಡಾ| ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ತಾಲೂಕಿನ ಹುಲಿಕೆರೆ ದೊಡ್ಡಮಠದ ಜಾತ್ರಾ ಮೈದಾನದಲ್ಲಿ ಬುಧವಾರ ನೂತನ ಗುರುಗಳ ಪಟ್ಟಾಧಿಕಾರ ಮಹೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಅಂತರಂಗ ಬಹಿರಂಗ ಶುದ್ಧಿಗಾಗಿ ಶ್ರಮಿಸುವುದೇ ಎಲ್ಲ ಧರ್ಮಗಳ ಮೂಲ ಗುರಿಯಾಗಿದೆ. ವಿಶ್ವ ಬಂಧುತ್ವ ಸಾರಿದ ವೀರಶೈವ ಧರ್ಮ ಸಕಲ ಜೀವಾತ್ಮರಿಗೆ ಒಳಿತನ್ನೇ ಬಯಸುತ್ತಾ ಬಂದಿದೆ. ಆಸೆ ಆಮಿಷಗಳಿಲ್ಲದ ಜೀವನ ಶಾಂತಿ ನೆಮ್ಮದಿಗೆ ಮೂಲವಾಗಿದೆ. ಕರ್ತವ್ಯ, ಶಿಸ್ತು, ಶ್ರದ್ಧೆ, ನಿಷ್ಠೆ, ಛಲ ಮನುಷ್ಯನ ಉಜ್ವಲ ಬದುಕಿಗೆ ಅಡಿಪಾಯವಾಗಿರುತ್ತವೆ ಎಂದರು.
ಹುಲಿಕೆರೆ ದೊಡ್ಡಮಠದ ವಿರೂಪಾಕ್ಷ ಶಿವಾಚಾರ್ಯ ಸ್ವಾಮಿಗಳು ಸಕಲ ಸದ್ಭಕ್ತರ ಪ್ರೀತಿ ವಿಶ್ವಾಸಗಳನ್ನು ಗಳಿಸಿಕೊಂಡು ಶ್ರೀ ಮಠದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ತಮ್ಮ ಉತ್ತರಾಧಿಕಾರಿಯನ್ನು ಗುರುತಿಸಿ ಇಂದು ವಿದ್ಯುಕ್ತವಾಗಿ ಪಟ್ಟಾಧಿಕಾರ ಅನುಗ್ರಹಿಸಿರುವುದು ಅತ್ಯಂತ ಸಂತೋಷ ತಂದಿದೆ ಎಂದರು.
Related Articles
ನೂತನ ಶ್ರೀಳಿಗೆ ಪ್ರಾತಃಕಾಲದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಸಂಸ್ಕಾರ ಮಾಡಿ ಷಟ್ ಸ್ಥಲ ಬ್ರಹ್ಮೋಪದೇಶ ಮಾಡಿ ಗುರುತ್ವಾಧಿಕಾರ ಅನುಗ್ರಹಿಸಿದ್ದಾರೆ ಎಂದರು. ಶ್ರೀ ರಂಭಾಪುರಿ ಜಗದ್ಗುರುಗಳು ದಂಡ, ಕಮಂಡಲ ಸಮೇತ ಪಂಚ ಮುದ್ರೆಗಳನ್ನು ಕೊಟ್ಟು ಶ್ರೀ ಷ||ಬ್ರ|| ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಎಂಬ ನೂತನ ಅಭಿದಾನದಿಂದ ರೇಷ್ಮೆ ಶಾಲು ಫಲ ಪುಷ್ಪ ಸ್ಮರಣಿಕೆಯಿತ್ತು ಶುಭ ಹಾರೈಸಿದರು.
ಯಡಿಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಧರ್ಮ ಜಾಗೃತಿ ಸಮಾರಂಭ ಉದ್ಘಾಟಿಸಿ, ಗುರು-ಶಿಷ್ಯ ಪರಂಪರೆಯನ್ನು ಭಕ್ತರಿಗೆ ತಿಳಿಸಿದರು. ಹುಲಿಕೆರೆ ದೊಡ್ಡಮಠ ಪುತ್ರವರ್ಗದ ಮಠವಾಗಿದೆ. ಆದ್ದರಿಂದಲೇ ಅವರ ವಂಶಸ್ಥರಲ್ಲಿಯೇ ಗುರುಗಳನ್ನು ಆಯ್ಕೆ ಮಾಡುವ ಪದ್ಧತಿ ಬೆಳೆದು ಬಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ತಾವು ಶಾಸಕ ಎನ್ನುವುದಕ್ಕಿಂತ ಜನಸೇವಕ ಎಂದು ಕರೆಸಿಕೊಳ್ಳಲು ಇಷ್ಟಪಡುತ್ತೇನೆ. ವೀರಶೈವ ಮಠಗಳ ಕೊಡುಗೆ ಈ ನಾಡಿಗೆ ಅಪಾರವಾಗಿದೆ. ಹುಲಿಕೆರೆ ದೊಡ್ಡ ಮಠದ ಇತಿಹಾಸ ಪರಂಪರೆಯಿಂದ ಬಂದಿದೆ. ನೂತನ ಶ್ರೀಗಳಿಗೆ ಸಹಕಾರ ನೀಡಿ ಮಠದ ಭಕ್ತನಾಗಿ ಕಾರ್ಯನಿರ್ವಹಿಸುವೆ ಎಂದು ಭರವಸೆ ನೀಡಿದರು.
ಹುಲಿಕೆರೆ ಮಠದ ನೂತನ ಶ್ರೀಗಳಾದ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ತಮ್ಮ ಮೊದಲ ಧರ್ಮ ಸಂದೇಶದಲ್ಲಿ ಸಮಾಜದ ಆದರ್ಶ ಉಳಿಸಿ ಬೆಳೆಸಲು ಗುರು ಪೀಠಗಳ ಮಾರ್ಗದರ್ಶನದ ಅವಶ್ಯಕತೆಯಿದೆ ಎಂದರು.
ನೇತೃತ್ವ ವಹಿಸಿದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು, ವೀರಶೈವ ಧರ್ಮದಲ್ಲಿ ಗುರುವಿನ ಪಾತ್ರ ಬಹಳಷ್ಟು ಮಹತ್ವವಾದದ್ದು. ಶ್ರೀ ಮಠದ ಪರಂಪರೆ ಮತ್ತು ಪರಮಾಚಾರ್ಯರ ಆಶೀರ್ವಾದ ಬಲದಿಂದ ಎಲ್ಲಾ ಕಾರ್ಯಗಳು ವಿಜೃಂಭಣೆಯಿಂದ ಜರುಗಿದ್ದು ತಮಗೆ ಸಂತೋಷ ತಂದಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ. ಕಲ್ಕರುಡಪ್ಪ, ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ಎಂ. ಲೋಕೇಶ್, ಮಹಡಿ ಮನೆ ಸತೀಶ ಪ್ರಾಸ್ತಾವಿಕ ಮಾತನಾಡಿದರು. ಆಲ್ದೂರಿನ ಬಿ.ಬಿ.
ರೇಣುಕಾರ್ಯ ಉಪನ್ಯಾಸ ನೀಡಿದರು.
ಹುಣಸಘಟ್ಟ, ಬಿಳಕಿ, ಹೊನ್ನವಳ್ಳಿ, ಶಂಕರದೇವರಮಠ, ಕೆ.ಬಿದರೆ, ಬೀರೂರು, ತಾವರೆಕೆರೆ, ತರೀಕೆರೆ, ಹಣ್ಣೆ, ಬೇರುಗಂಡಿಮಠ,
ನಂದಿಪುರ, ಮಾದಿಹಳ್ಳಿ, ಫಲಹಾರಸ್ವಾಮಿ ಮಠ ಮತ್ತು ಕರಡಿಗವಿಮಠ ಶ್ರೀಗಳು ಉಪಸ್ಥಿತರಿದ್ದರು. ನೂತನ ಶ್ರೀಗಳ ಮಾತೃ-ಪಿತೃಗಳಾದ ಸದಾಶಿವಸ್ವಾಮಿ ಮತ್ತು ಜಯಮ್ಮ ದಂಪತಿಯನ್ನು ರಂಭಾಪುರಿ ಶ್ರೀಗಳು ತ್ಯಾಗ ಮಯಿಗಳೆಂದು ಬಣ್ಣಿಸಿ ಸನ್ಮಾನಿಸಿದರು. ನಿತ್ಯ ಪಿ. ಮತ್ತು ಎಸ್.ಕೃತಿ ಇವರಿಂದ ಭರತ ನಾಟ್ಯ ಜರುಗಿತು. ನಿವೃತ್ತ ಮುಖ್ಯ ಶಿಕ್ಷಕ ಎಸ್.ಎಂ. ಮಲ್ಲೇಶಪ್ಪ, ಶಿಕ್ಷಕ ಬಿ.ಜೆ. ಜಗದೀಶ ನಿರೂಪಿಸಿದರು. ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಮಾರಂಭವು ನಡೆದು ದಾಸೋಹ ಕಾರ್ಯವು ನೆರವೇರಿತು.