Advertisement

Kadri: ಕಾಯಕಲ್ಪ ನಿರೀಕ್ಷೆಯಲ್ಲಿ ಸಂಗೀತ ಕಾರಂಜಿ: ತೆರೆದಿದ್ದಕ್ಕಿಂತ ಮುಚ್ಚಿದ್ದೇ ಜಾಸ್ತಿ

02:49 PM Jun 07, 2023 | Team Udayavani |

ಮಹಾನಗರ: ಸುಮಾರು ಐದು ವರ್ಷಗಳ ಹಿಂದೆ ನಗರದ ಕದ್ರಿಯ ಜಿಂಕೆ ಪಾರ್ಕ್‌ನಲ್ಲಿ ನಿರ್ಮಾಣಗೊಂಡ ಕದ್ರಿ ಸಂಗೀತ ಕಾರಂಜಿ ಕಾಯಕಲ್ಪದ ನಿರೀಕ್ಷೆಯಲ್ಲಿದೆ. 2018ರಿಂದ ಈವರೆಗೆ ಕಾರಂಜಿ ಪ್ರವಾಸಿಗರಿಗೆ ತೆರೆದಿದ್ದಕ್ಕಿಂತ ಮುಚ್ಚಿದ್ದೇ ಜಾಸ್ತಿ !

Advertisement

ನಿರ್ವಹಣೆಯ ಕೊರತೆಯಿಂದ ಕಳೆದ ವರ್ಷದಿಂದೀಚೆಗೆ ಸಂಗೀತ ಕಾರಂಜಿ ಸೇವೆ ಸ್ಥಗಿತಗೊಳಿಸಿದ್ದು, ಅಲ್ಲಿರುವ ಪೈಪ್‌ಗ್ಳು ಸಹಿತ ಉಪಕರಣಗಳು ತುಕ್ಕು ಹಿಡಿಯಲು ಆರಂಭಿಸಿವೆ. 2018ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರು ಕಾರಂಜಿ ಉದ್ಘಾಟಿಸಿದ್ದು, ಇದೀಗ ಮತ್ತೆ ಕಾರಂಜಿ ಚಾಲೂ ಆಗಲು ಸರಕಾರ ದಿಂದ ಅನುದಾನ ನಿರೀಕ್ಷಿಸಲಾಗಿದೆ.

ಮೈಸೂರು ಬಳಿಕ ಮಂಗಳೂರಿನಲ್ಲಿ ದೊಡ್ಡ ಮಟ್ಟದ ಕಾರಂಜಿ ನಿರ್ಮಿಸಲಾಗಿದೆ. ಆರಂಭದಲ್ಲಿ ಪ್ರವಾಸಿಗರನ್ನು ಆಕರ್ಷಿಸಿತ್ತು. ಆದರೆ ಬಳಿಕ ಒಂದಲ್ಲೊಂದು ತಾಂತ್ರಿಕ ಕಾರಣದಿಂದಾಗಿ ಕೆಲವು ಅವಧಿ ಮುಚ್ಚ ಬೇಕಾದ ಪರಿಸ್ಥಿತಿ ಉಂಟಾಯಿತು. ಕಾರಂಜಿ ಶೋ ಸಹಿತ ಮೂಲ ಸೌಕರ್ಯಕ್ಕೆಂದು ಕೆಲವು ವರ್ಷಗಳ ಹಿಂದೆ ಟೆಂಡರ್‌ ಕರೆದರೂ ಅದನ್ನು ವಹಿಸಲು ಬಿಡ್ಡುದಾರರು ಮುಂದೆ ಬರಲಿಲ್ಲ. ಮತ್ತೂಂದೆಡೆ ಸಂಘ-ಸಂಸ್ಥೆಗಳ ಸಿಎಸ್‌ಆರ್‌ ಅನುದಾನದಲ್ಲಿ ಅಥವಾ ಮುಡಾ ಮುಖೇನ ಅಭಿವೃದ್ಧಿ ಮಾಡಲು ಮಾತುಕತೆ ನಡೆಸಿದರೂ ಅಂತಿಮ ಗೊಂಡಿಲ್ಲ. ಇದೇ ಕಾರಣಕ್ಕೆ ಸಂಗೀತ ಕಾರಂಜಿಯಲ್ಲಿ ನೀರು ಚಿಮ್ಮದೆ ಸುಮಾರು ಮೂರು ವರ್ಷಗಳಾದವು. ಕಾರಂಜಿ ಕೊಳದಲ್ಲಿ ಪೈಪ್‌ಲೈನ್‌ ಸುತ್ತಮುತ್ತ ಕೊಳಚೆ ತುಂಬಿಕೊಂಡಿದ್ದು, ಸೊಳ್ಳೆ ಉತ್ಪತ್ತಿ ತಾಣವಾಗಿದೆ.

ಇದಕ್ಕೆ ಹೊಂದಿಕೊಂಡಿರುವ ಪಾರ್ಕ್‌ಗೆ ಪ್ರತೀ ದಿನ ಸಾರ್ವಜ ನಿಕರು ಆಗಮಿಸುತ್ತಿದ್ದು, ಆ ಪ್ರದೇಶದಲ್ಲಿ ಸೊಳ್ಳೆ ಕಾಟ ಹೆಚ್ಚಾಗಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ ಎನ್ನುತ್ತಾರೆ ಸ್ಥಳೀಯರು.

5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ
ಕದ್ರಿ ಜಿಂಕೆ ಪಾರ್ಕ್‌ ಬಳಿ ಹಳೆ ಮೃಗಾಲಯದಲ್ಲಿ ಮುಡಾ ವತಿಯಿಂದ 5 ಕೋ. ರೂ. ವೆಚ್ಚದಲ್ಲಿ ಸಂಗೀತ ಕಾರಂಜಿ ನಿರ್ಮಿ ಸಲಾಗಿದ್ದು, 2018ರ ಜ. 7ರಂದು ಉದ್ಘಾಟಿಸಲಾಗಿತ್ತು. ಕಾಮಗಾರಿ ಪೂರ್ಣಗೊಂಡು 6 ತಿಂಗಳುಗಳ ಬಳಿಕ ಕಾರಂಜಿ ಉದ್ಘಾಟಿಸಲಾಗಿತ್ತು. ಅಂದಿನ ಶಾಸಕ ಜೆ.ಆರ್‌. ಲೋಬೋ ನೇತೃತ್ವದಲ್ಲಿ ಸಂಗೀತ ಕಾರಂಜಿ ತಲೆ ಎತ್ತಿತ್ತು. ಕಾಮಗಾರಿ ಯನ್ನು ಬೆಂಗಳೂರಿನ ಬಿಎನ್‌ಎ ಟೆಕ್ನಾಲಜಿ ಕಂಪೆನಿ ವಹಿಸಿತ್ತು. ಇಲ್ಲಿ ಬಣ್ಣದ ಕಾರಂಜಿ ಮಾತ್ರವಲ್ಲದೆ, ಲೇಸರ್‌ ಲೈಟ್‌ ತಂತ್ರಜ್ಞಾನ ವ್ಯವಸ್ಥೆಯನ್ನು ಬಳಸಲಾಗಿದೆ. ಸದ್ಯ ನಿರ್ವಹಣೆಯ ಕೊರತೆ ಯಿಂದಾಗಿ ಕಾರಂಜಿ ಪ್ರದರ್ಶನ ಸ್ಥಗಿತಗೊಂಡಿದೆ.

Advertisement

ಸಂಪನ್ಮೂಲ ಕ್ರೋಡೀಕರಣವೇ ಸವಾಲು
ಕದ್ರಿ ಸಂಗೀತ ಕಾರಂಜಿ ಚಾಲೂ ಆಗಲು ತಿಂಗಳಿಗೆ ಸುಮಾರು 70 ಸಾವಿರ ರೂ. ನಿರ್ವಹಣೆಯ ಖರ್ಚು ತಗಲುತ್ತದೆ. ಖರ್ಚಿನ ಶೇ.10ರಷ್ಟು ಕೂಡ ಆದಾಯ ಬರುತ್ತಿರಲಿಲ್ಲ. ತಿಂಗಳಿಗೆ ಸುಮಾರು 35,000 ರೂ. ನಷ್ಟು ವಿದ್ಯುತ್‌ ಬಿಲ್‌ ಬರುತ್ತಿದೆ. ಅದರಂತೆ ಟೆಕ್ನೀಶಿಯನ್‌, ಸಿಬಂದಿ ವರ್ಗದವರಿಗೆಂದು ತಿಂಗಳಿಗೆ ಒಟ್ಟಾರೆ ಸುಮಾರು 50 ಸಾವಿರ ರೂ. ಹಣ ನೀಡಬೇಕು. ಕೋವಿಡ್‌ಗೂ ಮುನ್ನ ವಾರದಲ್ಲಿ ಬೆರಳೆಣಿಕೆ ದಿನ ಮಾತ್ರ ಕಾರಂಜಿ ಶೋ ನಡೆಯುತ್ತಿತ್ತು. ಪ್ರತೀ ದಿನ ಕೇವಲ 5-7 ಮಂದಿ ವೀಕ್ಷಣೆಗೆ ಬರುತ್ತಿದ್ದರು. ಹೀಗಿದ್ದಾಗ ತಿಂಗಳಿಗೆ 5 ಸಾವಿರ ರೂ. ಕೂಡ ಆದಾಯ ಬರುತ್ತಿಲ್ಲ. ಅದನ್ನು ಸರಿದೂಗಿಸಿ ಪ್ರವಾಸಿಗರಿಗೆ ಆಕರ್ಷಿಸುವುದು ಇನ್ನೂ ಸವಾಲಾಗಿಯೇ ಇದೆ. ಇದೇ ಕಾರಣಕ್ಕೆ ಮುಂದಿನ ದಿನಗಳಲ್ಲಿ ಯಾವ ರೀತಿ ಕಾರಂಜಿ ನಡೆಸಬಹುದು ಎಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿತ್ತು. ಅಧಿಕಾರಿಗಳ ಪ್ರಕಾರ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಸೂಕ್ತ ಕ್ರಮ
ಕದ್ರಿ ಜಿಂಕೆ ಉದ್ಯಾನವನ ದಲ್ಲಿರುವ ಸಂಗೀತ ಕಾರಂಜಿ ಶೋ ಕೆಲವು ಸಮಯದಿಂದ ಸ್ಥಗಿತ ಗೊಂಡಿದೆ. ಮುಂದಿನ ದಿನಗ ಳಲ್ಲಿ ಇದನ್ನು ಚಾಲೂ ಮಾಡುವ ಉದ್ದೇಶಕ್ಕೆ ಸಂಬಂಧ ಪಟ್ಟ ಅಧಿ ಕಾರಿಗಳ ಜತೆ ಮಾತುಕತೆ ನಡೆಸಿ, ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ.
– ರವಿಕುಮಾರ್‌ ಎಂ.ಆರ್‌., ದ.ಕ. ಜಿಲ್ಲಾಧಿಕಾರಿ

- ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next