Advertisement
ಪಾರ್ಕ್‌ನಲ್ಲಿ ಮುರಿದ ಹಳೆಯ ಆಟಿಕೆಗಳನ್ನು ಸಂಪೂರ್ಣ ತೆಗೆದು ಹಾಕಿ ಹೊಸ ಫೈಬರ್ ಆಟಿಕೆಗಳನ್ನು ವಾರದೊಳಗೆ ಅಳವಡಿಸುವುದಾಗಿ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಕಳೆದ ತಿಂಗಳು ಹೇಳಿದ್ದರು. ಆದರೆ, ಒಂದು ತಿಂಗಳಾದರೂ ಕದ್ರಿ ಪಾರ್ಕ್ ನಲ್ಲಿ ಹೊಸ ಆಟಿಕೆ ಅಳವಡಿಕೆಯಾಗಿಲ್ಲ. ಇದರಿಂದಾಗಿ ವಾರಾಂತ್ಯಗಳಂದು ಮಕ್ಕಳು ಪಾರ್ಕ್‌ನಲ್ಲಿರುವ ಮುರಿದು ಹೋದ ಆಟಿಕೆಗಳಲ್ಲಿಯೇ ಆಟವಾಡುವ ಅನಿವಾರ್ಯ ಒದಗಿದೆ. ಮೊನಚಾದ ಜಾರುಬಂಡಿ, ತುಂಡಾದ ಉಯ್ನಾಲೆಗಳಲ್ಲಿ ಆತಂಕದಿಂದಲೇ ಮಕ್ಕಳು ಆಡಬೇಕಾದ ಪರಿಸ್ಥಿತಿ ಇದ್ದು, ತುಂಡಾಗಿರುವುದು ತಿಳಿಯದೆ ಅಪಾಯಗಳು ಎದುರಾಗುವ ಸಾಧ್ಯತೆಯೂ ಸದ್ಯ ಪಾರ್ಕ್‌ನಲ್ಲಿದೆ.
ಪ್ರಸ್ತುತ ಪಾರ್ಕ್‌ನಲ್ಲಿ ಕಬ್ಬಿಣದ ಆಟಿಕೆಗಳಿವೆ. ಬಹುತೇಕ ಆಟಿಕೆಗಳು ಮುರಿದು ಹೋಗಿದ್ದು, ಮುರಿದ ಆಟಿಕೆಗಳ ಜಾಗದಲ್ಲಿ ಕಬ್ಬಿಣದ ಬದಲಾಗಿ 1.50 ಲಕ್ಷ ರೂ. ವೆಚ್ಚದಲ್ಲಿ ಹೊಸ ಫೈಬರ್ ಆಟಿಕೆಗಳನ್ನು ಅಳವಡಿಸಲು ತೋಟಗಾರಿಕಾ ಇಲಾಖೆಯು ಯೋಜನೆ ರೂಪಿಸಿದ್ದು, ಶೀಘ್ರ ಅಳವಡಿಕೆ ಮಾಡುವುದಾಗಿ ಹೇಳಿದ್ದರು. 14 ಹೊಸ ಫೈಬರ್ ಉಯ್ನಾಲೆ, 4 ಸೀಸ ಆಟಿಕೆ (ಎರಡೂ ಬದಿಯಲ್ಲಿ ಕುಳಿತು ಆಡುವ ಆಟದ ಸಾಧನ) ಮುರಿದು ಹೋದ ಜಾಗದಲ್ಲಿ ಅಳವಡಿಕೆಯಾಗಲಿದ್ದು, 1 ಮೆರಿ ಗೋ ರೌಂಡ್ (ವೃತ್ತಾಕಾರದಲ್ಲಿ ತಿರುಗುವ ಆಟಿಕೆ) ಮತ್ತು 1 ನೆಟ್ಟೆಡ್ ರೋಪ್ ಆಟಿಕೆಯನ್ನು ಹೊಸದಾಗಿ ಪರಿಚಯಿಸುವ ಉದ್ದೇಶವಿತ್ತು. ಇದೀಗ ಪಾರ್ಕ್‌ಗೆ ಹೊಸ ಆಟಿಕೆಗಳು ಬರುತ್ತವೆಂಬ ಖುಷಿಯಲ್ಲಿದ್ದ ಮಕ್ಕಳಿಗೆ ಇನ್ನೂ ಆಟಿಕೆಗಳು ಅಳವಡಿಕೆಯಾಗದಿರುವುದರಿಂದ ನಿರಾಸೆಯಾಗಿದೆ. ಹೊಸ ಆಟಿಕೆ ಅಳವಡಿಕೆ ಶೀಘ್ರ
ಕದ್ರಿ ಪಾರ್ಕ್ ನಲ್ಲಿ ಆಟಿಕೆಗಳ ಅಳವಡಿಕೆ ಸಂಬಂಧ ಎಲ್ಲ ಪ್ರಕ್ರಿಯೆಗಳು ಮುಗಿದಿವೆ. ಆದರೆ ಕಳೆದ ತಿಂಗಳು ಆಟಿಕೆ ಅಳವಡಿಸಬೇಕಿದ್ದರೂ ಕಾರಣಾಂತರಗಳಿಂದ ಸಾಧ್ಯವಾಗಿಲ್ಲ. ಶೀಘ್ರ ಹೊಸ ಆಟಿಕೆಗಳು ಅಳವಡಿಕೆಯಾಗಲಿವೆ.
-ಜಾನಕಿ, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕಿ