Advertisement

ನಿತ್ಯ ಕಾರ್ಯಕ್ರಮ, ತುಂಬಿದ ಕದಳಿ ಶ್ರೀ ಉಗ್ರಾಣ

11:40 PM May 06, 2019 | Sriram |

ಮಹಾನಗರ: ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಮೇ 2ರಿಂದ ನಿತ್ಯ ವಿವಿಧ ಕಾರ್ಯಕ್ರಮ ಗಳೊಂದಿಗೆ ಬ್ರಹ್ಮಕಲಶಾ ಭಿಷೇಕ ಅದ್ದೂರಿ ಯಿಂದ ನಡೆಯುತ್ತಿದೆ.

Advertisement

ದಿನನಿತ್ಯ ಸಾವಿರಾರು ಮಂದಿ ದೇವಸ್ಥಾನಕ್ಕೆ ಭೇಟಿ ನೀಡಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಪ್ರತಿನಿತ್ಯ ಬೆಳಗ್ಗೆ 7 ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳುತ್ತಿದ್ದು, ರಾತ್ರಿ 11 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ.

ಅನ್ನಛತ್ರದ ಎದುರಲ್ಲೇ 2 ಸಾವಿರ ಚದರ ಅಡಿ ವಿಸ್ತೀರ್ಣದ ಆಕರ್ಷಕ ಉಗ್ರಾಣವನ್ನು ನಿರ್ಮಿಸಲಾಗಿದ್ದು, ಬೃಹತ್‌ ಪ್ರಮಾಣದಲ್ಲಿ ಹಸುರು ಹೊರೆ ಕಾಣಿಕೆ ಬರುತ್ತಿದೆ. ಹೀಗೆ ಬಂದ ಅಕ್ಕಿ, ತರಕಾರಿ, ಹಣ್ಣು, ಸಂಬಾರ ಪದಾರ್ಥ, ಬೆಲ್ಲ, ಸಕ್ಕರೆ, ಪಾತ್ರೆಗಳ ರಾಶಿಯನ್ನು ಅಚ್ಚುಕಟ್ಟಾಗಿ ಜೋಡಿಸಲಾಗಿದ್ದು, ಕಣ್ಮನ ಸೆಳೆಯುತ್ತಿದೆ. ಇದನ್ನು ಕಣ್ತುಂಬಿಕೊಳ್ಳಲು ಭಕ್ತರು ಸರತಿ ಸಾಲಿನಲ್ಲಿ ತೆರಳುವ ದೃಶ್ಯ ಸಾಮಾನ್ಯವಾಗಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ದೇವ ಸ್ಥಾನಕ್ಕೆ ಹೊರೆಕಾಣಿಕೆಯಾಗಿ 200 ಕ್ವಿಂಟಾಲ್‌ ಅಕ್ಕಿ ಬಂದಿದೆ. ಉಳಿದಂತೆ ಸಾರ್ವಜನಿಕರು 700 ಕ್ವಿಂಟಾಲ್‌ಗಿಂತ ಅಧಿಕ ಅಕ್ಕಿಯನ್ನು ಸಮರ್ಪಿಸಿದ್ದಾರೆ. 250 ಕೆ.ಜಿ.ಗಿಂತ ಅಧಿಕ ಬೆಲ್ಲ, ಸುಮಾರು 60 ಗೋಣಿ ಅವಲಕ್ಕಿ, 100 ಕೆ.ಜಿ. ತುಪ್ಪ, 5 ಸಾವಿರಕ್ಕೂ ಅಧಿಕ ತೆಂಗಿನಕಾಯಿ, 200ಕ್ಕೂ ಅಧಿಕ ಬಾಳೆಗೊನೆೆ, ತೆಂಗಿನ ಎಣ್ಣೆ, ಗೋಧಿ, ಸಕ್ಕರೆ, ದಿವಸ ಧಾನ್ಯ, ವಿವಿಧ ಬಗೆಯ ಅಡುಗೆ ಪಾತ್ರೆಗಳು ಸಂಗ್ರಹಗೊಂಡಿವೆ. ಬೃಹತ್‌ ಸಂಖ್ಯೆಯಲ್ಲಿ ಸೌತೆಕಾಯಿ ಕಾಣಿಕೆಯಾಗಿ ಬಂದಿದ್ದು ಉಗ್ರಾಣದಲ್ಲಿ ಜೋಡಿಸಿಡಲಾಗಿದೆ. ಸ್ಥಳ ದಲ್ಲಿ ಸ್ವಯಂಸೇವಕರು ವಾಹನಗಳಲ್ಲಿ ಬಂದ ಸಾಮಗ್ರಿಗಳನ್ನು ತತ್‌ಕ್ಷಣ ತೆಗೆದು ಉಗ್ರಾಣದಲ್ಲಿ ವಿಂಗಡಿಸಿಡುತ್ತಿದ್ದಾರೆ.

ಅಚ್ಚುಕಟ್ಟಾದ ಪಾರ್ಕಿಂಗ್‌ ವ್ಯವಸ್ಥೆ
ಜನರ ವಾಹನ ನಿಲುಗಡೆಗಾಗಿ ದೇವಸ್ಥಾನದ ಸಮೀಪದಲ್ಲಿ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದೆ. ದ್ವಿಚಕ್ರ, ಕಾರು ಗಳಿಗೆ ಪ್ರತ್ಯೇಕ ವಾಹನ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ರಾಜಬೀದಿ ಯುದ್ದಕ್ಕೂ ಭಕ್ತರ ಅನುಕೂಲಕ್ಕೆ ಚಪ್ಪರ ನಿರ್ಮಾಣ ಮಾಡಲಾಗಿದೆ.

Advertisement

ಕಾರ್ಯಕರ್ತರ ನಿರಂತರ ಶ್ರಮ
ಕ್ಷೇತ್ರದಲ್ಲಿ ಅನ್ನದಾನ ಸೇವೆ, ಪ್ರಸಾದ ವಿತರಣೆ, ಪಾರ್ಕಿಂಗ್‌ ವ್ಯವಸ್ಥೆ, ಸೇವಾ ಕೌಂಟರ್‌ ಸಹಿತ ವಿವಿಧೆಡೆ ದೇವಸ್ಥಾನದ ಆಸುಪಾಸಿನ ಯುವಕ, ಯುವತಿಯರು ಸಹಿತ ನೂರಾರು ಸಂಖ್ಯೆಯಲ್ಲಿ ಕಾರ್ಯ ಕರ್ತರು ನಿತ್ಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ.

ಪರಿಶುದ್ಧ ನೀರು ಬಳಕೆ
ಕದ್ರಿ ಕ್ಷೇತ್ರದ ಉತ್ತರ ದಿಕ್ಕಿನ ಸುಮಾರು 600 ಮೀಟರ್‌ ದೂರ ದಲ್ಲಿರುವ ಮುಂಡಾಣದಿಂದ ಪರಿ ಶುದ್ಧ ನೀರನ್ನು ಪಾಕಶಾಲೆಗೆ ಬಳಕೆ ಮಾಡಲಾಗುತ್ತಿದೆ. ಇದ ಕ್ಕಾಗಿ ಮಾಜಿ ಮೇಯರ್‌ ದಿವಾಕರ್‌ ಅವರ ಮಾರ್ಗದರ್ಶನದಂತೆ ಕಾರ್ಪೊರೇಟರ್‌ ಪ್ರಕಾಶ್‌ ಸಾಲ್ಯಾನ್‌, ಡಾ| ಪ್ರವೀಣ್‌ ಮುಂಡಾಣ ಮತ್ತಿತರ ತಂಡ ಇದಕ್ಕೆ ಪೈಪ್‌ ಜೋಡಿಸಲಾಗಿತ್ತು. ಸುಮಾರು 600 ಮೀಟರ್‌ ಪೈಪನ್ನು ಏರ್‌ಟೆಲ್‌ ಟೆಲಿಫೋನ್‌ ಸಂಸ್ಥೆ ನೀಡಿದೆ. ಮೇ 10ರಂದು ಶ್ರೀ ಕ್ಷೇತ್ರದಲ್ಲಿ ನಡೆಯುವ ಮಹಾದಂಡ ರುದ್ರಾಭಿಷೇಕಕ್ಕೆ ಶ್ರೀಕ್ಷೇತ್ರದ ಪೂರ್ವಕ್ಕಿರುವ ಗೋಮುಖ ಗಂಗಾ ತೀರ್ಥವನ್ನು ಬಳಸಲಾಗುತ್ತಿದೆ. 2006ರ ಬ್ರಹ್ಮಕಲಶೋತ್ಸವ ಸಂದರ್ಭ ಇದೇ ಮಾದರಿಯಲ್ಲಿ ದಂಡರುದ್ರಾಭಿಷೇಕ ನೆರವೇರಿಸಲಾಗಿತ್ತು.

ಇಂದಿನ ಕಾರ್ಯಕ್ರಮ
ಕದ್ರಿ ಬ್ರಹ್ಮಕಲಶದ ಅಂಗವಾಗಿ ಮೇ 7ರಂದು ವೈದಿಕ, ಧಾರ್ಮಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ಸಂಜೆ 6ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ನಿಟ್ಟೆ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ| ಎನ್‌. ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದು, ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮೂಡುಬಿದಿರೆ ಆಶೀರ್ವಚನ ನೀಡಲಿದ್ದು, ಆದಿ ಚುಂಚನಗಿರಿ ಶಾಖಾ ಮಠದ ಕಾವೂರಿನ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಉಪಸ್ಥಿತರಿರುವರು. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ. ಇದೇ ವೇಳೆ ಹಲವು ಸಾಧಕರನ್ನು ಸಮ್ಮಾನಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸನಾತನ ನಾಟ್ಯಾಲಯದ ವಿದುಷಿ ಶಾರದಾಮಣಿ ಶೇಖರ್‌ ಅವರ ಶಿಷ್ಯರಿಂದ “ನೃತ್ಯ-ಸತ್ಯನಾಪುರ ಸಿರಿ’ ಕಾರ್ಯಕ್ರಮ, ರಾತ್ರಿ 8ರಿಂದ ಅಶೋಕ ಪೊಳಲಿ ತಂಡದವರಿಂದ ವೈವಿಧ್ಯಮಯ ಪ್ರದರ್ಶನ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next