ಉಡುಪಿ: ಯಾಗ ಮಾಡಿ ಅಗ್ನಿಯ ಮೂಲಕ ದೇವರನ್ನು ಆರಾಧಿಸಿದರೆ ಭಕ್ತರ ಇಷ್ಟಾರ್ಥಗಳನ್ನು ಕೂಡಲೇ ಅನುಗ್ರಹಿಸುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿದೆ. ಕಡಿಯಾಳಿ ದೇವಸ್ಥಾನ ಈಗ ಅತ್ಯಂತ ವೈಭವದ ಸಾನ್ನಿಧ್ಯ ಹೊಂದಿದೆ. ಇಲ್ಲಿಯ ದಾರುಶಿಲ್ಪಕ್ಕೆ ಭಕ್ತರು ಮಾರು ಹೋಗುತ್ತಿದ್ದಾರೆ. ಇದು ರಾಜ್ಯದಲ್ಲೇ ಅತ್ಯಂತ ಪವಿತ್ರ ಪ್ರವಾಸಿ ತಾಣವಾಗಿ ಮೂಡಿಬರಲಿ. ಉಡುಪಿ ಶ್ರೀಕೃಷ್ಣನಿಗೂ ಕಡಿಯಾಳಿಯ ಅಮ್ಮನಿಗೂ ಅವಿನಾಭಾವ ಸಂಬಂಧ ಇದ್ದು, ಅಲ್ಲಿಗೆ ಬಂದ ಭಕ್ತರು ಇಲ್ಲಿಗೂ ಬಂದು ದೇವಿಯ ದರ್ಶನ ಮಾಡಿ ಕೃತಾರ್ಥರಾಗುತ್ತಾರೆ ಎಂದು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಹೇಳಿದರು.
ಅವರು ಜ. 20ರಂದು ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಧ್ವಜಸ್ತಂಭ (ಕೊಡಿ ಮರ)ದ ಪಾದುಕಾ ಶಿಲಾನ್ಯಾಸ ಮತ್ತು ದೇಗುಲದಲ್ಲಿ ನಿರ್ಮಿಸಲಾದ ವೇದವ್ಯಾಸ ಯಾಗಶಾಲೆಯನ್ನು ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು.
ವ್ಯಾಘ್ರ ಪಿಲಿಚಾಮುಂಡಿ ಮತ್ತು ಇತರ ಪರಿವಾರ ದೈವಗಳ ಜೀರ್ಣೋ ದ್ಧಾರ ಕಾಮಗಾರಿ ಶೀಘ್ರ ದಲ್ಲೇ ನಡೆಸ ಲಾಗುವುದು. ಧ್ವಜಸ್ತಂಭಕ್ಕೆ ಸಂಪೂರ್ಣ ತಾಮ್ರ ಮತ್ತು ಹಿತ್ತಾಳೆಯನ್ನು ಹೊದಿಸಿ ವಿಜೃಂಭಣೆಯಿಂದ ಪ್ರತಿಷ್ಠೆ ನಡೆಸ ಲಾಗುವುದು. ಮಾ. 24ರಂದು ಬೆಳಗ್ಗೆ 7ಕ್ಕೆ ಧ್ವಜಸ್ತಂಭ ಪ್ರತಿಷ್ಠೆ, ಕಲಶಾಭಿಷೇಕ, 9.45ರ ವೃಷಭ ಲಗ್ನ ಸುಮುಹೂರ್ತದಲ್ಲಿ ಶ್ರೀದೇವಿಗೆ ಬ್ರಹ್ಮಕಲಶಾಭಿಷೇಕ, ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5ಕ್ಕೆ ಹಾಲಿಟ್ಟು ಸೇವೆ, ಧೂಳೀಮಂಡಲ ಸೇವೆ, ಸಣ್ಣ ರಂಗಪೂಜೆ ನಡೆಯಲಿದೆ ಎಂದು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಡಾ| ಕಟ್ಟೆ ರವಿರಾಜ ವಿ. ಆಚಾರ್ಯ ತಿಳಿಸಿದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀನಾಗೇಶ ಹೆಗ್ಡೆ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಉಪಾಧ್ಯಕ್ಷರಾದ ಭಾಸ್ಕರ ಶೇರಿಗಾರ್, ರಾಮಚಂದ್ರ ಸನಿಲ್, ಪದ್ಮಾ ರತ್ನಾಕರ, ಪ್ರದಾನ ಕಾರ್ಯದರ್ಶಿ ನಿತ್ಯಾನಂದ ಕಾಮತ್, ಕೋಶಾಧಿಕಾರಿ ಸತೀಶ್ ಕುಲಾಲ್, ಎಂಜಿನಿಯರ್ ರಂಜನ್ ಕೆ., ಅರ್ಚಕ ರತ್ನಾಕರ ಉಪಾಧ್ಯ, ಧ್ವಜಸ್ಥಂಭ
ಪೀಠದ ದಾನಿ ಸುಭಾಶ್ಚಂದ್ರ ಹೆಗ್ಡೆ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಮಂಜುನಾಥ ಹೆಬ್ಟಾರ್, ನಾಗರಾಜ ಶೆಟ್ಟಿ, ಕಿಶೋರ ಸಾಲ್ಯಾನ್, ಗಣೇಶ್ ನಾಯ್ಕ, ಸಂಧ್ಯಾ ಪ್ರಭು, ಶಶಿಕಲಾ ಭರತ್, ರಮೇಶ್ ಶೇರಿಗಾರ್, ದೇವಸ್ಥಾನದ ಅಧಿಕಾರಿ ಗಂಗಾಧರ ಹೆಗ್ಡೆ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿಯ ಪ್ರದಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ಸ್ವಾಗತಿಸಿ, ವಂದಿಸಿದರು.
ಅತೀ ಎತ್ತರದ ಕೊಡಿಮರ
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಳ್ಪ ಗ್ರಾಮದಲ್ಲಿ ಈ ಕೊಡಿ ಮರವನ್ನು ಆಯ್ಕೆ ಮಾಡಿ ತರಲಾಗಿತ್ತು. 586 ಲೀ. ಸಂಪೂರ್ಣ ಸಾವಯವ ಎಳ್ಳೆಣ್ಣೆಯಲ್ಲಿ ಕೊಡಿಮರವನ್ನು 4 ತಿಂಗಳು ತೈಲಾಧಿವಾಸದಲ್ಲಿ ಇರಿಸಲಾಗಿತ್ತು. ಸುಮಾರು 65 ಅಡಿ ಎತ್ತರದ ಈ ಕೊಡಿಮರ ಉಡುಪಿ ಜಿಲ್ಲೆಯಲ್ಲೇ ಅತ್ಯಂತ ಎತ್ತರದ್ದು ಎನ್ನಲಾಗಿದೆ. ಪಾದುಕೆ ಶಿಲಾನ್ಯಾಸ ನಡೆಯುತ್ತಿದ್ದಂತೆ ಆಗಸದಲ್ಲಿ ಮೂರು ಪ್ರದಕ್ಷಿಣೆ ಹಾಕಿದ್ದು, ನೆರೆದ ಭಕ್ತಜನ ಪುಳಕಿತರಾದರು.