Advertisement

ಕಡೆಕಾರು,ಅಂಬಲಪಾಡಿ: ಮುಗಿಯದ ನೀರಿನ ಬವಣೆ

06:15 AM Mar 26, 2018 | |

ಮಲ್ಪೆ: ಬೇಸಗೆ ತೀವ್ರ ವಾಗುತ್ತಿದ್ದಂತೆ ಹಲವು ಭಾಗಗಳಲ್ಲಿ ಕುಡಿವ ನೀರಿನ ಸಮಸ್ಯೆ ತೀವ್ರವಾಗಿದೆ. ಕಡೆಕಾರು,ಅಂಬಲಪಾಡಿ ಗ್ರಾ.ಪಂ.ವ್ಯಾಪ್ತಿಯ ಕಿದಿಯೂರು ಸಂಕೇಶ,ದಡ್ಡಿ,ಕಿದಿಯೂರು ಗರೋಡಿ ರಸ್ತೆ,ಕಡೆಕಾರು ಕೊಳ, ಕುತ್ಪಾಡಿ ಕೋಟಿ ಚೆನ್ನಯ ರಸ್ತೆ,ಪಡುಕರೆ ಭಾಗ ಉಪ್ಪು ನೀರಿನ ಪ್ರದೇಶವಾದ್ದರಿಂದ ಇಲ್ಲಿ ಬೇಸಗೆಯಲ್ಲಿ ಕುಡಿವ ನೀರಿನ ಸಮಸ್ಯೆ ಇದ್ದು,ಈ ಬಾರಿಯೂ ಇದು ಮುಂದುವರಿದಿದೆ.

Advertisement

ಜನವರಿಯಿಂದಲೇ ನೀರಿಲ್ಲ  
ಹೊಳೆ ತೀರದ ಸಂಕೇಶ, ದಡ್ಡಿ ಭಾಗದಲ್ಲಿ  ಕುಡಿಯುವ ನೀರಿನ ಸಮಸ್ಯೆ ಜನವರಿಯಲ್ಲೇ ಆರಂಭವಾಗಿದೆ. ಈ ಭಾಗದ ನಳ್ಳಿಯಲ್ಲಿ ಎರಡು ದಿನಕ್ಕೊಮ್ಮೆ ಅರ್ಧ ಗಂಟೆ ಮಾತ್ರ ನೀರು ಬರುತ್ತಿದ್ದು, ಹಾಗಾಗಿ ಜನರು ಹಣಕೊಟ್ಟು ಖಾಸಗಿ ಟ್ಯಾಂಕರ್‌ಗಳ ಮೂಲಕ ನೀರು ತರಿಸಿ ಕೊಳ್ಳುತ್ತಿದ್ದಾರೆ. ಕಿದಿಯೂರು ಕುದ್ರುಕರೆ ಶಾಲೆಯ ಬಳಿ ಮೂರು ವರ್ಷದ ಹಿಂದೆ ಭಾರೀ ವೆಚ್ಚದಲ್ಲಿ ನಿರ್ಮಿಸಲಾದ ಓವರ್‌ ಹೆಡ್‌ ಟ್ಯಾಂಕ್‌ ಉಪಯೋಗವಾಗುತ್ತಿಲ್ಲ. ನೀರಿನ ಪ್ರಶ್ಶರ್‌ ಇಲ್ಲದಿರುವುದರಿಂದ ನೀರು ಟ್ಯಾಂಕ್‌ ಮೇಲೆ  ಏರಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

ಕಲ್ಯಾಣಪುರದಲ್ಲೂ  ಸಮಸ್ಯೆಕಲ್ಯಾಣಪುರ ಗ್ರಾ.ಪಂ. ವ್ಯಾಪ್ತಿಯ ಬಹುತೇಕ ಭಾಗಗಳು ಸುತ್ತಲೂ ನೀರಿದ್ದರೂ ಉಪ್ಪು ನೀರಿನಿಂದಾಗಿ ಇಲ್ಲಿನ ಕೆಲವು ಪ್ರದೇಶದ ಜನರಿಗೆ ಪ್ರತಿ ವರ್ಷ ಕುಡಿಯುವ ನೀರಿನ ಸಮಸ್ಯೆ ತಪ್ಪಿದ್ದಲ್ಲ. ಈ ವರ್ಷ ಟಾಸ್ಕ್ಪೋರ್ಸ್‌ ನಿಧಿಯಿಂದ 40 ಲ.ರೂ. ವೆಚ್ಚದಲ್ಲಿ ಕಲ್ಯಾಣಪುರ ಗ್ರಾಮ ಎಡಬೆಟ್ಟುವಿನಲ್ಲಿ, ಕೆಳ ನೇಜಾರಿನಲ್ಲಿ ತಲಾ ಒಂದು ತೆರೆದ ಬಾವಿಯನ್ನು ನಿರ್ಮಿಸಲಾಗಿದೆ. ನೇಜಾರು ರಾಜೀವ ನಗರದಲ್ಲಿ ನೀರಿನ ಸಂಪ್‌ ಕಾಮಗಾರಿ ಪೂರ್ಣಗೊಂಡಿದ್ದು ಪೈಪ್‌ ಜೋಡಣೆ ಕೆಲಸ ಬಾಕಿ ಇದೆ. ಕೆಮ್ಮಣ್ಣು ಗ್ರಾ.ಪಂ. ವ್ಯಾಪ್ತಿಯ ಬಾಳಿಗರ ಕುದ್ರುವಿನ  50 ಮನೆಗಳಿಗೆ ವರ್ಷವಿಡೀ ಕುಡಿಯುವ ನೀರಿಗೆ ತಾತ್ವಾರ. ವರ್ಷವಿಡೀ ಅವರು ಪಂಚಾಯತ್‌ ನೀರನ್ನೇ ಅವಲಂಬಿಸಿದ್ದಾರೆ. 
 
ನೀರಿನ ದುರ್ಬಳಕೆ
ಹೆಚ್ಚಿನ ಕಡೆಗಳಲ್ಲಿ ಕೆಲವರು ಕುಡಿಯುವ ನೀರಿನ ದುರ್ಬಳಕೆ ಮಾಡುತ್ತಿರುವುದರಿಂದ ನೀರಿನ ಅಭಾವ ಸೃಷ್ಟಿಸುತ್ತಾರೆ ಎಂದು
ಪಂಚಾಯತ್‌ ಅಧಿಕಾರಿಗಳು ಹೇಳಿದ್ದಾರೆ. ನಲ್ಲಿ ಜೋಡಣೆ ಮಾಡಿದ ಕೆಲವು ಮನೆಗಳ ಮಂದಿ ತೋಟಗಳಿಗೂ
ಬಳಸಿಕೊಳ್ಳುವುದು ಕಂಡುಬರುತ್ತಿದೆ. ಅಂತವರಿಗೆ ದಂಡ ವಿಧಿಸಲಾಗುತ್ತಿದೆ.

ಬಹುಗ್ರಾಮ ಕುಡಿಯುವ 
ನೀರಿನ ಯೋಜನೆ

ಗ್ರಾಮದಲ್ಲಿ ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕೆ ರಾಜ್ಯ ಸರಕಾರದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕಲ್ಯಾಣಪುರ, ಕೆಮ್ಮಣ್ಣು ಪಡುತೋನ್ಸೆ, ತೆಂಕನಿಡಿಯೂರು, ಬಡಾನಿಡಿಯೂರು, ಉಪ್ಪೂರು, ಹಾವಂಜೆ ಗ್ರಾಮಗಳನ್ನು ಸೇರಿಸಿ ಒಟ್ಟು 7 ಕೋಟಿ ರೂಪಾಯಿ ಈ ಯೋಜನೆಯ ಸಿದ್ದಪಡಿಸಲಾಗಿದ್ದು ಈಗಾಗಲೇ ಅನುಮೋದನೆ ದೊರಕಿದೆ. ಲೈನ್‌ ಎಸ್ಟಿಮೇಟ್‌ ಆಗಿದ್ದು ಅನುದಾನ ಬಿಡುಗಡೆಯ ಹಂತದಲ್ಲಿದೆ.

ಶಾಶ್ವತ ಪರಿಹಾರ
ಹೊಳೆತೀರದ ಒಂದೆರಡು ಪ್ರದೇಶ ಗಳಲ್ಲಿ ಬಿಟ್ಟರೆ ಉಳಿದಡೆ ನೀರಿನ ಸಮಸ್ಯೆ ಕಡಿಮೆ. ಬಹುಗ್ರಾಮ ಕುಡಿಯುವ ಯೋಜನೆಯಡಿ ಉಪ್ಪೂರು ಹಾವಂಜೆ ಮಧ್ಯೆ ಮಡಿಸಾಲು ಹೊಳೆಗೆ ಡ್ಯಾಂ ಕಟ್ಟಿ 6 ಗ್ರಾಮಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲಾಗುತ್ತಿದೆ. ಈಗಾಗಲೇ ಲೈನ್‌ ಎಸ್ಟಿಮೇಟ್‌ ಆಗಿದ್ದು, ಅನುದಾನ ಬಿಡುಗಡೆಯಾದ ಬಳಿಕ ಟೆಂಡರ್‌ ಕರೆದು ಕಾಮಗಾರಿ ಆರಂಭಗೊಳ್ಳಲಿದೆ. 
-ಜನಾರ್ದನ ತೋನ್ಸೆ,
 ಜಿ.ಪಂ. ಸದಸ್ಯರು

Advertisement

ನೀರಿನ ಒತ್ತಡ ಕಡಿಮೆಯಾಗಿ ಸಮಸ್ಯೆ
ಕಿದಿಯೂರು ಸಂಕೇಶ, ದಡ್ಡಿ ಬಳಿ ನೀರಿನ ಸಮಸ್ಯೆ ಇದೆ. ಈಗ ಎರಡು ದಿನಕ್ಕೆ 4 ಗಂಟೆ ನೀರು ಬಿಡಲಾಗುತ್ತಿದೆ. ಕೊನೆಯ ಭಾಗಕ್ಕೆ ತಲುಪುವಾಗ ನೀರಿನ ಒತ್ತಡ ಕಡಿಮೆಯಾಗಿ ಸಮಸ್ಯೆಯಾಗುತ್ತಿದೆ. ಪಂ. ವತಿಯಿಂದ 25ಸಾವಿರ ಲೀ. ಸಂಪ್‌ ನಿರ್ಮಿಸಲು 5 ಲಕ್ಷ ರೂ. ಅನುದಾನ ಒದಗಿಸುವಂತೆ  ಪ್ರಸ್ತಾವನೆ ಸಲ್ಲಿಸಲಾಗಿದೆ.
– ವಸಂತಿ,  ಪಿಡಿಒ, ಅಂಬಲಪಾಡಿ ಗ್ರಾ.ಪಂ.

ಬೇಸಗೆಯ ಆರಂಭದಲ್ಲಿದ್ದೇವೆ.  ಹಲವು ಊರುಗಳಲ್ಲಿ  ಕುಡಿಯುವ ನೀರಿನ ಕೊರತೆ ಬಾಧಿಸತೊಡಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತಗಳಿಗೆ ಪರಿಹಾರ ಕ್ರಮ ಕೈಗೊಳ್ಳಲು ಅನುಕೂಲವಾಗಲೆಂಬುದು ಈ ಸರಣಿಯ ಆಶಯ. ನಿಮ್ಮ ಭಾಗದಲ್ಲಿ ನೀರಿನ ಸಮಸ್ಯೆ ಇದ್ದರೆ ನಮಗೆ ತಿಳಿಸಬಹುದು.ವಾಟ್ಸಾಪ್‌ ನಂಬರ್‌  9148594259

– ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next