Advertisement

ಮೀನುಗಾರರ ರಕ್ಷಣೆ, ನೆರವಿಗೆ “ಕಡಲು ಆ್ಯಪ್‌’

09:55 PM Nov 19, 2020 | mahesh |

ಉಡುಪಿ: ಮುಂಬಯಿಯಲ್ಲಿ ನಡೆದ ದಾಳಿ ಬಳಿಕ ಸಮುದ್ರದ ಮೂಲಕವೂ ದೇಶದ ಭದ್ರತೆಗೆ ಅಪಾಯ ವಿರುವುದು ಗೊತ್ತೇ ಇದೆ. ಈ ಬಗ್ಗೆ ಹೆಚ್ಚಿನ ನಿಗಾ ವಹಿಸುವ ಸಲುವಾಗಿ ಹಾಗೂ ಚಂಡಮಾರುತ, ತ್ಸುನಾಮಿಯಂತಹ ಪ್ರಾಕೃತಿಕ ವಿಪತ್ತು ಸಂಭವಿಸಿದಾಗ ಸಮುದ್ರದಲ್ಲಿರುವ ಮೀನುಗಾರಿಕಾ ದೋಣಿಗಳು, ಮೀನುಗಾರರ ಬಗ್ಗೆ ರಕ್ಷಣ ಕಾರ್ಯಕ್ಕೆ ಅನುಕೂಲವಾಗಲು ಮೀನುಗಾರಿಕಾ ಇಲಾಖೆ ಮತ್ತು ಕರಾವಳಿ ಕಾವಲು ಪೊಲೀಸ್‌ ಇಲಾಖೆಯು “ಕಡಲು ಆ್ಯಪ್‌’ ಅಭಿವೃದ್ಧಿಪಡಿಸಿದೆ. ಇದರ ಮೂಲಕ ಮೀನುಗಾರರು ಮತ್ತು ಮೀನುಗಾರಿಕಾ ದೋಣಿಗಳ ನಿಖರ ಮಾಹಿತಿ ಪಡೆಯುವುದು ಮಾತ್ರವಲ್ಲ, ದೇಶದ ಭದ್ರತೆಯ ದೃಷ್ಟಿಯಿಂದಲೂ ಇದು ಪೂರಕವಾಗಿದೆ.

Advertisement

ನೋಂದಣಿ ಅಗತ್ಯ
ಯಾವುದೇ ಮೀನುಗಾರರು ಸಮುದ್ರಕ್ಕೆ ಹೋಗುವ ಮೊದಲು ಅವರ ದೋಣಿಯ ನೋಂದಣಿ ಸಂಖ್ಯೆ, ಮೀನು ಗಾರರ ಸಂಖ್ಯೆ, ಹೆಸರು, ಆಧಾರ್‌ ನಂಬರ್‌ಗಳನ್ನು ಈ ಆ್ಯಪ್‌ ಮೂಲಕ ನೋಂದಾಯಿಸಬೇಕು. ಇದರಿಂದ ಆ ದಿನ ಸಮುದ್ರದಲ್ಲಿ ಎಷ್ಟು ಮಂದಿ ಮೀನುಗಾರರು ಹಾಗೂ ದೋಣಿಗಳಿವೆ ಎಂಬುದು ನಿಖರವಾಗಿ ತಿಳಿಯಲಿದೆ. ಅದೇ ರೀತಿ ಮೀನುಗಾರಿಕೆಯಿಂದ ವಾಪಸಾಗುವಾಗಲೂ ಎಕ್ಸಿಟ್‌ ಎಂಟ್ರಿ ಮಾಡಬೇಕು. ಕರಾವಳಿ ಕಾವಲು ಪೊಲೀಸರು ತಪಾಸಣೆಯ ವೇಳೆ ಈ ಆ್ಯಪ್‌ನಲ್ಲಿ ದಾಖಲಿಸಿರುವ ಮಾಹಿತಿ ಪರಿಶೀಲನೆಗೆ ಸಹಾಯಕವಾಗಲಿದೆ. ದೋಣಿಯ ಸಂಖ್ಯೆ ನಮೂದಿಸಿದರೆ, ದೋಣಿ ಮತ್ತು ಅದರಲ್ಲಿರುವವರ ಸಂಪೂರ್ಣ ಮಾಹಿತಿ ಸಿಗುತ್ತದೆ.

ಹವಾಮಾನ ಮಾಹಿತಿಯೂ ಲಭ್ಯ
ಮೀನುಗಾರಿಕೆಗೆ ಸಮುದ್ರಕ್ಕೆ ತೆರಳುವ ಮೀನುಗಾರರಿಗೆ ತೂಫಾನ್‌ ಬರುವುದು, ಗಾಳಿಯ ತೀವ್ರತೆ ಸೇರಿದಂತೆ ಕಡಲಿನಲ್ಲಿ ಹವಾಮಾನ ಮುನ್ಸೂಚನೆ ಮಾಹಿತಿ ಲಭ್ಯ ವಾಗಲಿದೆ. ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡವರಿಗೆ ಸ್ವಯಂಚಾಲಿತವಾಗಿ ಈ ಮಾಹಿತಿ ರವಾನೆಯಾಗುತ್ತದೆ. ಸಮುದ್ರದಲ್ಲಿರುವ ಮೀನುಗಾರರು ಜಾಗ್ರತೆ ವಹಿಸಿಕೊಳ್ಳುವುದಕ್ಕೆ ಈ ಮಾಹಿತಿ ಅನುಕೂಲವಾಗಲಿದೆ.

ಮತ್ಸ್ಯ ಲಭ್ಯತೆ ಮಾಹಿತಿ
ಮುಂದಿನ ಹಂತದಲ್ಲಿ ಆ್ಯಪ್‌ನ ಮೂಲಕ ಸಮುದ್ರದ ಯಾವ ಸ್ಥಳದಲ್ಲಿ ಹೆಚ್ಚು ಮೀನು ಲಭ್ಯವಾಗಲಿದೆ ಎಂಬ ಮಾಹಿತಿ ಒದಗಿಸುವುದಕ್ಕೆ ತಂತ್ರಜ್ಞಾನ ಅಳವಡಿಸಲಾಗುತ್ತದೆ. ಅದೇ ರೀತಿ ಸಮುದ್ರದ ಸ್ಥಿತಿ ಹೇಗಿದೆ ಎಂಬ ಕುರಿತು ಮಾಹಿತಿ
ನೀಡಲು ಉಭಯ ಇಲಾಖೆಗಳು ಪ್ರಯತ್ನಿಸಲಿವೆ. ಇದಕ್ಕೆ ಸೆಂಟ್ರಲ್‌ ಮರೈನ್‌ ಫಿಶರೀಸ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಸಹಕಾರ ನೀಡಲಿದೆ. ಇದು “ಕಡಲು ಆ್ಯಪ್‌’
ಮೊಬೈಲ್‌ ನೆಟ್‌ವರ್ಕ್‌ ಮೂಲಕ ಕಾರ್ಯಾಚರಿಸಲಿದೆ. ಸಾಮಾನ್ಯವಾಗಿ ಸಮುದ್ರದಲ್ಲಿ 10ರಿಂದ 12 ಕಿ.ಮೀ. ವ್ಯಾಪ್ತಿಯಲ್ಲಿ ಮೊಬೈಲ್‌ ನೆಟ್‌ವರ್ಕ್‌ ಲಭಿಸುತ್ತದೆ.

ನೆರವು, ಭದ್ರತೆ ಉದ್ದೇಶ
ಕರಾವಳಿ ತೀರಗಳ ರಕ್ಷಣೆ ಹಾಗೂ ಮೀನುಗಾರರ ಹಿತದೃಷ್ಟಿಯಿಂದ ಕರಾವಳಿ ಕಾವಲು ಪಡೆ ಹಾಗೂ ಮೀನುಗಾರಿಕಾ ಇಲಾಖೆಯ ಸಹಯೋಗದಲ್ಲಿ “ಕಡಲು ಆ್ಯಪ್‌’ ಸಿದ್ಧಪಡಿಸಲಾಗಿದೆ. ಮೀನುಗಾರಿಕಾ ದೋಣಿಗಳ ಚಲನವಲನಗಳ ಮೇಲೆ ನಿಗಾ ಇಡುವುದು, ಅವರು ಸಮಸ್ಯೆಗೆ ಸಿಲುಕಿದಾಗ ನೆರವಿಗೆ ಧಾವಿಸುವುದು, ಕರಾವಳಿಯ ಭದ್ರತೆ ಮಾಡುವುದು ಇದರ ಮುಖ್ಯ ಉದ್ದೇಶ.
-ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ ಸಚಿವರು

Advertisement

ಮೀನುಗಾರರಿಗೆ ಆ್ಯಪ್‌ನ ಮಾಹಿತಿ
ಮೀನುಗಾರರ ಸುರಕ್ಷತೆಗಾಗಿ “ಕಡಲು’ ಮೊಬೈಲ್‌ ಆ್ಯಪ್‌ ಮಾಡಲಾಗಿದೆ. ದೇಶದ ರಕ್ಷಣ ದೃಷ್ಟಿಯಿಂದಲೂ ಇದು ಮುಖ್ಯವಾಗಿತ್ತು. ವೃತ್ತಿನಿರತ ಮೀನುಗಾರರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಮುಂದಿನ ಒಂದು ತಿಂಗಳು ಆ್ಯಪ್‌ ಬಗ್ಗೆ ಮೀನುಗಾರರಿಗೆ ವಿವಿಧ ಸ್ಥಳಗಳಲ್ಲಿ ಮಾಹಿತಿ ಸಹಿತ ಪ್ರಾತ್ಯಕ್ಷಿಕೆ
ನೀಡಲಾಗುತ್ತದೆ.
-ಚೇತನ್‌ ಆರ್‌., ಕರಾವಳಿ ಕಾವಲು ಪೊಲೀಸ್‌ ಅಧೀಕ್ಷಕರು

Advertisement

Udayavani is now on Telegram. Click here to join our channel and stay updated with the latest news.

Next