Advertisement

ಕಡಬ: ಅಭಿವೃದ್ಧಿಗೆ ಸಿಗಲಿ ಇನ್ನಷ್ಟು ವೇಗ

11:39 AM Sep 16, 2022 | Team Udayavani |

ಕಡಬ: ಕುಟ್ರಾಪ್ಪಾಡಿ ಗ್ರಾಮ ತಾಲೂಕು ಕೇಂದ್ರವಾಗಿರುವ ಕಡಬ ಗ್ರಾಮಕ್ಕೆ ಹೊಂದಿಕೊಂಡಿದೆ ಯಾದರೂ ಅಭಿವೃದ್ಧಿಯ ವಿಚಾರದಲ್ಲಿ ಇನ್ನಷ್ಟು ವೇಗ ಸಿಗಬೇಕಿದೆ. ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಕಡಬ ಸಮೀಪದ ಹೊಸಮಠ ಎನ್ನುವ ಪುಟ್ಟ ಪೇಟೆ ಈ ಗ್ರಾಮದ ಪ್ರಮುಖ ವ್ಯವಹಾರ ಕೇಂದ್ರ.

Advertisement

ಹೊಸಮಠವು ಕಡಬ ಪೇಟೆಯಿಂದ 4 ಕಿ.ಮಿ. ದೂರದಲ್ಲಿದೆ. ಒಂದು ಪಾರ್ಶ್ವದಲ್ಲಿರುವ ಕೇಪು, ಕುಂಟೋಡಿ, ಕಾರ್ಕಳ, ನಂದಗುರಿ, ಹಳೆಸ್ಟೇಶನ್‌, ಕಾಯರಡ್ಕ ಮುಂತಾದ ಪ್ರದೇಶಗಳು ಸ್ವಲ್ಪಮಟ್ಟಿಗೆ ಅಭಿ ವೃದ್ಧಿಯಾಗಿದ್ದರೂ ಇನ್ನೊಂದು ಭಾಗ ದಲ್ಲಿರುವ ಅಲಾರ್ಮೆ, ಉಳಿಪ್ಪು, ವಾಳ್ಯ, ನಾಡೋಳಿ, ಕೂಡಿಗೆ ಮುಂತಾದ ಪ್ರದೇಶಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿವೆ.

ಆ ಭಾಗದಲ್ಲಿ ಅರಣ್ಯ ಭೂಮಿಯ ನಡುವೆ ಜನ ವಸತಿ ಪ್ರದೇಶಗಳಿರುವುದರಿಂದ ಮೂಲ ಸೌಕರ್ಯಗಳ ಅಭಿವೃದ್ಧಿಗೂ ತೊಡಕಾಗಿದೆ. ಅಭಿವೃದ್ಧಿಗೆ ಕಾಯುತ್ತಿರುವ ಗ್ರಾಮೀಣ ಕಚ್ಚಾ ರಸ್ತೆಗಳು ಹಾಗೂ ನಿಲುಕದ ಮೊಬೈಲ್‌ ನೆಟ್‌ವರ್ಕ್‌ ಇಲ್ಲಿನ ಪ್ರಮುಖ ಸಮಸ್ಯೆಗಳು. ಇಲ್ಲಿನ ಜನರು ಹೊಸಮಠವನ್ನು ತಲುಪಲು ಸುಮಾರು 7ರಿಂದ 8 ಕಿ.ಮೀ. ದೂರವನ್ನು ಕಾಲ್ನಡಿಯಲ್ಲಿ ತೆರಳಬೇಕು ಅಥವಾ ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಿದೆ.

ಮಳೆಗಾಲದಲ್ಲಂತೂ ಇಲ್ಲಿನ ಜನರ ಸಮಸ್ಯೆ ಹೇಳತೀರದು. ಕಿರಿಯ ಪ್ರಾಥಮಿಕ ಶಿಕ್ಷಣದ ಬಳಿಕ ಹಿರಿಯ ಪ್ರಾಥಮಿಕ ಶಿಕ್ಷಣಕ್ಕೆ ಹೊಸಮಠಕ್ಕೆ ಹೋಗಬೇಕು. ಪ್ರೌಢ ಹಾಗೂ ಪ.ಪೂ. ಶಿಕ್ಷಣಕ್ಕೆ ತಾಲೂಕು ಕೇಂದ್ರ ಕಡಬವನ್ನು ಆಶ್ರಯಿಸಬೇಕಿದೆ.

ಕೇಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ, ಕೇಪು ಶ್ರೀ ಪಂಚಮುಖೀ ಆಂಜನೇಯ ಕ್ಷೇತ್ರ, ನಾಲೂರು ಶ್ರೀ ಶಂಕರ ನಾರಾಯಣ ದೇವಸ್ಥಾನ ಹಾಗೂ ತಲೇಕಿ ಶ್ರೀನಿವಾಸ ದೈವಸ್ಥಾನಗಳು ಗ್ರಾಮದಲ್ಲಿದೆ. ಇಲ್ಲಿ ಮಠ ಎನ್ನುವ ಪ್ರದೇಶವಿದ್ದು, ಅಲ್ಲಿ ಸುಬ್ರಹ್ಮಣ್ಯ ಮಠಕ್ಕೆ ಸಂಬಂಧಿಸಿದ ಸುಮಾರು 1 ಸಾವಿರ ವರ್ಷಗಳ ಇತಿಹಾಸ ಇರುವ ಮಠವಿದೆ.

Advertisement

ಇಲ್ಲಿ ವೆಂಕಟ್ರಮಣ, ಮಹಾಗಣಪತಿ ಹಾಗೂ ದುರ್ಗಾಪರಮೇಶ್ವರೀ ದೇವಸ್ಥಾನವೂ ಇದೆ. ವಿಮಲಗಿರಿ ಸೈಂಟ್‌ ಮೇರಿಸ್‌ ಚರ್ಚ್‌ ಹಾಗೂ ಕುಟ್ರಾಪ್ಪಾಡಿ ಸೈಂಟ್‌ ಮೇರಿಸ್‌ ಚರ್ಚ್‌ ಕ್ರೈಸ್ತ ಬಾಂಧವರ ಆರಾಧನಾ ಕೇಂದ್ರವಾಗಿದೆ. ಗ್ರಾಮದಲ್ಲಿ 1 ಮಸೀದಿ ಇದೆ.

ರಸ್ತೆ ಅಭಿವೃದ್ಧಿಗೆ ಹಲವು ತೊಡಕು

ಹೊಸಮಠದಿಂದ ವಾಳ್ಯ, ಉಳಿಪ್ಪು, ಕೂಡಿಗೆ ಪ್ರದೇಶವನ್ನು ಸಂಪರ್ಕಿಸುವ ಸುಮಾರು 6 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿಯಾಗದ ಹೊರತು ಇಲ್ಲಿನ ಜನರಿಗೆ ಸಮಸ್ಯೆ ತಪ್ಪಿದ್ದಲ್ಲ. ಶಾಸಕ, ಪ್ರಸ್ತುತ ಸಚಿವರಾಗಿರುವ ಎಸ್‌. ಅಂಗಾರ ಅವರ ಮುತುವರ್ಜಿಯಿಂದ ಸುಮಾರು 2 ಕಿ.ಮೀ. ರಸ್ತೆ ಕಾಂಕ್ರೀಟ್‌ ರಸ್ತೆಯಾಗಿ ಅಭಿವೃದ್ಧಿಯಾಗಿದೆ. ಉಳಿದ 4 ಕಿ.ಮೀ. ಉದ್ದದ ಕಚ್ಛಾ ರಸ್ತೆಯಲ್ಲಿ ಜನರು ಸಂಚರಿಸಲು ಪಡುವ ಪಾಡು ಅಷ್ಟಿಷ್ಟಲ್ಲ.

ಮುಖ್ಯ ಕಚ್ಚಾ ರಸ್ತೆಯಿಂದ ಟಿಸಿಲೊಡೆದು ಗ್ರಾಮದೊಳಗಿನ ವಿವಿಧ ಪ್ರದೇಶಗಳನ್ನು ಸಂಪರ್ಕಿಸುವ ಮಣ್ಣಿನ ರಸ್ತೆಗಳಲ್ಲಿ ಸಂಚರಿಸುವುದು ಕೂಡ ಸಾಹಸದ ಕೆಲಸ.

ಈ ರಸ್ತೆ ಯಾವುದೇ ಇತರ ಪ್ರಮುಖ ರಸ್ತೆ ಅಥವಾ ಗ್ರಾಮಗಳಿಗೆ ಸಂಪರ್ಕ ಕಲ್ಪಿಸದೇ ಹೊಳೆಯ ಬದಿಯಲ್ಲಿ ಕೊನೆ ಯಾಗುವುದರಿಂದ ರಸ್ತೆ ಅಭಿವೃದ್ಧಿಗೆ ಗ್ರಾಮ ಸಡಕ್‌ನಂತಹ ಯೋಜನೆಗಳ ದೊಡ್ಡ ಮೊತ್ತದ ಅನುದಾನ ಲಭಿಸಲು ಸಮಸ್ಯೆ ಇದೆ. ಮುಖ್ಯಮಂತ್ರಿ ಗ್ರಾಮವಿಕಾಸ ಯೋಜನೆಯ 1 ಕೋಟಿ ರೂ. ಅನುದಾನ ಗ್ರಾಮಕ್ಕೆ ಲಭಿಸಿದ್ದು, ಇತರ ಅನುದಾನಗಳೂ ಸೇರಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಜಮೀನು ಕಾದಿರಿಸಲಾಗಿದ್ದು, ಮುಖ್ಯಮಂತ್ರಿ ಗ್ರಾಮವಿಕಾಸ ಯೋಜನೆಯ ಅನುದಾನದಲ್ಲಿ ಘಟಕಕ್ಕೆ ಕಟ್ಟಡದ ನಿರ್ಮಾಣವಾಗಲಿದೆ.

ಮುಗಿಯದ ವಿದ್ಯುತ್‌ ಸಮಸ್ಯೆ

ಅರಣ್ಯದ ನಡುವೆ ವಿದ್ಯುತ್‌ ಮಾರ್ಗ ಹಾದು ಹೋಗುತ್ತಿರುವುದರಿಂದ ಮರದ ಕೊಂಬೆಗಳು ವಿದ್ಯುತ್‌ ಲೈನ್‌ನ ಮೇಲೆ ಮುರಿದುಬಿದ್ದು ಪದೇ ಪದೆ ವಿದ್ಯುತ್‌ ಸಮಸ್ಯೆ ಕಾಡುತ್ತಿರುತ್ತದೆ. ಮಳೆಗಾಲದಲ್ಲಂತೂ ಮತ್ತೆ ವಿದ್ಯುತ್‌ ಸಂಪರ್ಕ ನೀಡಬೇಕಿದ್ದರೆ 3-4 ದಿನಗಳೇ ಬೇಕಾಗುತ್ತದೆ.

ಭೂಮಿಯ ಹಕ್ಕುಪತ್ರ ಪಡೆಯಲೂ ಸಮಸ್ಯೆ

ಇಲ್ಲಿ ಜನವಸತಿ ಪ್ರದೇಶಕ್ಕಿಂತ ಹೆಚ್ಚು ಅರಣ್ಯ ಪ್ರದೇಶ ಇರುವುದರಿಂದ 94 ಸಿ ಹಾಗೂ ಅಕ್ರಮ ಸಕ್ರಮ ಮೂಲಕ ಭೂಮಿಯ ಹಕ್ಕುಪತ್ರ ಪಡೆಯುವ ಅವಕಾಶದಿಂದಲೂ ಹೆಚ್ಚಿನ ಜನರು ವಂಚಿತರಾಗಿದ್ದಾರೆ. ಅರಣ್ಯ ಇಲಾಖೆಯ ಆಕ್ಷೇಪಣೆಯಿಂದಾಗಿ ಬಹುತೇಕ ಕಡತಗಳು ವಿಲೇವಾರಿಯಾಗದೆ ಕಂದಾಯ ಕಚೇರಿಯಲ್ಲಿಯೇ ಬಾಕಿಯಾಗಿವೆ.

ಕಾಡುವ ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ: ವಾಳ್ಯ, ಉಳಿಪ್ಪು, ಬೈತನೆ, ನಾಡೋಳಿ, ಕಂಪತಡ್ಡ, ಕೂಡಿಗೆ ಮುಂತಾದ ಪ್ರದೇಶಗಳ ಸುಮಾರು 130 ಮನೆಗಳಿಗೆ ಮೊಬೈಲ್‌ ನೆಟ್‌ವರ್ಕ್‌ ಇಲ್ಲವೇ ಇಲ್ಲ. ಅದರಿಂದಾಗಿ ಇಲ್ಲಿನ ಮಕ್ಕಳು ಆನ್‌ಲೈನ್‌ ತರಗತಿಗಳಿಂದಲೂ ವಂಚಿತರಾಗಿದ್ದರು. ಮೊಬೈಲ್‌ ನೆಟ್‌ವರ್ಕ್‌ ಇಲ್ಲದೇ ಇರುವುದರಿಂದ ಆರೋಗ್ಯ ಸಮಸ್ಯೆ ಸೇರಿದಂತೆ ಯಾವುದೇ ತುರ್ತು ಸಂದರ್ಭಗಳಲ್ಲಿ ಹೊರ ಪ್ರಪಂಚವನ್ನು ಸಂಪರ್ಕಿಸಲು ಇಲ್ಲಿನ ಜನರಿಗೆ ಸಾಧ್ಯ ಆಗುತ್ತಿಲ್ಲ.

ಅನುದಾನಕ್ಕಾಗಿ ಬೇಡಿಕೆ: ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಎಸ್‌. ಅಂಗಾರ ಅವರ ಮುತುವರ್ಜಿಯಿಂದ ಹೆಚ್ಚಿನ ಅನುದಾನಗಳು ಗ್ರಾಮದ ಅಭಿವೃದ್ಧಿಗೆ ಲಭಿಸಿದೆ. ಇನ್ನಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿದ್ದು, ಅದಕ್ಕಾಗಿ ಅನುದಾನಕ್ಕಾಗಿ ಬೇಡಿಕೆ ಇರಿಸಲಾಗಿದೆ. –ಮೋಹನ ಗೌಡ ಕೆರೆಕೋಡಿ, ಅಧ್ಯಕ್ಷರು, ಕುಟ್ರಾಪ್ಪಾಡಿ ಗ್ರಾಮ ಪಂಚಾಯತ್‌

ರಸ್ತೆ ಅಭಿವೃದಿ ಪಡಿಸಿ: ಕೃಷಿ ಪ್ರಧಾನವಾಗಿರುವ ನಮ್ಮ ಗ್ರಾಮದಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ. ಮುಖ್ಯವಾಗಿ ಗ್ರಾಮದ ಹೊಸಮಠದಿಂದ ವಾಳ್ಯ, ಉಳಿಪ್ಪು, ಕೂಡಿಗೆ ಪ್ರದೇಶವನ್ನು ಸಂಪರ್ಕಿಸುವ ರಸ್ತೆಯನ್ನು ಶೀಘ್ರ ಅಭಿವೃದ್ಧಿಪಡಿಸಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು. – ಎಲ್ಸಿ ಥಾಮಸ್‌ ಉಳಿಪ್ಪು, ಸಾಮಾಜಿಕ ಕಾರ್ಯಕರ್ತೆ

-ನಾಗರಾಜ್‌ ಎನ್‌.ಕೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next