Advertisement

ಕಡಬ: ವಿದ್ಯುತ್‌ ಲೈನ್ ಸರಿಪಡಿಸುವ ವೇಳೆ ಆಘಾತ: ಲೈನ್‌ಮನ್‌ ಸಾವು

12:55 AM Jun 02, 2023 | Team Udayavani |

ಕಡಬ: ವಿದ್ಯುತ್‌ ಪೂರೈಕೆಯಲ್ಲಿನ ಸಮಸ್ಯೆಯನ್ನು ಸರಿಪಡಿಸಲು ವಿದ್ಯುತ್‌ ಕಂಬವೇರಿದ್ದ ಕಡಬ ಮೆಸ್ಕಾಂನ ಲೈನ್‌ಮನ್‌ ದ್ಯಾಮಣ್ಣ ದೊಡ್ಡಮನಿ (26) ಅವರು ವಿದ್ಯುತ್‌ ಆಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಗುರುವಾರ ಕಡಬದಲ್ಲಿ ಸಂಭವಿಸಿದೆ.

Advertisement

ಬಾಗಲಕೋಟೆ ಜಿಲ್ಲೆಯ ಹಿರಿಕುಲಬಾಲ ಗ್ರಾಮದ ಚಿಕ್ಕ ಕುಲಬಾಲ ನಿವಾಸಿ ರೇವಣ್ಣಪ್ಪ ಮತ್ತು ಚಂದ್ರವ್ವ ದಂಪತಿ ಪುತ್ರ ದ್ಯಾಮಣ್ಣ ದೊಡ್ಡಮನಿ ಕಳೆದ 8 ವರ್ಷಗಳಿಂದ ಕಡಬದಲ್ಲಿ ಲೈನ್‌ಮನ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ದುರಸ್ತಿ ಮಾಡುತ್ತಿದ್ದರು
ಗುರುವಾರ ಮಧ್ಯಾಹ್ನದ ವೇಳೆಗೆ ಕಡಬದ ಮುಳಿಮಜಲು ಕಾಯರಡ್ಕ ಸಮೀಪದ ತಲೇಕಿ ರಸ್ತೆಯಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ಸಮಸ್ಯೆ ಕಂಡು ಬಂದ ವೇಳೆ ಕಂಬವೇರಿ ದುರಸ್ತಿ ಮಾಡುತ್ತಿದ್ದ ಅವರು ವಿದ್ಯುತ್‌ ಆಘಾತಕ್ಕೊಳಗಾಗಿ ಕಂಬದಲ್ಲಿಯೇ ಸಿಲುಕಿಕೊಂಡಿದ್ದರು. ಕೂಡಲೇ ಸ್ಥಳೀಯರು ಅವರನ್ನು ಕೆಳಗಿಳಿಸಿ ಕಡಬ ಸಮುದಾಯ ಆಸ್ಪತ್ರೆಗೆ ಸಾಗಿಸಿದ್ದರು.

ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರನ್ನು ಕಡಬದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆಗೆ ತಲುಪುತ್ತಿದ್ದಂತೆಯೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಕಡಬದ ಹಳೆಸ್ಟೇಷನ್‌ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಅವರು ಪತ್ನಿ ಹಾಗೂ ಆರು ತಿಂಗಳ ಮಗುವನ್ನು ಅಗಲಿದ್ದಾರೆ.
ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್‌ ರಾಮಚಂದ್ರ, ಮೆಸ್ಕಾಂ ಕಡಬ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಸಜಿಕುಮಾರ್‌ ಅವರು ಮೃತರ ಅಂತಿಮ ದರ್ಶನ ಪಡೆದರು.

ವರದಿ ನೀಡುವಂತೆ ಶಾಸಕರ ಸೂಚನೆ
ಪುತ್ತೂರು: ಕಡಬ ಸಮೀಪದ ತಲೆಕ್ಕಿಯಲ್ಲಿ ವಿದ್ಯುತ್‌ ತಂತಿ ದುರಸ್ತಿ ಕಾರ್ಯದ ವೇಳೆ ಶಾಕ್‌ ಹೊಡೆದು ಪುತ್ತೂರು ಮೆಸ್ಕಾಂ ವ್ಯಾಪ್ತಿಯ ಪವರ್‌ಮನ್‌ ದ್ಯಾಮಣ ದೊಡ್ಡಮನಿ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಮೃತದೇಹ ಇರಿಸಲಾಗಿದ್ದ ಪುತ್ತೂರು ಸರಕಾರಿ ಆಸ್ಪತ್ರೆಗೆ ಶಾಸಕ ಅಶೋಕ್‌ ಕುಮಾರ್‌ ರೈ ಭೇಟಿ ನೀಡಿ ಸಹೋದ್ಯೋಗಿಗಳಿಗೆ ಸಾಂತ್ವನ ಹೇಳಿದರು.
ಮೃತದೇಹವನ್ನು ಹುಟ್ಟೂರಿಗೆ ಕೊಂಡೊಯ್ಯಲು ಬೇಕಾದ ವ್ಯವಸ್ಥೆ ಮಾಡುವಂತೆ ಸೂಚಿಸಿದರಲ್ಲದೆ ಮೆಸ್ಕಾಂ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಘಟನೆಯ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಸೂಚಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next