ಬ್ರಹ್ಮಾವರ: ದೈಹಿಕ ಕೊಳೆ ತೊಳೆಯಲು ಸ್ನಾನ ಮಾಡಿದಂತೆ, ಆತ್ಮದ ಕೊಳೆ ತೊಳೆಯಲು ಸತ್ಸಂಗ, ಧಾರ್ಮಿಕ ಚಿಂತನೆ ಅವಶ್ಯ ಎಂದು ಕಚ್ಚಾರು ಶ್ರೀ ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್‌ನ ಅಧ್ಯಕ್ಷ ಸುರೇಶ್ ಭಂಡಾರಿ ಕಡಂದಲೆ ಹೇಳಿದರು.
ಅವರು ಮಂಗಳವಾರ ಸ್ಪಂದನ ಭಂಡಾರಿ ಬಳಗ ಸೇವಾ ಟ್ರಸ್ಟ್ ವತಿಯಿಂದ ಲೋಕಕಲ್ಯಾಣಾರ್ಥ ಬಾರಕೂರು ಕಚ್ಚಾರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ಜರಗಿದ ಚತುರ್ವಿಂಶತ್ಯುತ್ತರ ಸಹಸ್ರ ನಾಳಿಕೇರ ಮಹಾಗಣಪತಿ ಯಾಗದ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು.
ಭಾರತದ ಭವ್ಯ ಸಂಸ್ಕೃತಿ, ಸಂಪ್ರದಾಯ, ಆದರ್ಶಗಳನ್ನು ಮಕ್ಕಳಿಗೆ ತಿಳಿಸಿ ಅವರನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ಜವಾಬ್ದಾರಿ ಹಿರಿಯರ ಮೇಲಿದೆಎಂದು ಉಪನ್ಯಾಸಕಿ ಅಕ್ಷಯಾ ಗೋಖಲೆ ಕಾರ್ಕಳ ದಿಕ್ಸೂಚಿ ಭಾಷಣದಲ್ಲಿ ಹೇಳಿದರು.
ಸ್ಪಂದನ ಭಂಡಾರಿ ಬಳಗ ಸೇವಾಟ್ರಸ್ಟ್‌ನ ಅಧ್ಯಕ್ಷ ಅರುಣ್ ಭಂಡಾರಿ ಬೈಕಾಡಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಭಂಡಾರಿ ಮಹಾಮಂಡಲದ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುಪ್ರಸಾದ್ ಶೆಟ್ಟಿ ಬೈಕಾಡಿ, ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಉದ್ಯಮಿ ಸುರೇಶ್ ಭಂಡಾರಿ ಹಿರೇಬೆಟ್ಟು, ತುಳು ಚಿತ್ರನಟ ಸೌರಭ ಭಂಡಾರಿ ಕಡಂದಲೆ, ನಟ ಪ್ರದೀಪ್‌ಚಂದ್ರ ಕುತ್ಪಾಡಿ, ಉತ್ಸವ ಸಮಿತಿ ಅಧ್ಯಕ್ಷರಾಂ ಗಣೇಶ್ ಭಂಡಾರಿ ಮಂಗಳೂರು, ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಮೂರನೇ ಮೊಕ್ತೇಸರ ರವಿ ಆಚಾರ್, ಉಡುಪಿ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಭಂಡಾರಿ ಅಲೆವೂರು, ಸ್ವಯಂ ಸೇವಕ ಸಂಘದ ಅಧ್ಯಕ್ಷೆ ಮಾಲಿನಿ ಕುಳಾಯಿ, ಭಂಡಾರಿ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಸತೀಶ್ ಭಂಡಾರಿ ಕಾಡಬೆಟ್ಟು, ಉಪಾಧ್ಯಕ್ಷೆ ಅಮಿತಾ ಗಿರೀಶ್ ಉಡುಪಿ, ಸ್ಪಂದನಬಳಗದ ಪ್ರ.ಕಾರ್ಯದರ್ಶಿ ಹರೀಶ್ ಭಂಡಾರಿ ಕುತ್ಪಾಡಿ ಉಪಸ್ಥಿತರಿದ್ದರು.ಸೋಮಶೇಖರ ಭಂಡಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಬೆಳಗ್ಗೆ ಶ್ರೀ ಮಹಾಗಣಪತಿ ದೇವರಿಗೆ ನವಕ ಕಲಶ ಪ್ರಧಾನ ಹೋಮ, ಪ್ರಸನ್ನ ಪೂಜೆ, ಚತುರ್ವಿಂಶತ್ಯುತ್ತರ ಸಹಸ್ರ ನಾಳಿಕೇರ ಯಾಗ, ಅನ್ನಸಂತರ್ಪಣೆ, ಸಂಜೆ ರಂಗ ಪೂಜೆ ಜರಗಿತು.