Advertisement

ಹಿಂದೂ-ಮುಸ್ಲಿಂ ಭಾವೈಕ್ಯತೆಯ ಕೊಂಡಿ, ಕನ್ನಡದ ಕಬೀರ ಇಬ್ರಾಹಿಂ ಸುತಾರ

03:10 PM Feb 05, 2022 | Team Udayavani |

ಮಹಾಲಿಂಗಪುರ: ಸ್ಥಳೀಯ ಪ್ರವಚನಕಾರ, ಕನ್ನಡದ ಕಬೀರ, ಹಿಂದೂ- ಮುಸ್ಲಿಂ ಭಾವೈಕ್ಯತಾ ಕೊಂಡಿ, ದೇಶದ ಅತ್ಯುನ್ನತ ಪ್ರಶಸ್ತಿಯಾದ 2018ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಶರಣಶ್ರೀ ಇಬ್ರಾಹಿಂ ಸುತಾರ(82) ಅವರು ಫೆ.5 ಶನಿವಾರ ಮುಂಜಾನೆ 6-30ಕ್ಕೆ ಹೃದಯಾಘಾತದಿಂದ ಮಹಾಲಿಂಗಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

Advertisement

10-5-1940ರಂದು ಪಟ್ಟಣದ ಕುಟುಂಬದ ನಬೀಸಾಬ ಮತ್ತು ಆಮಿನಾಬಿ ದಂಪತಿಗಳ ಮಗನಾಗಿ ಜನಿಸಿದ ಅವರು ಕಲಿತಿದ್ದು ಕೇವಲ 3ನೇ ತರಗತಿ. ಚಿಕ್ಕಂದಿನಿಂದಲೇ ದೇವರು ಅಧ್ಯಾತ್ಮದ ಕುರಿತು ಹೆಚ್ಚಿನ ಒಲವುಳ್ಳ ಇವರು 1970ರಲ್ಲಿ ಭಾವೈಕ್ಯ ಜನಪದ ಸಂಗೀತ ಮೇಳವನ್ನು ಸ್ಥಾಪಿಸಿದರು. ಕಳೆದ 50 ವರ್ಷಗಳಿಂದ ಭಜನೆ, ಪ್ರವಚನ, ವಚನ ವಾಚನ, ಸಮಾಜ ಸೇವೆಯ ಮೂಲಕ ಸರ್ವ ಮಹಾತ್ಮರ ಸಾಹಿತ್ಯದ ಮೂಲಕ ಭಾವೈಕ್ಯತೆಯ ಸಂದೇಶವನ್ನು ಬೀರುತ್ತಾ ಬಂದಿದ್ದಾರೆ.

ಸಿದ್ದಾರೂಢ ಸಂಪ್ರದಾಯ ಸ್ವಾಮಿಜಿಗಳ ಒಡನಾಟ: ವೃತ್ತಿಯಲ್ಲಿ ನೇಕಾರರಾಗಿದ್ದ ಇಬ್ರಾಹಿಂ ಸುತಾರ ಅವರು ಮಹಾಲಿಂಗಪುರದ ಪ್ರಕರಣ ಪ್ರವೀಣ ಬಸವಾನಂದರು ಮತ್ತು ಕುಬಸದ ಬಸಪ್ಪಜ್ಜನವರು, ಗರಡಿಯಲ್ಲಿ ಸಹಜಾನಂದ ಸ್ವಾಮಿಜಿ ಮತ್ತು ಕಟಗಿ ಮಲ್ಲಪ್ಪ, ದಿ| ಮಲ್ಲಪ್ಪ ಶಿರೋಳ ಶರಣರ ಜೊತೆಗೆ ಅಧ್ಯಾತ್ಮದ ಅಧ್ಯಯನ ನಡೆಸುತ್ತಾ ಪ್ರವಚನ, ಭಜನೆಯ ರಂಗಕ್ಕೆ ಬಂದವರು. ಮುಂದೆ ಸಿದ್ದಾರೂಢ ಸಂಪ್ರದಾಯದ ಬೀದರ ಶಿವಕುಮಾರಶ್ರೀ, ಇಂಚಲ ಶಿವಾನಂದ ಭಾರತಿ ಸ್ವಾಮಿಜಿ, ಹುಬ್ಬಳ್ಳಿ ಶಿವಾನಂದ ಭಾರತಿ ಸ್ವಾಮಿಜಿಯವರ ಒಟನಾಟ, ಅಧ್ಯಾತ್ಮದ ಚಿಂತನೆಯೊಂದಿಗೆ ಕನ್ನಡವನ್ನು ಸುಲಿದ ಬಾಳೆಹಣ್ಣಿನಂತೆ ಸರಳ ಮತ್ತು ಸುಂದರಾಗಿ ಬಳಸಿಕೊಂಡು ನೀತಿ ಭೋದಕ ತತ್ವಪದಗಳು, ಶರಣರ ವಚನಗಳನ್ನು ಆಧರಿಸಿ ಪ್ರಖರ ಪ್ರವಚನ,ಆರು ಜನ ತಂಡದೊಂದಿಗೆ ನಡೆಸುವ ಸಂವಾದಗಳೊಂದಿಗೆ ಕಲೆ, ಸಂಗೀತ ಮತ್ತು ಭಾವೈಕ್ಯತಾ ಕ್ಷೇತ್ರದಲ್ಲೂ ಈ ಮಟ್ಟದ ಸಾಧನೆಗೆ ಸಾಧ್ಯವಾಗಿದೆ.

ಹಿಂದು ಮುಸ್ಲಿಂ ಭಾವೈಕ್ಯತಾ ಕೊಂಡಿ: ಕನ್ನಡ ಭಾಷೆಯ ಮಧುರ ಮಾತುಗಳಿಂದ ನಿಜಗುಣರ ಶಾಸ್ತ್ರ, ಸಿದ್ದಾರೂಢರ ಚರಿತ್ರೆ, ಶಿವಶರಣರ ವಚನಗಳನ್ನು ಆಧರಿಸಿ ಪ್ರತಿವರ್ಷ ನೂರಾರು ಕಾರ್ಯಕ್ರಮಗಳನ್ನು ನೀಡುತ್ತಾ ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ಬೆಸೆಯುವ ಕೊಂಡಿಯಾಗಿ ಸಮಾಜದಲ್ಲಿನ ಜಾತಿ-ಸಮುದಾಯಗಳ ನಡುವಿನ ಭೇದ-ಭಾವವನ್ನು ಅಳಿಸಲು ಪ್ರಯತ್ನಿಸಿ, ನಾಡಿನ ಮನೆ-ಮನಗಳಲ್ಲಿ ಚಿರಪರಿಚಿತರಾಗಿದ್ದಾರೆ.

Advertisement

ಸುತಾರ ಸಾಹಿತ್ಯ ಸೇವೆ: ಭಜನೆ, ಪ್ರವಚನ, ಸಂವಾದ ಕಾರ್ಯಕ್ರಮಗಳ ಮೂಲಕ ಸಾಹಿತಿಯಾಗಿ ಪರಮಾರ್ಥ ಲಹರಿ, ನಾವೆಲ್ಲರೂ ಭಾರತೀಯರೆಂಬ ಭಾವ ಮೂಡಲಿ, ತತ್ವ ಜ್ಞಾನಕ್ಕೆ ಸರ್ವರು ಅಧಿಕಾರಿಗಳು ಸೇರಿದಂತೆ ಹಲವು ಗ್ರಂಥಗಳನ್ನು ರಚಿಸಿದ್ದಾರೆ.

ತತ್ವ ಚಿಂನೆಯ ಸಂವಾದ: ಸುತಾರ ಅವರು ಪ್ರಶ್ನೋತ್ತರದೊಂದಿಗೆ ಆರು ಜನ ಸಹ ಕಲಾವಿದರೊಂದಿಗೆ ನಡೆಸುವ ಭಾವೈಕ್ಯ ಭಕ್ತಿ ರಸಮಂಜರಿ, ಅಧ್ಯಾತ್ಮ ಸಂವಾದ ತರಂಗಿಣಿ, ಗೀತ ಸಂವಾದ ತರಂಗಿಣಿ ಸಂವಾದ ಕಾರ್ಯಕ್ರಮಗಳ ಮೂಲಕ ಜನ ಸಾಮಾನ್ಯರಿಗೆ ಅಧ್ಯಾತ್ಮದ ಮರ್ಮವನ್ನು, ತತ್ವ ಚಿಂತನೆಯನ್ನು ತಿಳಿಸುವ ವಿನೂತನ ಕಲಾ ಪ್ರಕಾರವಾದ್ದರಿಂದ ಇವರ ಸಂವಾದ ಎಲ್ಲೇ ನಡೆದರು ಅಲ್ಲಿ ಸಾವಿರಾರು ಜನರು ಭಾಗವಹಿಸುತ್ತಾರೆ.

ಧ್ವನಿ ಸುರಳಿ ಸರದಾರ: ಜಗವೊಂದು ಧರ್ಮ ಶಾಲೆ, ಸೌಡಿಲ್ಲದ ಸಾವುಕಾರ, ಮೊದಲು ಮಾನವನಾಗು, ಪಾಪ ಕರ್ಮಗಳನ್ನು ಮಾಡಬೇಡ, ದೇವರು ಕಾಡುವದಿಲ್ಲ, ಪುಣ್ಯವನೇ ಮಾಡು, ಯಾರು ಜಾಣರು, ಹಣ ಹೆಚ್ಚೋ? ಗುಣ ಹೆಚ್ಚೋ, ಭಾವೈಕ್ಯತೆ ಎಂದರೇನು ಸೇರಿದಂತೆ ಸುಮಾರು 20ಕ್ಕೂ ಅಧಿಕ ನೀತಿ ಬೋಧಕ, ಅಧ್ಯಾತ್ಮಿಕ ಚಿಂತನೆಯ ಧ್ವನಿ ಸುರಳಿಗಳನ್ನು ಹೊರತಂದಿದ್ದಾರೆ.

ದೇಶ್ಯಾದಂತ ಕಾರ್ಯಕ್ರಮ: ದಸರಾ ಉತ್ಸವ, ಚಾಲುಕ್ಯ ಉತ್ಸವ, ವಿಶ್ವ ಕನ್ನಡ ಸಮ್ಮೇಳನ, ನವರಸಪುರ ಉತ್ಸವ, ಆಳ್ವಾಸ್ ನುಡಿಸಿರಿ, ರನ್ನ ಉತ್ಸವ ಸೇರಿದಂತೆ ಹಲವು ಉತ್ಸವಗಳಲ್ಲಿ ಭಾಗವಹಿಸಿದ ಇವರು ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಆಂಧ್ರ, ಗೋವಾ, ದೆಹಲಿ, ರಾಜಸ್ಥಾನ ರಾಜ್ಯಗಳು ಸೇರಿದಂತೆ ದೇಶ್ಯಾದಂತ 1970 ರಿಂದ ಇಲ್ಲಿವರೆಗೂ ಸುಮಾರು 4 ಸಾವಿರಕ್ಕೂ ಅಧಿಕ ಪ್ರವಚನ ಮತ್ತು ಅಧ್ಯಾತ್ಮ ಸಂವಾದ ಕಾರ್ಯಕ್ರಮಗಳನ್ನು ನೀಡಿ ಸೈ ಎನಿಸಿಕೊಂಡಿದ್ದರು.

ಹಲವು ಪ್ರಶಸ್ತಿಗಳು: 195ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2009-10ನೇ ಸಾಲಿನಲ್ಲಿ ಕರ್ನಾಟಕ ಕಲಾಶ್ರೀ ಪ್ರಶಸ್ತಿಗಳು ಬಂದಿವೆ. ಅಲ್ಲದೇ ಇವರ ಭಾವೈಕ್ಯತಾ ಭಕ್ತಿ ಸೇವೆಗೆ ಆಳ್ವಾಸ್ ನುಡಿಸಿರಿ, ಸೂಪಿ ಸಂತ, ಭಜನಾ ಮೃತ ಸಿಂಧು, ಗಡಿ ನಾಡು ಚೇತನ, ಭಾವೈಕ್ಯತಾ ನಿಧಿ ಸೇರಿದಂತೆ ನಾಡಿನ ಹೆಸರಾಂತ ಸಂಘ- ಸಂಸ್ಥೆಗಳು, ಮಠ ಮಾನ್ಯಗಳಿಂದ ಹತ್ತಾರು ಪ್ರಶಸ್ತಿಗಳಿಗೆ ಇವರ ಭಾವೈಕ್ಯತಾ ಸೇವೆಗೆ ಅರಿಸಿ ಬಂದಿವೆ.

ಅಮೃತ ಮಹೋತ್ಸವ: 2016 ಜನವರಿ 2 ಮತ್ತು 3 ರಂದು ಮಹಾಲಿಂಗಪುರದಲ್ಲಿ ಇವರ ಅಭಿಮಾನಿಗಳು ಇಬ್ರಾಹಿಂ ಸುತಾರ ಅವರ 75ನೇ ವರ್ಷದ ಅಮೃತ ಮಹೋತ್ಸವ ಆಚರಿಸಿ ಭಾವೈಕ್ಯ ದರ್ಶನ ಎಂಬ ಅಭಿನಂದನಾ ಗ್ರಂಥವನ್ನು ಸಹ ಪ್ರಕಟಿಸಿದ್ದಾರೆ. ಇಬ್ರಾಹಿಂ ಸುತಾರ ಅವರು ತಮ್ಮ ವಾಕ್‌ಚಾತುರ್ಯದ ಪ್ರವಚನದಿಂದ ಬೆಲ್ಲದ ನಾಡು, ಭಾವೈಕ್ಯತಾ ಬೀಡು, ಕಲಾವಿದರ ತವರೂರು ಮಹಾಲಿಂಗಪುರದ ಕೀರ್ತಿಯನ್ನು ದೇಶ್ಯಾದಂತ ಬೆಳಗಿಸಿದ್ದರು.

ಇಂದು ಅವರ ಅಗಲಿಕೆಯಿಂದ ನಾಡಿನ ಶರಣ ಸಂಪ್ರದಾಯ, ಕಲೆ, ಅಧ್ಯಾತ್ಮ ಮತ್ತು ಭಾವೈಕ್ಯತಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಇಬ್ರಾಹಿಂ ಸುತಾರ ಅವರ ಅಗಲಿಕೆಗೆ ನಾಡಿನ ಗಣ್ಯರು, ರಾಜಕಾರಣಿಗಳು, ಮಠಾಧೀಶರು, ಶರಣರು ಕಂಬನಿ ಮಿಡಿಯುತ್ತಿದ್ದಾರೆ.

ವರದಿ: ಚಂದ್ರಶೇಖರ ಮೋರೆ ಮಹಾಲಿಂಗಪುರ

Advertisement

Udayavani is now on Telegram. Click here to join our channel and stay updated with the latest news.

Next