ಕಲಬುರಗಿ: ಕೊರೊನಾ ಕರಿಛಾಯೆ ಮತ್ತು ಮುಂಗಾರು ಹಂಗಾಮಿನ ಚಟುವಟಿಗಳು ನಡುವೆಯೂ ಜಿಲ್ಲಾದ್ಯಂತ ಗುರುವಾರ ರೈತರು ಕಾರಹುಣ್ಣಿಮೆಯನ್ನು ಸಗಡರದಿಂದ ಆಚರಿಸಿದರು. ಹಲವೆಡೆ ಎತ್ತುಗಳಿಗೆ ಅಲಂಕಾರ ಮಾಡಿ ಓಡಾಡಿಸುವ ಮೂಲಕ ಸಂಭ್ರಮ ಪಟ್ಟರು. ಮುಂಗಾರು ಹಂಗಾಮಿನಲ್ಲಿ ಬರುವ ಕಾರ ಹುಣ್ಣಿಮೆ ಅನ್ನದಾತ ರೈತರಿಗೆ ವಿಶೇಷವಾದ ಹಬ್ಬ. ಕಾರಹುಣ್ಣಿಮೆಯನ್ನು ರೈತರ ಮೊದಲ ಹಬ್ಬ ಅಂತಲೇ ಕರೆಯುತ್ತಾರೆ.
ಬೇಸಿಗೆ ಕಳೆದು ಮುಂಗಾರು ಮಳೆ ಆರಂಭವಾಗುತ್ತಲೇ ಕೃಷಿ ಚಟುವಟಿಕೆಗಳು ಶುರುವಾಗುವುದರಿಂದ ಹೊಲದ ಉಳುಮೆಯಿಂದ ಹಿಡಿದು ರೈತನ ಪ್ರತಿಕಾರ್ಯದಲ್ಲೂ ಎತ್ತುಗಳೇ ಪ್ರಧಾನವಾಗುತ್ತವೆ. ಹೀಗಾಗಿ ರೈತರಿಗೆ ಎತ್ತುಗಳೇ ಬೆನ್ನೆಲುಬು. ಮುಂಗಾರಿನ ಸಡಗರದಲ್ಲೇ ಕಾರಹುಣ್ಣಿಮೆ ಬರುವುದರಿಂದ ಎತ್ತುಗಳಿಗೆ ಸಿಂಗಾರ ಮಾಡಿ ರೈತರು ಸಂಭ್ರಮಿಸುತ್ತಾರೆ. ಗುರುವಾರ ಕೂಡ ಕಾರಹುಣ್ಣಿಮೆ ಹಿನ್ನೆಲೆಯಲ್ಲಿ ಬೆಳಗ್ಗೆ ಎತ್ತುಗಳಿಗೆ ರೈತರು ಮೈತೊಳೆದರು.
ನಂತರ ಅವುಗಳಿಗೆ ಬಣ್ಣ-ಬಣ್ಣದ ರಂಗು ಹೆಚ್ಚಿಸಿದರು. ಕೋಡುಗಳಿಗೆ ಬಣ್ಣ ರಿಬ್ಬನ್, ಕಾಲುಗಜ್ಜೆ, ಕುತ್ತಿಗೆಗೆ ಅಲಂಕಾರಿಕ ಹಗ್ಗ, ಕಟ್ಟಿ ಸಿಂಗಾರ ಮಾಡಿದರು. ಅಲ್ಲದೇ, ಅರಿಸಿಣ, ಕುಂಕುಮ ಹಚ್ಚಿ ಪೂಜೆ ಮಾಡಿದರು. ಮಹಾನಗರ ಸೇರಿದಂತೆ ಜಿಲ್ಲಾದ್ಯಂತ ರೈತರು ಎತ್ತುಗಳನ್ನು ಹೂಡಿ ಓಡಾಡಿಸುವ ಕಾರಹುಣ್ಣಿಮೆ ಆಚರಿಸಿದರು.
ಜಗತ್ ಬಡಾವಣೆಯ ಮೈಲಾರಲಿಂಗೇಶ್ವರ ಗುಡಿಯ ಹತ್ತಿರ ಕಾರಹುಣ್ಣಿಮೆ ಸಡಗರ ಮನೆ ಮಾಡಿತ್ತು. ಮುಖ್ಯ ಬೀದಿಯಲ್ಲಿ ಬಣ್ಣಗಳಿಂದ ಅಲಂಕರಿಸಿದ ಎತ್ತುಗಳನ್ನು ರೈತರು ಉತ್ಸಾಹದಿಂದ ಓಡಾಡಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ವಿಶ್ವ ಹಿಂದೂ ಪರಿಷತ್ ಪ್ರಮುಖರಾದ ರಾಜು ನವಲಿ, ಲಿಂಗರಾಜ ಅಪ್ಪಾಜಿ, ಪ್ರಾಂತ ಗೋರಕ್ಷಾ ಪ್ರಮುಖ ಮಾರ್ತಾಂಡ ಶಾಸ್ತ್ರೀ, ಪ್ರಶಾಂತ ಗುಡ್ಡ, ಅಶ್ವಿನ ಕುಮಾರ ಮತ್ತಿತರರು ಈ ಸಡಗರಕ್ಕೆ ಸಾಕ್ಷಿಯಾದರು.