ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ “ಕಾಣೆಯಾಗಿದ್ದಾಳೆ’ ಸಿನಿಮಾ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ ಸಿನಿಮಾದ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ “ಕಾಣೆಯಾಗಿದ್ದಾಳೆ’ ಸಿನಿಮಾದ ಟೀಸರ್ ಮತ್ತು ಹಾಡನ್ನು ಬಿಡುಗಡೆಗೊಳಿಸಿದೆ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ ಹರೀಶ್, ಹಿರಿಯ ನಟಿ ಗಿರಿಜಾ ಲೋಕೇಶ್, ನಟಿ-ನಿರ್ದೇಶಕಿ ಪ್ರಿಯಾ ಹಾಸನ್, ನಟಿಯರಾದ ಶರಣ್ಯ, ನಿಶಿತಾ ಗೌಡ, ನಿರ್ದೇಶಕ ನವೀನ್ ದ್ವಾರಕನಾಥ್, ನಿರ್ಮಾಪಕ ನವೀನ್ ರಾವ್, ನಾಗೇಶ್ ಮೊದಲಾದ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ “ಕಾಣೆಯಾಗಿದ್ದಾಳೆ’ ಸಿನಿಮಾದ ಟೀಸರ್ ಮತ್ತು ಹಾಡು ಬಿಡುಗಡೆಯಾಯಿತು. ಕನ್ನಡ ಕಿರುತೆರೆ ಮತ್ತು ಸಿನಿಮಾದಲ್ಲಿ ಹಲವು ವರ್ಷಗಳಿಂದ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿರುವ ಆರ್. ಕೆ “ಕಾಣೆಯಾಗಿದ್ದಾಳೆ’ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ಇದೇ ವೇಳೆ ಮಾತನಾಡಿದ ನಿರ್ದೇಶಕ ಆರ್. ಕೆ, “ಐಎಎಸ್ ಮಾಡುವ ಸಲುವಾಗಿ ನಗರಕ್ಕೆ ಬಂದ ಹಳ್ಳಿ ಹುಡುಗಿಯೊಬ್ಬಳು ನಿಗೂಢವಾಗಿ ಕಣ್ಮರೆಯಾಗುತ್ತಾಳೆ. ಅವಳು ಹೇಗೆ ಕಣ್ಮರೆಯಾದಳು ಎನ್ನುವುದೇಸಿನಿಮಾದ ಕಥೆಯ ಒಂದು ಎಳೆ. ಲವ್, ಸೆಂಟಿಮೆಂಟ್, ಎಮೋಶನ್, ಸಸ್ಪೆನ್ಸ್ ಎಲ್ಲ ಅಂಶಗಳನ್ನು ಇಟ್ಟುಕೊಂಡು ಇಡೀ ಕುಟುಂಬ ಕುಳಿತು ನೋಡಬಹುದಾದ ಸಿನಿಮಾ ಮಾಡಿದ್ದೇವೆ’ ಎಂದು ಕಥಾಹಂದರದ ಬಗ್ಗೆ ವಿವರಣೆ ನೀಡಿದರು.
ಇದನ್ನೂ ಓದಿ:ಅಪಾರ್ಟ್ ಮೆಂಟ್, ಕಾರು, ರಟ್ಟಿನ ಬಾಕ್ಸ್ ಗಳಲ್ಲಿ 8 ಕೋಟಿ ನಗದು ಪತ್ತೆ; ನಾಲ್ವರ ಬಂಧನ
“ಕಾಣೆಯಾಗಿದ್ದಾಳೆ’ ಸಿನಿಮಾದಲ್ಲಿ ನವನಟ ವಿನಯ್ ಕಾರ್ತಿಕ್ ನಾಯಕನಾಗಿ, ಕೀರ್ತಿ ಭಟ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಗಿರಿಜಾ ಲೋಕೇಶ್, ವಿನಯಾ ಪ್ರಸಾದ್, ಬಿರಾದಾರ್, ಅಂಜನಾ ಗಿರೀಶ್ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಹೊಸಕೋಟೆ ಬಳಿಯ ಹಳ್ಳಿಯಿಂದ ಕೆಲಸಕ್ಕಾಗಿ ಬೆಂಗಳೂರಿಗೆ ಬಂದವನು ಈ ಸಿನಿಮಾದ ಮೂಲಕ ಹೀರೋ ಆಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದೇನೆ. ಮಂಡ್ಯದ ಹಳ್ಳಿಯೊಂದರ ಮುಗ್ಧ ಹುಡುಗನಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದೇನೆ. ಅಪ್ಪಟ ಹಳ್ಳಿ ಹುಡುಗನ ಜೀವನದಲ್ಲಿ ಏನೇನು ನಡೆಯುತ್ತದೆ ಅನ್ನೋದು ನನ್ನ ಪಾತ್ರ. ಸಿನಿಮಾ ತುಂಬ ಚೆನ್ನಾಗಿ ಬಂದಿದ್ದು, ಪ್ರೇಕ್ಷಕರಿಗೂ ಇಷ್ಟವಾಗಲಿದೆ’ ಎಂಬ ಭರವಸೆಯ ಮಾತು ನಾಯಕ ವಿನಯ್ ಕಾರ್ತಿಕ್ ಅವರದ್ದು.
“ಶ್ರೀಮೈಲಾರಲಿಂಗೇಶ್ವರ ಸಿನಿಮಾಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ, “ಕಾಣೆಯಾಗಿದ್ದಾಳೆ’ ಚಿತ್ರದ ಹಾಡುಗಳಿಗೆ ಕೌಶಿಕ್ ಸಾಹಿತ್ಯ, ಸಂಗೀತ ನೀಡಿದ್ದಾರೆ. “ಕಾಣೆಯಾಗಿದ್ದಾಳೆ’ ಚಿತ್ರದ ಟೈಟಲ್‌ಗೆ “ಹುಡುಕಿ ಕೊಟ್ಟವರಿಗೆ ಬಹುಮಾನ’ ಎಂಬ ಅಡಿಬರಹವಿದ್ದು, ಮಂಡ್ಯ, ಮೇಲುಕೋಟೆ, ಬೆಂಗಳೂರು ಸುತ್ತಮುತ್ತ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ.
ರವಿ ರೈ