ಕೋಲ್ಕತಾ:ಕಾಳಿ ಮಾತೆ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಲೋಕಸಭಾ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಯಾವುದೇ ಕಠಿಣ ಕ್ರಮ ತೆಗೆದುಕೊಂಡಿಲ್ಲ ಎಂದು ಪಶ್ಚಿಮಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ್ ಮುಜುಂದಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಜು.7ರಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಎರಡನೇ ವಿವಾಹ, ಆಪ್ತರಿಗೆ ಆಹ್ವಾನ
ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಹೇಳಿಕೆ ಕೊಟ್ಟ ಮೊಯಿತ್ರಾ ಅವರನ್ನು ಟಿಎಂಸಿ ಪಕ್ಷದಿಂದ ಉಚ್ಛಾಟಿಸಬೇಕು ಇಲ್ಲವೇ ಅಮಾನತುಗೊಳಿಸಬೇಕು ಎಂದು ಮುಜುಂದಾರ್ ಆಗ್ರಹಿಸಿದ್ದಾರೆ.
ಮಹುವಾ ಮೊಯಿತ್ರಾ ಅವರ ಹೇಳಿಕೆಯಿಂದ ತೃಣಮೂಲ ಕಾಂಗ್ರೆಸ್ ಅಂತರ ಕಾಯ್ದುಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಮೊಯಿತ್ರಾ ಹೇಳಿಕೆಗೆ ಸಮ್ಮತಿ ಇಲ್ಲದಿದ್ದರೆ ಕೂಡಲೇ ಮೊಯಿತ್ರಾ ಅವನ್ನು ಪಕ್ಷದಿಂದ ಉಚ್ಛಾಟಿಸಲಿ ಎಂದು ಮುಜುಂದಾರ್ ಸವಾಲು ಹಾಕಿರುವುದಾಗಿ ವರದಿ ತಿಳಿಸಿದೆ.
ಮೊಯಿತ್ರಾ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ, ಬಿಜೆಪಿ ಮಹಿಳಾ ಮೋರ್ಚಾ ಸದಸ್ಯರು ಧರಣಿ ನಡೆಸಲಿದ್ದಾರೆ. ನಂತರ ಆಕೆಯನ್ನು ಬಂಧಿಸುವಂತೆ ಪೊಲೀಸ್ ಠಾಣೆಯಲ್ಲಿ ಮನವಿ ಸಲ್ಲಿಸಲಾಗುವುದು ಎಂದು ಮುಜುಂದಾರ್ ಎಚ್ಚರಿಕೆ ನೀಡಿರುವುದಾಗಿ ಎಎನ್ ಐ ವರದಿ ಮಾಡಿದೆ.
ನಿರ್ದೇಶಕಿ ಲೀನಾ ಮಣಿಮೇಕಲೈ ಅವರ ಸಾಕ್ಷ್ಯಚಿತ್ರದ ಪೋಸ್ಟರ್ ನಲ್ಲಿ ದೇವಿ ಕಾಳಿಯು ಸಿಗರೇಟ್ ಸೇದುವಂತೆ ಚಿತ್ರಿಸಿದ್ದು ಭಾರೀ ವಿವಾದ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಟಿಎಂಸಿ ಸಂಸದೆ ಮೊಯಿತ್ರಾ, ನನ್ನ ಪ್ರಕಾರ ಕಾಳಿ ಮಾಂಸ ಸೇವಿಸುವ ಹಾಗೂ ಮದ್ಯ ಸ್ವೀಕರಿಸುವ ದೇವತೆ ಎಂದು ಹೇಳುವ ಮೂಲಕ ವಿವಾದಕ್ಕೀಡಾಗಿದ್ದಾರೆ.