“ಜನ ಈ ಸಿನಿಮಾವನ್ನು ಇಷ್ಟಪಡುವ ವಿಶ್ವಾಸವಿದೆ..’ – ಹೀಗೆ ಹೇಳಿ ನಕ್ಕರು ವಿಕ್ಕಿ ವರುಣ್. ಅವರು ಹೇಳಿದ್ದು “ಕಾಲಾಪತ್ಥರ್’ ಸಿನಿಮಾದ ಬಗ್ಗೆ. ಈ ಚಿತ್ರ ಇಂದು ತೆರೆಕಾಣುತ್ತಿದೆ.
ಈ ಚಿತ್ರದಲ್ಲಿ ವಿಕ್ಕಿ ಕೇವಲ ನಾಯಕರಲ್ಲ, ಜೊತೆಗೆ ನಿರ್ದೇಶಕ. ಹಾಗಾಗಿ, ಡಬಲ್ ಜವಾಬ್ದಾರಿ, ಡಬಲ್ ಫೀಲಿಂಗ್. ಸಿನಿಮಾ ನಿರ್ದೇಶಕನಾಗಬೇಕೆಂಬ ಕನಸಿನೊಂದಿಗೆ ಬಂದ ವಿಕ್ಕಿ, ಮೊದಲು ಆಗಿದ್ದು ಹೀರೋ. ಈಗ ಹೀರೋ ಜೊತೆಗೆ ನಿರ್ದೇಶನ ಕೂಡಾ ಮಾಡಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ವಿಕ್ಕಿ, “ಚಿತ್ರದಲ್ಲಿ ಒಂದು ಕಪ್ಪು ಕಲ್ಲಿನ ಕಥೆ ಹೇಳಿದ್ದೇವೆ. ಯಾವ ವ್ಯಕ್ತಿ, ಜಾಗ, ಸಿನಿಮಾಗೆ ಸಂಬಂಧ ಪಟ್ಟ ಚಿತ್ರವಲ್ಲ. ಕಾಲ್ಪನಿಕ ಕಥೆ’ ಶಂಕರ ಎಂಬ ಬಿಎಸ್‌ಎಫ್ ಯೋಧನ ವೈಯಕ್ತಿಕ ಜೀವನದ ಕಥೆಯಿದು’ ಎನ್ನುತ್ತಾರೆ. ನಟನೆ, ನಿರ್ದೇಶನ ಎರಡನ್ನೂ ಜೊತೆಗೆ ತೂಗಿಸಿಕೊಂಡು ಹೋಗಿದ್ದು ವಿಕ್ಕಿಗೆ ಒಳ್ಳೆಯ ಅನುಭವವಂತೆ. “ಮೊದಲು ನಿರ್ದೇಶನಕನಾಗಿ ನಂತರ ನಟನಾಗಿ ನಾನು ಬದಲಾಗಬೇಕಿತ್ತು. ಯಾರೇ ತಡವಾಗಿ ಬಂದರೂ ನಾನಂತೂ ಮೊದಲೇ ಸೆಟ್‌ನಲ್ಲಿದ್ದು ಎಲ್ಲವನ್ನು ನೋಡಿಕೊಳ್ಳಬೇಕಿತ್ತು’ ಎನ್ನುತ್ತಾರೆ ವರುಣ್.
ಸಿನಿಮಾದ ಟೈಟಲ್ ಬಗ್ಗೆ ಮಾತನಾಡುವ ವರುಣ್, ಹಿಂದಿ ಸಿನಿಮಾ ಕಾಲಾಪತ್ಥರ್‌ಗೂ, ನೇಪಾಳದ ಕಾಲಾಪತ್ಥರ್ ಶಿಖರಕ್ಕೂ, ಅಂಡಮಾನ್ ಬೀಚ್‌ಗೂ ನಮ್ಮ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಪ್ರೇಕ್ಷಕರಿಗೆ ಈ ಚಿತ್ರ ಒಂದೊಳ್ಳೆಯ ಅನುಭವ ನೀಡಲಿದೆ ಎನ್ನುತ್ತಾರೆ.
ಅಂದಹಾಗೆ, ಈ ಚಿತ್ರವನ್ನು ಭುವನ್ ಮೂವೀಸ್‌ನಡಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ನಿರ್ಮಿಸಿದ್ದಾರೆ.