ಮೈಸೂರು: ನಟ ರಜನಿಕಾಂತ್ ಅಭಿನಯದ “ಕಾಲಾ’ ಚಿತ್ರ ಬಿಡುಗಡೆಗೆ ಕನ್ನಡಪರ ಸಂಘಟನೆಗಳ ವ್ಯಾಪಕ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಗುರುವಾರ ನಗರದ ಯಾವುದೇ ಚಿತ್ರಮಂದಿಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗಲಿಲ್ಲ.
ಕಾವೇರಿ ನದಿ ನೀರು ಹಂಚಿಕೆ ಕುರಿತು ನಟ ರಜನಿಕಾಂತ್ ಅವರ ವಿವಾದಾತ್ಮಕ ಹೇಳಿಕೆಗೆ ಆಕ್ರೋಶಗೊಂಡಿರುವ ಕನ್ನಡಪರ ಸಂಘಟನೆಗಳಿಂದ ಕಾಲಾ ಚಿತ್ರ ಬಿಡುಗಡೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ನಡುವೆ ನಗರದ ಕೆಲವು ಚಿತ್ರಮಂದಿಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಗುರುವಾರ ಬೆಳಗ್ಗೆ ಕಾಲಾ ಚಿತ್ರ ಬಿಡುಗಡೆಯಾಗಬೇಕಿತ್ತು.
ಆದರೆ ಕನ್ನಡಪರ ಸಂಘಟನೆಗಳ ಪ್ರತಿಭಟನೆ ಹಾಗೂ ವಿರೋಧದಿಂದ ಹಿನ್ನೆಲೆಯಲ್ಲಿ ಎಚ್ಚೆತ್ತ ನಗರದ ಮಲ್ಟಿಫ್ಲೆಕ್ಸ್‌ಗಳು ಹಾಗೂ ಚಿತ್ರಮಂದಿರಗಳ ಮಾಲೀಕರು ಕಾಲಾ ಚಿತ್ರ ಬಿಡುಗಡೆಗೆ ಆಸಕ್ತಿ ತೋರಲಿಲ್ಲ. ಹೀಗಾಗಿ ನಗರದ ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳಲ್ಲಿ ಬೆಳಗ್ಗಿನ ಪ್ರದರ್ಶನ ರದ್ದುಗೊಂಡಿತು.
ಮ್ಯಾಟನಿ ಶೋ ಆರಂಭ: ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಬೆಳಗ್ಗಿನ ಪ್ರದರ್ಶನ ರದ್ದುಗೊಳಿಸಿದ್ದ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಮಧ್ಯಾಹ್ನ ಹೊತ್ತಿಗೆ ಪ್ರದರ್ಶನ ಆರಂಭಗೊಂಡಿತು. ಹೀಗಾಗಿ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಮಧ್ಯಾಹ್ನದ ಬಳಿಕ ನಗರದ ಎಂ.ಜಿ.ರಸ್ತೆಯಲ್ಲಿರುವ ಮಾಲ್ ಆಫ್ ಮೈಸೂರ್‌ನಲ್ಲಿರುವ ಐನಾಕ್ಸ್ ಮತ್ತು ಜಯಲಕ್ಷ್ಮಿಪುರಂನಲ್ಲಿರುವ ಡಿಆರ್‌ಸಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಕಾಲಾ ಚಿತ್ರ ಪ್ರದರ್ಶನಗೊಂಡಿತು.
ಆ ಮೂಲಕ ಮಧ್ಯಾಹ್ನದಿಂದ ರಾತ್ರಿವರೆಗಿನ ಒಟ್ಟು ಮೂರು ಶೋಗಳಲ್ಲಿ ಕಾಲಾ ಚಿತ್ರ ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರದರ್ಶನ ಕಂಡಿತು. ಚಿತ್ರ ಪ್ರದರ್ಶನಕ್ಕೆ ಯಾವುದಾದರೂ ಸಂಘಟನೆಗಳು ಪ್ರತಿಭಟನೆ ನಡೆಸುವ ಮೂಲಕ ಅಡ್ಡಿಪಡಲಿವೆ ಎಂಬ ಕಾರಣಕ್ಕೆ ಮಲ್ಟಿಪ್ಲೆಕ್ಸ್ ಚಿತ್ರಮಂದಿರದ ಮಾಲೀಕರು, ಪೋಲಿಸರ ರಕ್ಷಣೆಯಲ್ಲಿ ಚಿತ್ರಪ್ರದರ್ಶನ ಆರಂಭಿಸಿದರು.