ಬೆಳಗಾವಿ : ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ವ್ಯಕ್ತಿಯೊಬ್ಬರು ಕೋವಿಡ್ ಲಸಿಕೆ ತೆಗೆದುಕೊಂಡ ಬಳಿಕ ಮೃತರಾದರು ಎಂಬುದು ಕೇವಲ ವದಂತಿಯಷ್ಟೆ. ಅವರಿಗೆ ಮಧುಮೇಹ ಸಮಸ್ಯೆ ಇದ್ದು ತೀವ್ರ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸ್ಪಷ್ಟನೆ ನೀಡಿದರು
ಬೆಳಗಾವಿಯಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕೋವಿಡ್ ಲಸಿಕೆ ಪಡೆದ ಬಳಿಕ ಅವರಿಗೆ ಯಾವುದೇ ಅಡ್ಡ ಪರಿಣಾಮಗಳು ಕಂಡುಬಂದಿಲ್ಲ. ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಸಂಪೂರ್ಣ ಮಾಹಿತಿ ನೀಡುತ್ತೇವೆ ಎಂದರು.
ರಾಜ್ಯದಲ್ಲಿ ಇದುವರೆಗೆ 30ಸಾವಿರ ಜನರು ಲಸಿಕೆ ತೆಗೆದುಕೊಂಡಿದ್ದಾರೆ. ಯಾರಿಗೂ ಅಡ್ಡ ಪರಿಣಾಮ ಆಗಿಲ್ಲ. 1ನೇ ಹಂತದಲ್ಲಿ ಯಶಸ್ವಿಯಾದ ಬಳಿಕ 2ನೇ ಹಂತಕ್ಕೆ ಹೋಗುತ್ತೇವೆ. ರಾಜ್ಯದಲ್ಲಿ ದಿನಕ್ಕೆ 80ಸಾವಿರ ಮಂದಿಗೆ ಲಸಿಕೆ ನೀಡುವ ಗುರಿ ನೀಡಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ:ಗೋಹತ್ಯೆ ನಿಷೇಧ ಕಾಯ್ದೆ: ಕರಂಬಳ್ಳಿಯಲ್ಲಿ ಮುಖ್ಯಮಂತ್ರಿಗಳಿಂದ ಗೋಪೂಜೆ
ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಅವರು ನನ್ನ ಬಗ್ಗೆ ಮಾತನಾಡಿದ್ದಾರಾ ಎಂದು ಮರು ಪ್ರಶ್ನೆ ಮಾಡಿದರು.
ನಾನು ನನ್ನ ಕೆಲಸದಲ್ಲಿ ತೊಡಗಿದ್ದೇನೆ. ರಾಜ್ಯದ ಜನರ ಆರೋಗ್ಯವೇ ಮುಖ್ಯ. ಹೀಗಾಗಿ, ಕೋವಿಡ್ ಲಸಿಕೆ ಮೊದಲಾದ ಕಾರ್ಯದಲ್ಲಿ ನಿಗಾ ವಹಿಸಿದ್ದೇನೆ. ನಾನು ರಾಜಕೀಯ ಮಾಡುವುದಿಲ್ಲ ಎಂದರು.