Advertisement

ಉಪ್ಪು ತಿಂದವ ನೀರು ಕುಡಿಯಲೇ ಬೇಕು: ಭ್ರಷ್ಟಾಚಾರ ಆರೋಪಕ್ಕೆ ಈಶ್ವರಪ್ಪ ಪ್ರತಿಕ್ರಿಯೆ

07:40 AM Mar 15, 2023 | Team Udayavani |

ಮಣಿಪಾಲ: ಉಪ್ಪು ತಿಂದವ ನೀರು ಕುಡಿಯಲೇ ಬೇಕು. ಹಾಗೆಯೇ ಭ್ರಷ್ಟಾಚಾರ ಮಾಡಿದವರಿಗೆ ಶಿಕ್ಷೆ ಆಗಲೇ ಬೇಕು. ಅದು ಯಾವುದೇ ಪಕ್ಷದವರಾದರೂ ಸರಿ. ನನ್ನ ಮೇಲಿನ ಆರೋಪದ ಸಂಪೂರ್ಣ ತನಿಖೆಯಾಗಿದೆ ಮತ್ತು ನಿರಪರಾಧಿ ಎಂಬುದು ಸಾಬೀತಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಹೇಳಿದರು.

Advertisement

ಡಿ.ಕೆ. ಶಿವಕುಮಾರ್‌ ಅವರ ಮನೆ ಮೇಲೆ ಇ.ಡಿ. ದಾಳಿ ನಡೆದ ಸಂದರ್ಭದಲ್ಲಿ ಸಾವಿರ ಕೋ.ರೂ. ಸಿಕ್ಕಿದೆ. ಅವರು ತಿಹಾರ್‌ ಜೈಲಿಗೂ ಹೋಗಿ ಬಂದಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಅರ್ಕಾವತಿ ಬಡಾವಣೆ ರಿಡೂ ಹೆಸರಿನಲ್ಲಿ 800 ಎಕರೆ ಡಿನೋಟಿಫಿಕೇಶನ್‌ ಮಾಡಿ 8 ಸಾವಿರ ಕೋ.ರೂ. ಲೂಟಿ ಮಾಡಿ ದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಾಂಗ್ರೆಸ್‌ ಏಜೆಂಟ್‌. ಕಾಂಗ್ರೆಸ್‌ ತಾನು ಮಾಡಿದ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ಶೇ. 40 ಕಮಿಷನ್‌ ಆರೋಪ ಮಾಡುತ್ತಿದೆ. ಭ್ರಷ್ಟಾಚಾರ ಯಾರೇ ಮಾಡಿದ್ದರೂ ಶಿಕ್ಷೆ ಅನುಭವಿಸಲಿದ್ದಾರೆ ಎಂದು ಮಂಗಳವಾರ ಮಣಿಪಾಲದ ಹೊಟೇಲ್‌ ಕಂಟ್ರಿಇನ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಯುವ ಜನತೆ ಸ್ಪಂದನೆ
ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯು ಕೇಂದ್ರ ಹಾಗೂ ರಾಜ್ಯ ಸರಕಾರದ ಸಮರ್ಥ ನಾಯಕತ್ವ, ಅಭಿವೃದ್ಧಿ ಕಾರ್ಯಗಳು, ಕಾಂಗ್ರೆಸ್‌ ಪಕ್ಷದ ದುರಾಡಳಿತ, ಭ್ರಷ್ಟಾಚಾರ ನೀತಿ ವಿರೋಧಿಸಿ ಹಾಗೂ ದೇಶ ರಕ್ಷಣೆ, ಸಂಸ್ಕೃತಿ ಉಳಿಸಿ ಬೆಳೆಸಲು ಬಿಜೆಪಿಯನ್ನು ಬೆಂಬಲಿಸಿ ಎಂಬ ವಿಚಾರದೊಂದಿಗೆ ನಾಲ್ಕು ತಂಡಗಳಲ್ಲಿ ರಾಜ್ಯಾದ್ಯಂತ ಸಂಚಾರ ಮಾಡುತ್ತಿದೆ. ಎಲ್ಲೆಡೆ ಯುವ ಸಮೂಹದಿಂದ ಉತ್ತಮ ಪ್ರತಿಕ್ರಿಯೆ, ಬೆಂಬಲ ವ್ಯಕ್ತ ವಾಗುತ್ತಿದೆ ಎಂದರು.

ಪಾಪ ತೊಳೆಯಲಿ
ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿದ್ದಾಗ ಹಲವು ಬಾರಿ ಉಡುಪಿಗೆ ಬಂದಿದ್ದರೂ ಶ್ರೀಕೃಷ್ಣ ಮಠಕ್ಕೆ ಬಂದಿ ರಲಿಲ್ಲ. ಹೀಗಾಗಿಯೇ ಅವರ ಮುಖ್ಯ ಮಂತ್ರಿ ಹುದ್ದೆ ಕೈತಪ್ಪಿತು, ಚಾಮುಂಡಿ ಕ್ಷೇತ್ರದಲ್ಲಿ ಸೋತರು. ಇನ್ನಾದರೂ ತಮ್ಮ ಪಾಪ ಕಳೆದುಕೊಳ್ಳಲು ಅವರು ಶ್ರೀಕೃಷ್ಣ ದರ್ಶನ ಮಾಡಬೇಕು. ಕನಕ ದಾಸರಿಗೆ ಶ್ರೀಕೃಷ್ಣನಿಂದ ಸ್ಫೂರ್ತಿ ಸಿಕ್ಕಿದ ಸ್ಥಳವಿದು. ಇತ್ತೀಚಿಗೆ ಸಿದ್ದರಾಮಯ್ಯ ದೇವಸ್ಥಾನ ಹಾಗೂ ಧರ್ಮಗಳ ಬಗ್ಗೆ ಟೀಕೆ ಮಾಡುವುದು ಕಡಿಮೆ ಮಾಡಿದ್ದಾರೆ. ದೇವಸ್ಥಾನದ ಜೀರ್ಣೋದ್ಧಾರಕ್ಕೂ ದೇಣಿಗೆ ನೀಡುತ್ತಿ ದ್ದಾರೆ. ಸಿದ್ದರಾಮಯ್ಯ ಬಗ್ಗೆ ವೈಯಕ್ತಿಕ ದ್ವೇಷವಿಲ್ಲ. ದೇಶದ್ರೋಹಿಗಳನ್ನು ಮತ್ತು ಧರ್ಮದ್ರೋಹಿಗಳನ್ನು ದ್ವೇಷಿ ಸುತ್ತೇನೆ ಎಂದರು.

ಚಿಂತೆಯಲ್ಲಿ ಕಾಂಗ್ರೆಸ್‌
ಕಾಂಗ್ರೆಸ್‌ಗೆ ನಿರ್ದಿಷ್ಟ ಅಜೆಂಡಾವೇ ಇಲ್ಲ. ಯಾರಧ್ದೋ ಮನೆಯ ಕೂಸು ನಮ್ಮದು ಎನ್ನುವ ಪರಿಸ್ಥಿತಿಯಲ್ಲಿದೆ. ಅದನ್ನು ಒಪ್ಪಲು ಸಾಧ್ಯವಿಲ್ಲ. ಅವರಿಗೆ ಚುನಾವಣೆ ಎದುರಿಸುವುದು ಹೇಗೆ ಎಂಬ ಚಿಂತೆ ಆರಂಭವಾಗಿದೆ. ಬೇರೆಯವರು ಮಾಡಿದ ಅಭಿವೃದ್ಧಿ ಕಾರ್ಯವನ್ನು ತಮ್ಮದು ಎಂದು ಹೇಳುವ ಮನಃಸ್ಥಿತಿ ಕಾಂಗ್ರೆಸ್‌ಗೆ ಬಂದುಬಿಟ್ಟಿದೆ ಎಂದು ಟೀಕಿಸಿದರು.

Advertisement

ಕುಟುಂಬ ರಾಜಕಾರಣ ಇಲ್ಲ
ಪಕ್ಷ ಟಿಕೆಟ್‌ ನೀಡಿದರೆ ಸ್ಪರ್ಧಿ ಸುತ್ತೇನೆ. ಮಗನಿಗೆ ಟಿಕೆಟ್‌ ಕೊಟ್ಟರೆ ನಾನು ಸ್ಪರ್ಧೆ ಮಾಡುವುದಿಲ್ಲ. ನಾನು ಸ್ಪರ್ಧಿಸಿದರೆ ಮಗನಿಗೆ ಟಿಕೆಟ್‌ ಕೇಳುವುದಿಲ್ಲ. ಯಾರಿಗಾದರೂ ಒಬ್ಬರಿಗೆ ಮಾತ್ರ. ಅದೂ ಕೊಡದಿದ್ದರೆ ಸುಮ್ಮನೆ ಇರುತ್ತೇವೆ. ಪಕ್ಷ ಎಲ್ಲವನ್ನೂ ನೀಡಿದೆ ಎಂದರು.

ಸಚಿವರಾದ ಎಸ್‌. ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಪ್ರಮುಖರಾದ ಕುಯಿಲಾಡಿ ಸುರೇಶ್‌ ನಾಯಕ್‌, ಉದಯ ಕುಮಾರ್‌ ಶೆಟ್ಟಿ, ಶಾಸಕರಾದ ರಘುಪತಿ ಭಟ್‌, ಲಾಲಾಜಿ ಮೆಂಡನ್‌, ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ಸಿಂಹ ನಾಯಕ್‌, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ನಯನಾ ಗಣೇಶ್‌, ಹಿಂ. ಮೋರ್ಚಾದ ರಾ.ಪ್ರ. ಕಾರ್ಯದರ್ಶಿ ಯಶ್‌ಪಾಲ್‌ ಸುವರ್ಣ, ಜಿಲ್ಲಾ ಪ್ರ. ಕಾರ್ಯದರ್ಶಿ ನವೀನ್‌ ಶೆಟ್ಟಿ ಕುತ್ಯಾರು, ಜಿಲ್ಲಾ ವಕ್ತಾರ ರಾಘವೇಂದ್ರ ಕಿಣಿ, ಪ್ರಮುಖರಾದ ಕಿಶೋರ್‌ ಕುಂದಾಪುರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next