Advertisement

ಸಿದ್ದರಾಮಯ್ಯನವರೇ ನಿಮಗೆ ನಾಚಿಕೆ ಆಗಲ್ವಾ: ಸಚಿವ ಈಶ್ವರಪ್ಪ ವಾಗ್ದಾಳಿ

01:26 PM Nov 20, 2021 | Team Udayavani |

ಮೈಸೂರು: ದಲಿತ ನಾಯಕ ಜಿ ಪರಮೇಶ್ವರ್ ರನ್ನು ಚುನಾವಣೆಯಲ್ಲಿ ಸೋಲಿಸಿದವರು ನೀವು.  ಆದರೀಗ ನಿಮ್ಮನ್ನು ಸೋಲಿಸಿರುವ ಬಗ್ಗೆ ಕಾರ್ಯಕರ್ತರನ್ನು ಪ್ರಶ್ನೆ ಮಾಡಿದ್ದೀರಲ್ಲಾ ನಿಮಗೆ ನಾಚಿಕೆಯಾಗುವುದಿಲ್ಲವೇ? ದಲಿತ ಸಿಎಂ ವಿಚಾರ ಬಂದಾಗಲೂ ನಾನೇ ದಲಿತ ಎನ್ನುವ ನಿಮಗೆ ನಾಚಿಕೆಯಾಗಲ್ವೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ದಲಿತರು, ಹಿಂದುಳಿದವರು, ಮುಸ್ಲಿಂರನ್ನು ಒಡೆದಾಳುವ ಕೆಲಸವನ್ನು ಮಾಡುತ್ತಿದ್ದಾರೆ. ಪರಮೇಶ್ವರ್ ಸೋಲಿನ ಬಗ್ಗೆ ಅವರನ್ನೇ ಕೇಳಿದ್ದೆ. ಪರಮೇಶ್ವರ ಸಜ್ಜನ ವ್ಯಕ್ತಿ ಅಂತಾನೂ ಹೇಳಲಿಲ್ಲ, ಇಲ್ಲ ಅಂತನೂ ಹೇಳಲಿಲ್ಲ. ನಿಮ್ಮ ಸೋಲು ಮಾತ್ರ ಸೋಲು, ಬೇರೆಯವರ ಸೋಲು ಸೋಲಲ್ಲವೇ? ನಿಮಗೆ ನಾಚಿಕೆ ಆಗಲಿಲ್ಲವಾ ಆಗ? ಬೇರೆಯವರಿಗೆ ಕೈ ತೋರಿದಾಗ ನಾಲ್ಕು ಬೆರಳು ನಮ್ಮ ಕಡೆ ಇರುತ್ತವೆ. ಮುಸ್ಲಿಂರನ್ನು ಎರಡು ಭಾಗ ಮಾಡಿದಿರಿ. ಲಿಂಗಾಯತರನ್ನು ಒಡೆದು ಎರಡು ಭಾಗ ಮಾಡಿದಿರಿ. ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮ ಎಂದು ಟೀಕಿಸಿದರು.

ಪರ್ಸೆಂಟೇಜ್ ಆರೋಪದ ವಿಚಾರಕ್ಕೆ ರಾಜ್ಯಪಾಲರಿಗೆ ದೂರು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯನವರೇ ಕಮೀಷನ್ ಕಿಂಗ್. ಸಿದ್ದರಾಮಯ್ಯ ಪಡೆದುಕೊಂಡ ಕಮಿಷನ್ ವ್ಯವಹಾರದ ಒಟ್ಟು ಮೊತ್ತವೇ ಚಾಮುಂಡೇಶ್ವರಿ ಕ್ಷೇತ್ರದ ಸೋಲು. ಸಿಎಂ ಆದಿಯಾಗಿ ಸೋತು ಕಾಂಗ್ರೆಸ್ ಪಕ್ಷವೇ ಅಧಿಕಾರ ಕಳೆದುಕೊಂಡಿತು. ನಮ್ಮ ಸರ್ಕಾರದಲ್ಲಿ ಯಾವುದೇ ಇಲಾಖೆಯಲ್ಲೂ ಪರ್ಸೆಂಟೇಜ್ ವ್ಯವಹಾರ ನಡೆಯುತ್ತಿಲ್ಲ. ಯಾವುದೇ ಅಧಿಕಾರಿ ಅಥವಾ ಚುನಾಯಿತ ಪ್ರತಿನಿಧಿ ಕಮಿಷನ್ ಪಡೆದಿಲ್ಲ. ಅಂತಹ ಯಾವುದೇ ಆರೋಪ ಇದ್ದರೂ ಖುದ್ದು ದೂರು ಕೊಡಲಿ. ತಕ್ಷಣ ಅವರ‌ ಮೇಲೆ ಕ್ರಮ ಕೈಗೊಳ್ಳುತ್ತೇವೆ. ನಾವು ಶುದ್ದವಾಗಿದ್ದೇವೆ, ಗುತ್ತಿಗೆದಾರರು ನೀಡಿರುವ ದೂರನ್ನು ಗಂಭೀರವಾಗಿ ಪರಿಗಣಿಸುವಂತಿಲ್ಲ ಎಂದರು.

ಮಳೆಯಿಂದ ವ್ಯಾಪಕ ಅನಾಹುತ ಆಗಿದ್ದರೂ ಬಿಜೆಪಿಯವರು ಶಂಖ ಊದುತ್ತಿದ್ದಾರೆಂದು ಮಾಜಿ ಸಿಎಂ ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಕೆ ಎಸ್ ಈಶ್ವರಪ್ಪ,ಜೆಡಿಎಸ್ ನಲ್ಲಿ ಶಂಖ ಊದುವುದಕ್ಕೂ ಯಾರು ಇಲ್ಲದಂತಾಗಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ನವರು ಎಷ್ಟು ಅಭ್ಯರ್ಥಿಗಳನ್ನು ಹಾಕುತ್ತಾರೋ ನೋಡೋಣ ಎಂದು ವ್ಯಂಗ್ಯವಾಡಿದರು.

ಬಿಜೆಪಿಗೆ ಬಹುಮತ: ಮುಂಬರುವ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನಾಲ್ಕು ತಂಡಗಳಾಗಿ ಸಮಾವೇಶಗಳಲ್ಲಿ ಭಾಗಿಯಾಗುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳನ್ನು ಮತದಾರರಿಗೆ ಮನವರಿಕೆ ಮಾಡಿ ಕೊಡುತ್ತಿದ್ದೇವೆ. ಮೈಸೂರು -ಚಾಮರಾಜನಗರ ವಿಧಾನ ಪರಿಷತ್ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ. ಈ ಬಾರಿಯ ಚುನಾವಣೆಯಲ್ಲಿ ನಮ್ಮ ಪಕ್ಷ ಉತ್ತಮ ಸಾಧನೆ ಮಾಡುವ ವಿಶ್ವಾಸವಿದೆ. ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ 15 ರಿಂದ 16 ಕ್ಷೇತ್ರಗಳಲ್ಲಿ ಜಯ ಗಳಿಸಲಿದೆ. ವಿಧಾನ ಪರಿಷತ್ ನಲ್ಲೂ ಬಿಜೆಪಿ ಬಹುಮತ ಸಾಧಿಸಲಿದೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next