ಶಿವಮೊಗ್ಗ: ಹಿಂದಿ ದಿವಸ್ ಬಗ್ಗೆ ಅಮಿತ್ ಶಾ ಹೇಳಿಕೆಯನ್ನು ತಿರುಚಲಾಗಿದೆ. ಇದರಲ್ಲಿ ರಾಜಕೀಯ ಕುತಂತ್ರ ಅಡಗಿದೆ. ಮೊದಲ ಆದ್ಯತೆ ಕನ್ನಡ, ನಮ್ಮ ತಾಯಿ ಕನ್ನಡ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ‘ಅಮಿತ್ ಶಾ ದಡ್ಡ’ ಎಂಬ ಹೇಳಿಕೆಯನ್ನು ಸಿದ್ದರಾಮಯ್ಯ ವಾಪಸ್ ಪಡೆಯಬೇಕು. ಕ್ಷಮೆ ಕೋರಬೇಕು. ಸಿದ್ದರಾಮಯ್ಯಗೆ ತಲೆ ಇದಿದ್ದರೆ ಇಲ್ಲ ಸಲ್ಲದ ಹೇಳಿಕೆ ಕೊಡ್ತಿರಲಿಲ್ಲ. ದಡ್ಡ, ವಡ್ಡ ಸಿದ್ದರಾಮಯ್ಯ ಎಂದರು.
ಜೆಡಿಎಸ್ ಕಾಂಗ್ರೆಸ್ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ಮೈತ್ರಿ ಇದ್ದರೇನು, ಇಲ್ಲದಿದ್ದರೇನು. ಮೈತ್ರಿಯಿದ್ದಾಗ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 25 ಸೀಟು ಪಡೆದಿದೆ. ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ನಿರ್ನಾಮವಾಗಿದೆ. ಯಾವುದೇ ಸಂದರ್ಭದಲ್ಲಿ ಚುನಾವಣೆ ಬಂದ್ರೂ ಬಿಜೆಪಿ ಪೂರ್ಣ ಬಹುಮತ ಪಡೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿ.ಟಿ.ದೇವೆಗೌಡ ಅವರು ಬಿಜೆಪಿ ಬಗ್ಗೆ ಹೆಚ್ಚು ಒಲವು ತೋರುತ್ತಿರುವ ವಿಚಾರದಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಿಜೆಪಿ ಬಗ್ಗೆ ಜಿ.ಟಿ.ದೇವೇಗೌಡ್ರು ಮಾತ್ರ ಅಲ್ಲ. ಹೆಚ್.ಡಿ. ದೇವೇಗೌಡ್ರು, ಸಿದ್ದರಾಮಯ್ಯ ಅವರು ಬಿಜೆಪಿಗೆ ಬಂದರೂ ಆಶ್ಚರ್ಯವಿಲ್ಲ. ಸಾಯೋ ಪಾರ್ಟಿ, ಮುಳುಗೋ ಹಡಗಲ್ಲಿ ಯಾರು ಇರೋಕೆ ಇಷ್ಟ ಪಡ್ತಾರೆ. ಅಷ್ಟಕ್ಕೂ ಕಾಂಗ್ರೆಸ್ ಪಕ್ಷ ಎಲ್ಲಿದೆ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದು ಹೇಗೆ? ಕೆಜೆಪಿ ಹಾಗೂ ಬಿಜೆಪಿಯ ವೋಟು ಹಂಚಿಕೆಯಿಂದಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಅದ್ರೂ.
ಇಲ್ಲವಾಗಿದದ್ದರೆ ಸಿದ್ದರಾಮಯ್ಯ ಎಲ್ಲಿದ್ದಾರೆ ಎಂದು ಹುಡುಕಾಡಬೇಕಿತ್ತು. ಅವರದ್ದೇ ಕ್ಷೇತ್ರದಲ್ಲಿ 36 ಸಾವಿರ ಮತ ಅಂತರದಲ್ಲಿ ಸೋತಿದ್ದಾರೆ. ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು. ಹೇಗಾದ್ರೂ ಮಾಡಿ ವಿರೋಧ ಪಕ್ಷ ಸ್ಥಾನ ಪಡೆಯಲು ಈಗ ವಿಲವಲ ಒದ್ದಾಡ್ತಾ ಇದ್ದಾರೆ. ಇಂತಾ ಪರಿಸ್ಥಿತಿ ಸಿದ್ದರಾಮಯ್ಯ ನಿಗೆ ಬರಬಾರದಿತ್ತು ಎಂದು ಈಶ್ವರಪ್ಪ ತಿರುಗೇಟು ನೀಡಿದರು.