ಕೋಲಾರ: ನನ್ನ ಮಿತಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದೇನೆ, ಚುನಾವಣೆ ಸಂದರ್ಭದಲ್ಲಿ ಅಪಪ್ರಚಾರ, ಆರೋಪಗಳು ಸಹಜವಾಗಿದ್ದು, ಮೈತ್ರಿ ಸರ್ಕಾರದ ಅಂಗ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಇದಕ್ಕೆ ಕಿವಿಗೊಡಬಾರದು ಎಂದು ಮೈತ್ರಿ ಅಭ್ಯರ್ಥಿ ಸಂಸದ ಕೆ.ಎಚ್.ಮುನಿಯಪ್ಪ ಮನವಿ ಮಾಡಿದರು.
ತಾಲೂಕಿನ ವೇಮಗಲ್‌ನಲ್ಲಿ ಯುವ ಕಾಂಗ್ರೆಸ್ ಘಟಕದಿಂದ ಆಯೋಜಿಸಿದ್ದ ಲೋಕಸಭೆ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೆಲವು ಕೆಲಸವಿಲ್ಲದ ವ್ಯಕ್ತಿಗಳು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ, ಇಂತಹವರ ಗಾಳಿ ಮಾತುಗಳನ್ನು ಯಾರು ಕೇಳಬೇಡಿ, ನಾನು ಜಿಲ್ಲೆಯ ಅಭಿವೃದ್ಧಿಯನ್ನು ಎಂದೂ ಕಡೆಗಣಿಸಿಲ್ಲ. 7 ಬಾರಿ ಸಂಸದನಾಗಿ ನನ್ನ ಮೀತಿಯಲ್ಲಿ ಆದ ಕೆಲಸ ಮಾಡಿದ್ದೇನೆ. ಅಭಿವೃದ್ಧಿ ಕೆಲಸ ಮಾಡಿಯೇ ಈಗ ಮತ್ತೆ ಮತ ಕೇಳುತ್ತಿದ್ದೇನೆ. ಏನಾದರೂ ಸಮಸ್ಯೆ ಇದ್ದರೆ ನನಗೆ ಹೇಳಿದರೆ ಕೂಡಲೇ ಬಗೆಹರಿಸುತ್ತೇನೆ. ಅದು ಬಿಟ್ಟು ಇಲ್ಲ ಸಲ್ಲದ ಆರೋಪ ಮಾಡುವುದನ್ನು ಬಿಡಿ ಎಂದು ಎಚ್ಚರಿಕೆ ನೀಡಿದರು.
ಆತಂಕ ಪಡಬೇಕಾಗುತ್ತೆ: ರಾಜ್ಯದ ಮೈಸೂರು, ಚಾಮರಾಜನಗರ, ತುಮಕೂರು, ಮಂಡ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಬಹಳ ಒಗ್ಗಟ್ಟಿನಿಂದ ಅಭ್ಯರ್ಥಿಗಳ ಪರ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ಕೋಮುವಾದಿಗಳ ಶಕ್ತಿ ನಿರ್ಮೂಲನೆ ಮಾಡಲು ಜಾತ್ಯತೀತ ಪಕ್ಷಗಳು ಒಗ್ಗೂಡಿವೆ. ಕಾನೂನು, ಸಂವಿಧಾನವನ್ನು ಸುಟ್ಟು ಹಾಕಬೇಕು, ಬದಲಾವಣೆ ಮಾಡಬೇಕು ಎಂದು ಬಿಜೆಪಿಯವರು ಹೇಳಿದ್ದಾರೆ. ಅವರ ಕೈಗೆ ಅಧಿಕಾರ ಕೊಟ್ಟರೆ ಆತಂಕ ಪಡಬೇಕಾಗುತ್ತಿದೆ ಎಂದು ಹೇಳಿದರು.
ಸಾಮಾನ್ಯ ರೈತರ ಅರ್ಜಿ ಸ್ವೀಕಾರವಾಗಿಲ್ಲ: ದೇಶದಲ್ಲಿ ಶಾಂತಿ ಕಾಪಾಡಲು ಬಿಜೆಪಿ ಕೈಯಲ್ಲಾಗಲಿಲ್ಲ, ದೇಶದಲ್ಲಿ ಅತಿ ಹೆಚ್ಚು ಅಟ್ರಾಸಿಟಿ ಪ್ರಕರಣಗಳು ದಾಖಲಾದವು. ಕೋಮುಗಲಭೆಗಳನ್ನು ಸೃಷ್ಟಿ ಮಾಡಿದರು. ರೈತರ, ಬಡವರ ಸಾಲ ಮನ್ನಾ ಮಾಡದ ಮೋದಿ, ಬಂಡವಾಳ ಶಾಹಿಗಳ ಸಾಲ ಮನ್ನಾ ಮಾಡುತ್ತಾರೆ. ಮೋದಿಗೆ ರೈತರ ಪರ ಕಾಳಜಿಯಿಲ್ಲ. ಹಿಂದೆ ಯುಪಿಎ ಸರ್ಕಾರ 45 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿತು. ಪ್ರಧಾನಿ ನರೇಂದ್ರ ಮೋದಿಗೆ ಕೇಳಿದಾಗ ಯಾವುದೇ ಸ್ಪಂದನೆ ನೀಡಲಿಲ್ಲ. ಈಗ ಅವರು ಮಾಡಿರುವ ಸಾಲ ಮನ್ನಾದಲ್ಲಿ ಕೇವಲ ಬಿಜೆಪಿಯವರ ಅರ್ಜಿಗಳು ಮಾತ್ರ ಇವೆ. ಸಾಮಾನ್ಯ ರೈತರ ಅರ್ಜಿಗಳು ಇಲ್ಲ ಎಂದು ಟೀಕಿಸಿದರು. ಏಳು ಬಾರಿ ಕ್ಷೇತ್ರದ ಜನರ ಆಶೀರ್ವಾದ ಸಿಕ್ಕ ಕಾರಣದಿಂದಲೇ ರಸ್ತೆ, ರೈಲ್ವೆ ಮಾರ್ಗ ಅನುಷ್ಠಾನ ಗೊಂಡಿದೆ. ತಾಲೂಕಿನ ವೇಮಗಲ್, ನರಸಾಪುರ ಬಳಿಗೆ ಕೈಗಾರಿಕೆಗಳು ಬಂದಿದ್ದು, 50 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಸಿಕ್ಕಿದೆ. ಜತೆಗೆ ಅಪೆಲ್ ಕಂಪನಿ ಪ್ರಗತಿಯಲ್ಲಿದ್ದು, 10 ಸಾವಿರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಪ್ರಚೋದನೆ: ಮುಳಬಾಗಿಲು ಚುನಾವಣಾ ವೀಕ್ಷಕಿ ವಸಂತ ಕವಿತಾ, ಕಾಂಗ್ರೆಸ್ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದೆ. ಕಾಂಗ್ರೆಸ್ ಪಕ್ಷ ಹಾಕಿದ ಭದ್ರ ಬುನಾದಿಯಿಂದ ಭಾರತ ವಿವಿಧ ರಂಗಗಳಲ್ಲಿ ಅಭಿವೃದ್ಧಿ ಸಾಧಿಸಿದೆ. ಬಿಜೆಪಿಯವರು ಅಭಿವೃದ್ಧಿ ಬಗ್ಗೆ ಮಾತನಾಡದೆ ರಾಮಮಂದಿರ, ಸಂವಿಧಾನ, ಕಾಶ್ಮೀರದ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಜನರನ್ನು ಪ್ರಚೋದಿಸುತ್ತಿದ್ದಾರೆ ಎಂದು ಟೀಕಿಸಿದರು. ಕ್ಷೇತ್ರದಲ್ಲಿ ಏ.18ರಂದು ನಡೆಯುವ ಚುನಾವಣೆಯಲ್ಲಿ ಮತದಾರರು ಕಡ್ಡಾಯವಾಗಿ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಉಳಿಸಬೇಕು. ನೀವು ಯಾರಿಗಾದರೂ ಮತ ಹಾಕಿ, ಒಟ್ಟಿನಲ್ಲಿ ತಮ್ಮ ಹಕ್ಕು ಚಲಾಯಿಸುವುದು ಮರೆಯಬೇಡಿ ಎಂದು ಸಲಹೆ ನೀಡಿದರು.