ಬೆಂಗಳೂರು: ಜ್ಯೋತಿ ಸಂಜೀವಿನಿ ಆರೋಗ್ಯ ವಿಮೆ ಯೋಜನೆಯನ್ನು ಅನುದಾನಿತ ಶಾಲಾ ಶಿಕ್ಷಕರಿಗೂ ವಿಸ್ತರಿಸುವ ನಿಟ್ಟಿನಲ್ಲಿ ಸಭೆ ಕರೆದು ಚರ್ಚಿಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.
ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಶಿಕ್ಷಕರ ರಾಜ್ಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಜ್ಯೋತಿ ಸಂಜೀವಿನಿ ಯೋಜನೆಯಲ್ಲಿ ರಾಜ್ಯ ಸರಕಾರಿ ನೌಕರರು ಫಲಾನುಭವಿಗಳಾಗಿದ್ದಾರೆ. ಪ್ರಮುಖ 7 ಆರೋಗ್ಯ ಸೇವೆಗಳನ್ನು ಉಚಿತವಾಗಿ ಯೋಜನೆ ಮೂಲಕ ಒದಗಿಸಲಾಗುತ್ತಿದೆ. ಅನುದಾನಿತ ಶಾಲಾ ಶಿಕ್ಷಕರನ್ನೂ ಯೋಜನೆ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಸಭೆ ಕರೆಯುವುದಾಗಿ ಹೇಳಿದರು.
ಅನುದಾನಿತ ಶಾಲೆಗಳ ಮಾನ್ಯತೆ ನವೀಕರಣ ವಿಚಾರದಲ್ಲಿ ನಿಯಮಗಳನ್ನು ಸರಳಗೊಳಿಸುವ ಅಗತ್ಯ ಇರುವುದು ನನ್ನ ಗಮನದಲ್ಲಿದೆ. ಈ ಬಗ್ಗೆ ಸರಕಾರದ ಮಟ್ಟದಲ್ಲಿ ನಿರ್ಣಯಗಳಾಗಬೇಕು. ಶಿಕ್ಷಣ ಸಚಿವರು, ಸಿಎಂ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳೊಣ ಎಂದು ತಿಳಿಸಿದರು.
ದೇಶದ ಪ್ರಗತಿಗೆ ಶಿಕ್ಷಣ ಮತ್ತು ಆರೋಗ್ಯ ಎರಡು ಪ್ರಮುಖವಾದವು. ಸಾಕ್ಷರತೆ ಹೆಚ್ಚಾದಷ್ಟು ಒಳ್ಳೆಯದು. ಅಲ್ಲದೆ, ಆರೋಗ್ಯವಂತ ಸಮಾಜ ಕೂಡ ಇರಬೇಕು. ಎರಡು ಇದ್ದಾಗ ಮಾತ್ರ ದೇಶದ ಪ್ರಗತಿಗೆ ಹೆಚ್ಚು ಕೊಡುಗೆ ನೀಡಲು ಸಾಧ್ಯ ಎಂದರು.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಮೇಲ್ಮನೆ ಮಾಜಿ ಸದಸ್ಯ ಪುಟ್ಟಣ್ಣ ಉಪಸ್ಥಿತರಿದ್ದರು.