Advertisement
ಬಸ್ ತಂಗುದಾಣದ ಎದುರು ಬಸ್ ತಂಗುದಾಣ ಮತ್ತು ರಸ್ತೆಯ ನಡುವೆ ಖಾಲಿ ಜಾಗವಿತ್ತು. ಅದು ರಸ್ತೆಗೆ ಸಮತಟ್ಟಾಗಿರಲಿಲ್ಲ ಮತ್ತು ಕಾಂಕ್ರೀಟ್ ಹಾಕಿರಲಿಲ್ಲ. ಅಲ್ಲದೆ ಈ ಸ್ಥಳವನ್ನು ಆಟೋರಿಕ್ಷಾಗಳು ಅತಿಕ್ರಮಿಸಿಕೊಂಡಿದ್ದವು. ಹಾಗಾಗಿ ಬಂಟ್ಸ್‌ಹಾಸ್ಟೆಲ್ ವೃತ್ತದ ಕಡೆಯಿಂದ ಅಂಬೇಡ್ಕರ್ ವೃತ್ತದ ಕಡೆಗೆ ಸಾಗುವ ಬಸ್‌ಗಳು ಈ ಬಸ್ ತಂಗುದಾಣದ ಎದುರು ರಸ್ತೆಯಲ್ಲಿಯೇ ನಿಲುಗಡೆಯಾಗುತ್ತಿದ್ದವು. ಇದರಿಂದ ಇಲ್ಲಿನ ರಸ್ತೆಯಲ್ಲಿ ಸಂಚರಿಸುವ ಇತರ ವಾಹನಗಳಿಗೆ ಅಡ್ಡಿಯಾಗಿ ಪದೇ ಪದೇ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಈ ಬಗ್ಗೆ ‘ಸುದಿನ’ದಲ್ಲಿ ವರದಿ ಪ್ರಕಟಿಸ ಲಾಗಿತ್ತು. ಬಳಿಕ ಖಾಲಿ ಜಾಗಕ್ಕೆ ಕಾಂಕ್ರೀಟ್ ಹಾಕಿ ಸಮತಟ್ಟುಗೊಳಿಸಿ ಬಸ್‌ಗಳು ಬಸ್ ತಂಗುದಾಣದ ಪಕ್ಕದಲ್ಲೇ ನಿರ್ಮಿಸಲು ‘ಬಸ್ ಬೇ’ ಮಾದರಿಯಲ್ಲಿ ಅವಕಾಶ ನೀಡಲಾಗಿತ್ತು. ಕಾಂಕ್ರೀಟ್ ಹಾಕಿದ ಬಳಿಕ ಆರಂಭದ ಕೆಲವು ದಿನಗಳಲ್ಲಿ ಬಸ್‌ಗಳು ‘ಬಸ್ ಬೇ’ಯಲ್ಲಿ ನಿಲುಗಡೆಯಾಗುತ್ತಿದ್ದವು. ಆದರೆ ಅನಂತರ ಕೆಲವು ಬಸ್ ಚಾಲಕರ ನಿರ್ಲಕ್ಷ್ಯ, ‘ಬಸ್ ಬೇ’ಗಾಗಿ ಮೀಸಲಿಟ್ಟ ಸ್ಥಳದಲ್ಲಿ ಆಟೋರಿಕ್ಷಾಗಳ ನಿಲುಗಡೆಯ ಕಾರಣದಿಂದ ಬಸ್‌ಗಳನ್ನು ಮತ್ತೆ ರಸ್ತೆಯ ಲ್ಲಿಯೇ ನಿಲುಗಡೆ ಮಾಡಲಾಗುತ್ತಿದೆ.
ಬಸ್‌ಬೇಗಾಗಿ ಮೀಸಲಿಟ್ಟಿರುವ ಸ್ಥಳ ಮತ್ತು ರಸ್ತೆಯ ನಡುವೆ ಟ್ರಾಫಿಕ್ ಕೋನ್ಸ್ ಗಳನ್ನು ಅಳವಡಿಸಿ ಪ್ರತ್ಯೇಕಿಸಿಕೊಟ್ಟರೆ ಅಲ್ಲಿ ಬಸ್‌ಗಳು ನಿಲುಗಡೆಯಾಗಬಹುದು. ಅದೇ ರೀತಿ ಈ ಸ್ಥಳದಲ್ಲಿ ಆಟೋರಿಕ್ಷಾಗಳ ಅನಧಿಕೃತ ಪಾರ್ಕಿಂಗ್‌ನ್ನು ನಿಷೇಧಿಸಿ ಪೊಲೀಸರು ನಿಗಾ ವಹಿಸಿದರೆ ಬಸ್‌ಗಳ ನಿಲುಗಡೆ, ಇತರ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಬಹುದು ಎನ್ನುತ್ತಾರೆ ಪ್ರಯಾಣಿಕರು, ಇತರ ವಾಹನಗಳ ಚಾಲಕರು.