Advertisement

ಜಂಬು ನೇರಳೆ ಬಲು ದುಬಾರಿ

03:47 PM Jun 10, 2019 | Suhan S |

ಬಂಗಾರಪೇಟೆ: ಬೇಸಿಗೆ ಮುಗಿಯುತ್ತಿದ್ದಂತೆಯೇ ಪಟ್ಟಣದಲ್ಲಿ ಜಂಬುನೇರಳೆ ಮಾರಾಟ ಪ್ರಾರಂಭವಾಗುತ್ತದೆ. ಸಕ್ಕರೆ ಕಾಯಿಲೆ ನಿಯಂತ್ರಿಸುವ ಹಾಗೂ ಜೀರ್ಣಶಕ್ತಿ ವೃದ್ಧಿಸುವ ಜಂಬು ನೇರಳೆ ಸಿಗುವುದೇ ಈಗ ಅಪರೂಪವಾಗಿದೆ. ಒಂದು ಕೆ.ಜಿ. ಜಂಬು ನೇರಳೆ ಬೆಲೆ 250 ರೂ. ಇದ್ದು, ದುಬಾರಿಯಾದರೂ ಮಾರಾಟ ಭರದಿಂದ ಸಾಗಿದೆ.

Advertisement

ಒಗರು, ಸಿಹಿ ಮಿಶ್ರಿತವಾಗಿರುವ ಜಂಬು ನೇರಳೆಹಣ್ಣಿನ ಮರಗಳು ತಾಲೂಕಿನಲ್ಲಿ ತೀರಾ ಅಪರೂಪವಾಗಿದೆ. ಗ್ರಾಮೀಣ ಪ್ರದೇಶದಲ್ಲೂ ಹೆಚ್ಚಾಗಿ ಕಾಣಿಸುವುದಿಲ್ಲ. ಪಟ್ಟಣ ಪ್ರದೇಶಗಳಲ್ಲಿ ಕೆಲವರು ತಮ್ಮ ಮನೆಯ ಅಂಗಳದಲ್ಲಿ ಒಂದೊಂದು ಮರ ಬೆಳೆಸಿಕೊಂಡಿದ್ದಾರೆ.

ನೆರೆಯ ಆಂಧ್ರ ಪ್ರದೇಶದ ಮದನಪಲ್ಲಿ ಮತ್ತು ಪಲಮನೇರು ಪ್ರದೇಶಗಳಿಂದ ಮಾರುಕಟ್ಟೆಗೆ ನೇರಳೆಹಣ್ಣು ತಂದು ಪಟ್ಟಣದ ಐದಾರು ಕಡೆ ಮಾತ್ರ ಮಾರಾಟ ಮಾಡಲಾಗುತ್ತಿದೆ. ಒಂದು ಕೆ.ಜಿ. ಜಂಬು ನೇರಳೆಹಣ್ಣಿನ ಬೆಲೆ 250 ರೂ. ಆಗಿರುವುದರಿಂದ ತಿನ್ನಲು ಬಯಕೆ ಇದ್ದರೂ ಬೆಲೆ ದುಬಾರಿ ಎನಿಸಿದೆ.

ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆ ಪಕ್ಕದ ರಸ್ತೆಯಲ್ಲಿ, ಸಾಯಿಬಾಬಾ ದೇಗುಲದ ಸರ್ಕಲ್, ಬಸ್‌ ನಿಲ್ದಾಣ, ಕುವೆಂಪು ರಸ್ತೆ ಸೇರಿ ಐದಾರು ಕಡೆ ನೇರಳೆ ಹಣ್ಣು ಮಾರಾಟ ಮಾಡುತ್ತಿದ್ದು, ಸಾರ್ವಜನಿಕರು 100 ಗ್ರಾಂ, 200 ಗ್ರಾಂ ಲೆಕ್ಕದಲ್ಲಿ ಕೊಂಡುಕೊಳ್ಳುತ್ತಿದ್ದಾರೆ.

ಜೂನ್‌ ತಿಂಗಳು ಜಂಬು ನೇರಳೆಹಣ್ಣಿನ ಸುಗ್ಗಿಯ ಕಾಲವಾಗಿದೆ. ದೊಡ್ಡ ಗಾತ್ರದಲ್ಲಿರುವ ಜಂಬು ನೇರಳೆ ಹಣ್ಣು ನೋಡಲು ಸುಂದರವಾಗಿರುತ್ತದೆ. ಒಗರು, ರುಚಿಯನ್ನು ಹೊಂದಿರುವ ಹಣ್ಣುಗಳನ್ನು ಉಪ್ಪಿನೊಂದಿಗೆ ತಿಂದರೆ ಬಲು ರುಚಿಯಾಗಿರುತ್ತದೆ.

Advertisement

ಜಂಬು ನೇರಳೆಹಣ್ಣು ರಕ್ತದೊತ್ತಡ, ಸಕ್ಕರೆ ಕಾಯಿಲೆ ನಿಯಂತ್ರಿಸುವ ಶಕ್ತಿ ಹೊಂದಿದೆ. ಹೀಗಾಗಿ ಜಂಬು ನೇರಳೆ ಸೇವಿಸುವವರ ಸಂಖ್ಯೆ ಹೆಚ್ಚಾಗಿದ್ದು, ಉತ್ಪಾದನೆ ಕಡಿಮೆಯಾಗಿದೆ. ಇದರಿಂದ ಇವುಗಳ ಬೆಲೆ ಗಗನಕ್ಕೇರಿದೆ.

ಜಂಬು ನೇರಳೆಹಣ್ಣು ಮೆದುಜೀರಕ ಗ್ರಂಥಿಯ ಮೇಲೆ ಪರಿಣಾಮ ಬೀರುವುದರಿಂದ ಸಕ್ಕರೆ ಕಾಯಿಲೆಗೆ ಉತ್ತಮ ಔಷಧಿ ಅಂಶವುಳ್ಳ ಹಣ್ಣಾಗಿದೆ. ಪ್ರತಿ ದಿನ ಮತ್ತು ಸಂಜೆ ಜಂಬು ನೇರಳೆ ಹಣ್ಣಿನ ಬೀಜದ ಪುಡಿಯನ್ನು ಸೇವಿಸುವುದರಿಂದ ಅತಿಯಾದ ಮೂತ್ರದ ತೊಂದರೆ ನಿವಾರಣೆಯಾಗುತ್ತದೆ ಎಂಬುದು ವೈದ್ಯರ ಅನಿಸಿಕೆ.

ಜಂಬು ನೇರಳೆಹಣ್ಣು ಮೂಲವ್ಯಾದಿ ಹಾಗೂ ಪಿತ್ತ ಜನಕಾಂಗ ತೊಂದರೆಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಜಂಬು ನೇರಳೆಹಣ್ಣಿನಲ್ಲಿ ನೈಸರ್ಗಿಕ ಆಮ್ಲಿಯ ಪದಾರ್ಥಗಳಿದ್ದು, ದೇಹದಲ್ಲಿ ಜೀರ್ಣಕ್ರಿಯೆಗೆ ಅನುಕೂಲವಾಗಿದೆ. ಪಿತ್ತ ಜನಕಾಂಗ ಕಾರ್ಯಗಳನ್ನು ಉತ್ತೇಜಿಸುವಲ್ಲಿ ಸಹಕಾರಿಯಾಗಿದೆ ಎಂಬುದು ವೈದ್ಯರ ಸಲಹೆ.

● ಎಂ.ಸಿ.ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next