Advertisement

ಬರ ನಿರ್ವಹಣೆಗೆ ಸಮರ್ಥನೆ: ಬಿಜೆಪಿ ಸಭಾತ್ಯಾಗ

11:32 AM Jun 21, 2017 | Team Udayavani |

ವಿಧಾನ ಪರಿಷತ್ತು: ಸಹಕಾರ ಸಂಘಗಳಲ್ಲಿನ ರಾಜ್ಯ ರೈತರ ಸಾಲ ಮನ್ನಾ ಮಾಡಬೇಕು, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಶಾಸಕರ ನೇತೃತ್ವದ ಕಾರ್ಯಪಡೆ ಬದಲಿಗೆ ಅಧಿಕಾರಿಗಳ ನೇತೃತ್ವದ ಕಾರ್ಯಪಡೆ ರಚಿಸಬೇಕೆಂಬ ಮನವಿಗೆ ಸರ್ಕಾರದ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಬಿಜೆಪಿಸದಸ್ಯರು ಸಭಾತ್ಯಾಗ ಮಾಡಿದ ಪ್ರಸಂಗ ಮೇಲ್ಮನೆಯಲ್ಲಿ ಮಂಗಳವಾರ ನಡೆಯಿತು.

Advertisement

ಬರ ಪರಿಸ್ಥಿತಿಗೆ ಸಂಬಂಧಪಟ್ಟಂತೆ ನಡೆದ ಸುದೀರ್ಘ‌ ಚರ್ಚೆ ಬಳಿಕ ಮಂಗಳವಾರ ಸಚಿವರಾದ ಕಾಗೋಡು ತಿಮ್ಮಪ್ಪ, ಎಚ್‌. ಕೆ.ಪಾಟೀಲ್‌ ಹಾಗೂ ಕೃಷ್ಣ ಭೈರೇಗೌಡ ಅವರು ಅಂಕಿಸಂಖ್ಯೆ ನೀಡಿ ಸರ್ಕಾರ ಬರವನ್ನು ಸಮರ್ಥವಾಗಿ ನಿರ್ವಹಿಸಿದೆ ಎಂದು ಸಮರ್ಥನೆ ನೀಡಿದರು. ಇದಕ್ಕೆ ಸಮಾಧಾನಗೊಳ್ಳದ ಪ್ರತಿಪಕ್ಷ ಬಿಜೆಪಿ ಸದಸ್ಯರು ಸಾಲ ಮನ್ನಾ ಬಗ್ಗೆ ಘೋಷಣೆ ಮಾಡದ ಸರ್ಕಾರದ ಧೋರಣೆ ಖಂಡಿಸಿ ಸಭಾತ್ಯಾಗ ಮಾಡಿದರು.

ಸ್ಪಂದಿಸುವ ಸಮಾಧಾನವಿದೆ: ಇದಕ್ಕೂ ಮೊದಲು ಉತ್ತರ ನೀಡಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, “ರಾಜ್ಯದಲ್ಲಿ ತೀವ್ರವಾಗಿ ಕಾಣಿಸಿಕೊಂಡ ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ಎದುರಿಸಿ ಜನರಿಗೆ ಸ್ಪಂದಿಸಿದ ಸಮಾಧಾನವಿದೆ. ಮುಖ್ಯಮಂತ್ರಿಗಳು ಬರಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಳೆದ ವರ್ಷ ಮುಂಗಾರು ಹಂಗಾಮಿನ ಬೆಳೆ ಹಾನಿಗೆ ಕೇಂದ್ರ ಸರ್ಕಾರವು 1685.52 ಕೋಟಿ ರೂ. ಹಣ ನೀಡಿದ್ದು, ಈವರೆಗೆ 22.99 ಲಕ್ಷ ಫ‌ಲಾನುಭವಿಗಳ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡಲಾಗಿದೆ.

ಬಾಕಿ ಉಳಿದವರಿಗೂ ಬೆಳೆಹಾನಿ ಮೊತ್ತ ವಿತರಿಸಲಾಗುವುದು. ಹಿಂಗಾರು ಹಂಗಾಮಿನಲ್ಲಿ 7097 ಕೋಟಿ ರೂ. ಬೆಳೆ ನಷ್ಟದ ಅಂದಾಜು ಇದ್ದು 3,310 ಕೋಟಿ ರೂ. ಪರಿಹಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಹಿಂಗಾರು ಬೆಳೆ ನಷ್ಟ ಪರಿಹಾರ ಬಿಡುಗಡೆ ಮಾಡುವಂತೆ ಸದ್ಯದಲ್ಲೇ ಕೇಂದ್ರ ಗೃಹ ಸಚಿವರಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು.

Advertisement

ಸಚಿವ ಕೃಷ್ಣ ಭೈರೇಗೌಡ, ರಾಜ್ಯ ಸರ್ಕಾರದ ಪ್ರಯತ್ನದ ಫ‌ಲವಾಗಿ ರೈತರಿಗೆ ತ್ವರಿತವಾಗಿ ಬೆಳೆ ನಷ್ಟ ಪರಿಹಾರ ವಿತರಿಸಲು ಸಾಧ್ಯವಾಗಿದೆ. 2012-13ರಲ್ಲಿ ರೈತರಿಗೆ ಕೇವಲ 649 ಕೋಟಿ ರೂ. ಬೆಳೆ ನಷ್ಟ ಪರಿಹಾರ ವಿತರಿಸಿದ್ದರೆ, 2015-16ನೇ ಸಾಲಿನಲ್ಲಿ ಒಟ್ಟು 3,331 ಕೋಟಿ ರೂ. ಪರಿಹಾರ ವಿತರಿಸಲಾಗಿದೆ ಎಂದು ಹೇಳಿದರು.

ಸಾಧ್ಯವಾಗದಿದ್ದರೆ ಬಡ್ಡಿ ಸೇರಿ ಹಣ: ಸಚಿವ ಎಚ್‌.ಕೆ.ಪಾಟೀಲ್‌, “ಉದ್ಯೋಗ ಖಾತರಿ ಯೋಜನೆಯಡಿ
ಶೇ.91ರಷ್ಟು ಫ‌ಲಾನುಭವಿಗಳ ಆಧಾರ್‌ ಜೋಡಣೆ ಪೂರ್ಣಗೊಂಡಿದ್ದು, ಬ್ಯಾಂಕ್‌ಗಳಲ್ಲಿ ಆಧಾರ್‌ ಜೋಡಣೆ
ಶೇ.43ರಷ್ಟು ಮಾತ್ರವಿದ್ದು, ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಲಾಗಿದೆ.

15 ದಿನದೊಳಗೆ ಫ‌ಲಾನುಭವಿಗಳಿಗೆ ವೇತನ ನೀಡಲಾಗುತ್ತಿದೆ. ಒಂದೊಮ್ಮೆ 15 ದಿನದೊಳಗೆ ಸಾಧ್ಯವಾಗದಿದ್ದರೆ ಶೇ.0.05ರಷ್ಟು ಬಡ್ಡಿ ನೀಡಲಾಗುತ್ತದೆ ಎಂದು ತಿಳಿಸಿದರು .

ಸದನ ನಿರ್ಣಯ ಕೈಗೊಂಡರೆ ಸೂಕ್ತ: ಬಳಿಕ ಕಾಂಗ್ರೆಸ್‌ನ ವಿ.ಎಸ್‌.ಉಗ್ರಪ್ಪ, ರಾಷ್ಟ್ರೀಕೃತ, ವಾಣಿಜ್ಯ ಬ್ಯಾಂಕ್‌ಗಳ ಸಾಲ ಮನ್ನಾ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಉಭಯ ಸದನಗಳಲ್ಲೂ ನಿರ್ಣಯ ಕೈಗೊಳ್ಳುವತ್ತ ಚಿಂತಿಸಬಹುದು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಜೆಡಿಎಸ್‌ನ ರಮೇಶ್‌ಬಾಬು, “ರಾಜ್ಯ ಸರ್ಕಾರವು ಸಹಕಾರ ಸಂಘ/ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾ ಮಾಡಿದರೆ ಉಭಯ ಸದನದಲ್ಲಿ ನಿರ್ಣಯ ಕೈಗೊಳ್ಳುವುದನ್ನು ಜೆಡಿಎಸ್‌ ಬೆಂಬಲಿಸಲಿದೆ ಎಂದು ಹೇಳಿದರು. ಬಳಿಕಬರ ಕುರಿತ ಚರ್ಚೆಗೆ ತೆರೆಬಿತ್ತು.

ಸರ್ಕಾರದ ಧೋರಣೆಗೆ ಖಂಡನೆ
ಮೂವರು ಸಚಿವರ ಉತ್ತರಕ್ಕೆ ಸಮಾಧಾನಗೊಳ್ಳದ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ, ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಳಕಳಿಯಿದ್ದಂತಿಲ್ಲ. ಪಂಜಾಬ್‌, ಮಹಾರಾಷ್ಟ್ರ, ಉತ್ತರ ಪ್ರದೇಶದಲ್ಲಿ ಸಾಲ ಮನ್ನಾ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೂ ಸಹಕಾರಿ ಸಂಘ/ ಬ್ಯಾಂಕ್‌ಗಳಲ್ಲಿನ 10,760 ಕೋಟಿ ರೂ. ಸಾಲ ಮನ್ನಾ ಮಾಡಿ ರೈತರಿಗೆ ನೆರವಾಗಬೇಕಿತ್ತು.ಆದರೆ ಸ್ಪಂದಿಸದ ಹಿನ್ನೆಲೆಯಲ್ಲಿ ಸರ್ಕಾರದ ಧೋರಣೆ ಖಂಡಿಸಲಾಗುವುದು’ ಎಂದು ಹೇಳುತ್ತಾ ಸಭಾತ್ಯಾಗ ನಡೆಸಿದರು.  

ಬರದ ಹಿನ್ನೆಲೆಯಲ್ಲಿ ಅಡಿಕೆ, ತೆಂಗು ತೋಟಗಾರಿಕೆ ಬೆಳೆಗೂ ನಷ್ಟವಾಗಿದ್ದು, ಈ ಬಗ್ಗೆ ಸರ್ವೇ ನಡೆಯುತ್ತಿದ್ದು, ಸಂಪುಟ ಉಪಸಮಿತಿ ವರದಿ ಸಲ್ಲಿಸಿದ ನಂತರ ಮರಗಳ ಸಂಖ್ಯೆಗೆ ಅನುಗುಣವಾಗಿ ಇಲ್ಲವೇ ಹೆಕ್ಟೇರ್‌ವಾರು ಪರಿಹಾರ ನೀಡಬೇಕೆ ಎಂಬ ಬಗ್ಗೆ ಪರಿಶೀಲಿಸಿ ನಿರ್ಧರಿಸಲಾಗುವುದು.
ಕಾಗೋಡು ತಿಮ್ಮಪ್ಪ, ಕಂದಾಯ ಸಚಿವ

ಬರ ಪರಿಸ್ಥಿತಿ ನಿರ್ವಹಣೆಗೆ ಸಚಿವರು ನೀಡಿದ ಉತ್ತರ ಹಳೇ ಬ್ರೋಕನ್‌ ರೆಕಾರ್ಡ್‌ ಅನ್ನು ಮತ್ತೂಮ್ಮೆ ಕೇಳಿದಂತಾಯಿತು. ಸಚಿವರು ಕಾಗದದಲ್ಲಿರುವುದನ್ನು ನೋಡಿ ಉತ್ತರ ನೀಡುತ್ತಿದ್ದಾರೆ. ನಾನು ಸ್ಥಳಕ್ಕೆ ಹೋಗಿ ವಸ್ತುಸ್ಥಿತಿ ನೋಡಿ ಬಂದಿದ್ದೇನೆ. ಅಧಿಕಾರಿಗಳ ಮೇಲೆ ನಿಯಂತ್ರಣವಿಲ್ಲದ ಕಾರಣ ಬಹಳಷ್ಟು ಯೋಜನೆಗಳು ಕಾಗದದಲ್ಲೇ ಉಳಿದಿವೆ. 
– ಕೆ.ಎಸ್‌.ಈಶ್ವರಪ್ಪ, ಪ್ರತಿಪಕ್ಷ ನಾಯಕ

ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಸಂಸ್ಥೆ (ಕೆಆರ್‌ಐಡಿಎಲ್‌) ನಿರ್ಮಿಸಿರುವ ಶುದ್ಧ ನೀರಿನ ಘಟಕಗಳ ನಿರ್ವಹಣೆ ಹಾಗೂ ಮೇಲ್ವಿಚಾರಣೆಯನ್ನು ಜೂನ್‌ 30ರವರೆಗೆ ಮಾತ್ರವಲ್ಲದೇ ಇನ್ನೂ ಆರು ತಿಂಗಳ ಅವಧಿಗೆ ವಿಸ್ತರಿಸಲಾಗುವುದು. ಈ ಸಂಬಂಧ ಸೂಕ್ತ ಆದೇಶ ಹೊರಡಿಸಲಾಗುವುದು.
– ಎಚ್‌.ಕೆ.ಪಾಟೀಲ್‌, ಸಚಿವ
 

Advertisement

Udayavani is now on Telegram. Click here to join our channel and stay updated with the latest news.

Next