ಸಮಾಜದಲ್ಲಿ ನಮಗೆ ಬದುಕಲು ಹಲವಾರು ವೃತ್ತಿ ಮತ್ತು ದಾರಿಗಳಿವೆ. ಬಹಳಷ್ಟು ಜನ ನ್ಯಾಯಯುತವಾಗಿ ಜೀವನ ಸಾಗಿಸಿದರೆ, ಇನ್ನು ಕೆಲವರು ಅನ್ಯಾಯದ ಹಾದಿಯಲ್ಲಿ ಸಾಗುತ್ತಾರೆ. ಈ ದ್ವಂದ್ವವೇ ನಾಟಕದ ಮೂಲ ವಸ್ತು.
ನಮ್ಮ ಸುತ್ತಲಿನ ಸಮಾಜ ಸ್ವಸ್ಥವಾಗಿ ಇರಬೇಕಾದರೆ ನಮ್ಮೊಳಗಿನ ದುರಾಸೆ, ದುರಹಂಕಾರ, ದುರ್ಗುಣ ಮತ್ತು ದುಶ್ಚಟ ಮುಂತಾದುವುಗಳನ್ನು ದೂರ ಮಾಡುವುದರ ಹೊರತು ಬೇರೆ ದಾರಿಯಿಲ್ಲ. ರಂಗಭೂಮಿಯಂತಹ ಸಾಂಸ್ಕೃತಿಕ ಚಟುವಟಿಕೆಗಳು ಸಮಾಜದ ಎಲ್ಲರನ್ನೂ ಒಗ್ಗೂಡಿಸಿ ಸಾಮರಸ್ಯದ ಬದುಕನ್ನು ಮುನ್ನಡೆಸುವ ಶಕ್ತಿ ಹೊಂದಿದೆ. ಹಾಗಾಗಿ ಭಾವೀ ಪ್ರಜೆಗಳಾದ ಎಳೆಯರನ್ನು ಶಿಕ್ಷಣದ ಜೊತೆಗೆ ಇಂತಹ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗುವಂತೆ ನಾವು ಮಾಡಬೇಕಾಗಿದೆ. ಅದಕ್ಕಾಗಿ ಬ್ರಹ್ಮಾವರದ ಬೈಕಾಡಿಯ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆಯಾದ ಮಂದಾರ(ರಿ.) ಇವರು ತನ್ನ ಸುತ್ತಲಿನ ಶಾಲಾ ಎಳೆಯರನ್ನು ವಾರಾಂತ್ಯದಲ್ಲಿ ಕಲೆಹಾಕಿ ಅಭಿನಯ ಮತ್ತು ರಂಗ ತರಬೇತಿಯನ್ನು ನೀಡುತ್ತಿದೆ. ಈ ಬಾರಿ ಎಸ್. ಮಾಲತಿಯವರ ರಚನೆಯಾದ “ನ್ಯಾಯ ಅನ್ಯಾಯ’ ಎನ್ನುವ ನಾಟಕವನ್ನು ಆಯ್ದು ತರಬೇತಿಯ ಸಮಾರೋಪ ದಂದು ಸಾಲಿಕೇರಿಯ ಅಂಬೇಡ್ಕರ್ ಭವನದಲ್ಲಿ ಪ್ರದರ್ಶಿಸಿ ದರು.
ಸಮಾಜದಲ್ಲಿ ನಮಗೆ ಬದುಕಲು ಹಲವಾರು ವೃತ್ತಿ ಮತ್ತು ದಾರಿಗಳಿವೆ. ಬಹಳಷ್ಟು ಜನ ನ್ಯಾಯಯುತವಾಗಿ ಜೀವನ ಸಾಗಿಸಿದರೆ, ಇನ್ನು ಕೆಲವರು ಅನ್ಯಾಯದ ಹಾದಿಯಲ್ಲಿ ಸಾಗುತ್ತಾರೆ. ಈ ದ್ವಂದ್ವವೇ ನಾಟಕದ ಮೂಲ ವಸ್ತು. ದುರಾಸೆಗೆ ಸಿಲುಕಿದ ಸಿರಿವಂತ ವ್ಯಕ್ತಿಯೊಬ್ಬ ಮಾನವೀಯತೆ ಮತ್ತು ರಕ್ತ ಸಂಬಂಧವನ್ನೇ ಮರೆತು, ನ್ಯಾಯಯುತವಾಗಿ ಜೀವನ ಸಾಗಿಸುತ್ತಿದ್ದ ತಮ್ಮನೊಂದಿಗೆ ಕ್ರೂರಿಯಾಗಿ ವರ್ತಿಸುತ್ತಾನೆ. ಆತನ ಸಂಸಾರವನ್ನೇ ಹಾಳುಗೆಡವಿ ನಿರ್ಗತಿಕನನ್ನಾಗಿಸುತ್ತಾನೆ. ಆದರೆ ಕೊನೆಗೊಂದು ದಿನ ಅದುವೇ ಆತನಿಗೆ ಮುಳುವಾಗಿ ಪರಿತಪಿಸುವ ಕಾಲ ಬರುತ್ತದೆ. ಹೀಗೆ ನಮ್ಮೊಳಗೆ ಅಡಗಿರುವ ದುಶ್ಚಟ, ದುರ್ಗುಣ, ದುರಹಂಕಾರ, ದುರಾಸೆ ಮುಂತಾದುವುಗಳು ಭೂತರೂಪ ತಾಳಿ ನಮ್ಮನ್ನೇ ಹೇಗೆ ನುಂಗಿ ಹಾಕುತ್ತವೆ ಎನ್ನುವುದನ್ನು ಅನಾವರಣಗೊಳಿಸುತ್ತದೆ ಈ ನಾಟಕ. ಹಾಗೆಯೇ ಆಧುನಿಕತೆಯೆಂಬ ಧಾವಂತದ ಬದುಕಿಗೆ ಹೆಚ್ಚು ಹತ್ತಿರವಾಗಿರುವ ರಂಗ ಕೃತಿ. ನಾಟಕದೊಳಗಿನ ಕೆಲವು ಸಂದರ್ಭಗಳು ಉಳ್ಳವರ ಮತ್ತು ಕಾವಿಧಾರೀ ಬದುಕಿನೊಳಗಿನ ಸತ್ಯ ವಿಚಾರಗಳನ್ನು ನೇರವಾಗಿ ಹೇಳುತ್ತದೆ.
ಮನುಷ್ಯನ ಮನದಲ್ಲಿ ಅಡಗಿರುವ ವಿವಿಧ ವಿಕಾರಗಳನ್ನು ಯಕ್ಷಗಾನದ ತೆರೆ ಒಡ್ಡೋಲಗ ಶೈಲಿಯಲ್ಲಿ ಅನಾವರಣಗೊಳಿಸಿರುವುದು ವಿಶೇಷವಾಗಿತ್ತು. ಕಥೆಯ ಅಂತ್ಯವೂ ಮಾನವೀಯತೆಯ ಬದುಕನ್ನು ಎತ್ತಿ ಹಿಡಿಯುತ್ತದೆ. ತಮ್ಮ ರಾಮಣ್ಣನಾಗಿ ಆದರ್ಶ ಮತ್ತು ಅಣ್ಣ ಭೀಮಣ್ಣನಾಗಿ ಪ್ರೇಮ್ ಉತ್ತಮ ಅಭಿನಯದಿಂದ ಪಾತ್ರಕ್ಕೆ ಸರಿಯಾದ ನ್ಯಾಯ ಒದಗಿಸಿದರು. ದುರಾಸೆ, ದುಶ್ಚಟ, ದುರ್ಗುಣ ಮತ್ತು ದುರಹಂಕಾರದ ಭೂತಗಳಾಗಿ ಮಾನ್ಯ, ಚಂದನ್, ಶುಭಾಂಗ್ ಮತ್ತು ರೂಪ ಅವುಗಳನ್ನು ಸೊಗಸಾಗಿ ಅಭಿವ್ಯಕ್ತಿಗೊಳಿಸಿದರು.
ರಾಮಣ್ಣನ ಹೆಂಡತಿ ಮತ್ತು ಮಕ್ಕಳಾಗಿ ಕೃತಿಕಾ, ನಿರೀಕ್ಷಾ ಹಾಗೂ ಆದರ್ಶ ಮಾರ್ಮಿಕವಾಗಿ ನಟಿಸಿದರೆ, ಸ್ವಾಮೀಜಿಯಾಗಿ ಕೌಶಿಕ್, ಸೈನಿಕನಾಗಿ ರಕ್ಷಣ್ ರಾಜ್, ಮಾರನಾಗಿ ಸುಶಾಂತ್ ರಾಜ್, ಸಾವಾರನಾಗಿ ಅಕ್ಷಯ್ ಎಸ್., ಗ್ರಾಹಕನಾಗಿ ಮನೀಷ್, ಚೆನ್ನಿಯಾಗಿ ನವ್ಯ ಇವರುಗಳ ಲವಲವಿಕೆಯ ಅಭಿನಯ ಎಲ್ಲರ ಗಮನ ಸೆಳೆಯಿತು. ನಿರ್ದೇಶನ ವಿಘ್ನೇಶ್ವರ ಹೊಳ್ಳ ತೆಕ್ಕಾರು, ಸಂಗೀತ ರೋಷನ್ ಎಸ್. ಬೈಕಾಡಿ, ರಂಗ ಪರಿಕರ ಮತ್ತು ಬೆಳಕು ಪ್ರಸಾದ್ ಸಾಲಿಕೇರಿ, ಪ್ರಸಾದನ ರಮೇಶ್ ಕಪಿಲೇಶ್ವರ, ಸಮಗ್ರ ನಿರ್ವಹಣೆ ರೋಹಿತ್ ಎಸ್. ಬೈಕಾಡಿಯವರದ್ದಾಗಿತ್ತು.
ಕೆ. ದಿನಮಣಿ ಶಾಸ್ತ್ರಿ