Advertisement

ಶಹಾಪುರಕ್ಕೆ ನ್ಯಾಯಮೂರ್ತಿ ಇಂದ್ರೀಶ್‌ ಭೇಟಿ

04:39 PM Nov 29, 2021 | Team Udayavani |

ಶಹಾಪುರ: ಯಾದಗಿರಿ ಜಿಲ್ಲೆಯಲ್ಲಿ ಐದು ಹೊಸದಾಗಿ ನ್ಯಾಯಾಲಯ ಸ್ಥಾಪನೆ ಉದ್ದೇಶ ಹೊಂದಲಾಗಿದೆ. ಆದರೆ ಕೊನೆ ಪಕ್ಷ ಮೂರು ಹೊಸ ನ್ಯಾಯಾಲಯ ಸ್ಥಾಪಿಸಲಾಗುವುದು. ನ್ಯಾಯಾಲಯ ಸ್ಥಾಪನೆ ಹಾಗೂ ಕಟ್ಟಡ ನಿರ್ಮಾಣಕ್ಕೆ ಹಣಕಾಸಿನ ಕೊರತೆ ಇಲ್ಲ ಎಂದು ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಯಾದಗಿರಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಇ.ಎಸ್‌. ಇಂದ್ರೀಶ್‌ ತಿಳಿಸಿದರು.

Advertisement

ನಗರದ ನ್ಯಾಯಾಲಯಕ್ಕೆ ರವಿವಾರ ಭೇಟಿ ನೀಡಿ ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕಕ್ಷಿದಾರರಿಗೆ ಕನಿಷ್ಟ ಮೂಲ ಸೌಲಭ್ಯ ಒದಗಿ ಸಿಕೊಡಬೇಕು. ಜನತೆ ನ್ಯಾಯಾಲಯದ ಬಗ್ಗೆ ಹೊಂದಿರುವ ಗೌರವ-ವಿಶ್ವಾಸ ಉಳಿಸಿ ಕೊಳ್ಳಬೇಕೆಂದರೆ ತ್ವರಿತ ನ್ಯಾಯದಾನ ಮಾಡಬೇಕು. ಇದಕ್ಕೆ ವಕೀಲರ ಸಹಕಾರ ಅಗತ್ಯ. ವಕೀಲರ ಸಂಘ ಸಲ್ಲಿಸಿದ ಮನವಿಯಲ್ಲಿ ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ಸ್ಥಾಪಿಸುವಂತೆ ಮನವಿ ಮಾಡಿದ ಈ ಬಗ್ಗೆ ಯತ್ನಿಸುವೆ ಎಂದು ಭರವಸೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಶಾಂತಗೌಡ ಪಾಟೀಲ್‌ ಮಾತನಾಡಿ, ಶಹಾಪುರ ನ್ಯಾಯಾಲಯದ ಪ್ರಧಾನ ಸಿವಿಲ್‌ ನ್ಯಾಯಾಲಯದಲ್ಲಿ 1,373 ಕ್ರಿಮಿನಲ್‌ ಹಾಗೂ 687 ಸಿವಿಲ್‌ ಪ್ರಕರಣಗಳು ಅಲ್ಲದೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯದಲ್ಲಿ 654 ಸಿವಿಲ್‌ ಹಾಗೂ 1,016 ಕ್ರಿಮಿನಲ್‌ ಪ್ರಕರಣ ಇತ್ಯರ್ಥಕ್ಕಾಗಿ ಬಾಕಿ ಉಳಿದಿವೆ. ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ಸ್ಥಾಪಿಸುವುದಾದರೆ ಶಹಾಪುರದಲ್ಲಿ ಸ್ಥಾಪಿಸುವುದು ಸೂಕ್ತ ಎಂದ ಅವರು, ವಕೀಲರ ಸಂಘಕ್ಕೆ ಪ್ರತ್ಯೇಕ ಕಟ್ಟಡ ನಿರ್ಮಿಸಿಕೊಡಲು ಮನವಿ ಮಾಡಿದರು.

ಈ ವೇಳೆ ಜಿಲ್ಲಾ ಸೇಷನ್ಸ್‌ ನ್ಯಾಯಾ ಧೀಶ ಎಸ್‌.ಶ್ರೀಧರ, ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾ ಧೀಶರಾದ ಭಾಮಿನಿ, ಕಾಡಪ್ಪ ಹುಕ್ಕೇರಿ, ವಕೀಲರ ಸಂಘದ ಕಾರ್ಯದರ್ಶಿ ಎಸ್‌. ಎಂ. ಸಜ್ಜನ, ಹೈಯ್ನಾಳಪ್ಪ ಹೊಸ್ಮನಿ, ಹಿರಿಯ ವಕೀಲರಾದ ಶ್ರೀನಿವಾಸರಾವ್‌ ಕುಲಕರ್ಣಿ, ಭಾಸ್ಕರರಾವ್‌ ಮುಡಬೂಳ, ಹನುಮೇಗೌಡ ಮರಕಲ್‌, ಆರ್‌. ಚೆನ್ನಬಸ್ಸು, ವಿಶ್ವನಾಥರಡ್ಡಿ ಸಾವೂರ, ಯೂಸೂಫ್‌ ಸಿದ್ದಕಿ, ವಿಶ್ವನಾಥರಡ್ಡಿ ಕೊಡಮನಹಳ್ಳಿ, ರಮೇಶ ಸೇಡಂಕರ್‌, ಬಸ್ಸುಗೌಡ, ಎಚ್‌.ಆರ್‌. ಪಾಟೀಲ್‌ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next