ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಬಂದವರಿಗೆ, ಹೆಚ್ಚು ಮಾರ್ಕ್ಸ್ ತೆಗೆದುಕೊಂಡವರಿಗೆ ನೂರಾರು ಕಾಲೇಜುಗಳು ರತ್ನಗಂಬಳಿ ಹಾಸಿ ಸ್ವಾಗತಿಸುತ್ತವೆ. ಆದರೆ ಪರೀಕ್ಷೆಯಲ್ಲಿ “ಜಸ್ಟ್ ಪಾಸ್’ ಆದವರ ಕಥೆ ಮಾತ್ರ ಹೇಳತೀರದು. ಇಂಥ ಹುಡುಗರಿಗಾಗಿಯೇ ಇಲ್ಲೊಂದು ಕಾಲೇಜ್ ತೆರೆಯಲಾಗಿದೆ. ಈ ಕಾಲೇಜ್ “ಜಸ್ಟ್ ಪಾಸ್’ ಆದವರಿಗೆ ಮಾತ್ರ..!
ಹೌದು, ಇದು ಶೀಘ್ರದಲ್ಲಿಯೇ ತೆರೆಗೆ ಬರಲು ಸಿದ್ಧವಾಗುತ್ತಿರುವ “ಜಸ್ಟ್ ಪಾಸ್’ ಸಿನಿಮಾದ ಬಗ್ಗೆ ಇರುವಂಥ ಅಚ್ಚರಿಯ ಸಂಗತಿ. ಅಂದಹಾಗೆ, “ಜಸ್ಟ್ ಪಾಸ್’ ಸಿನಿಮಾದಲ್ಲಿ ಕೂದಲೆಳೆ ಅಂತರದಲ್ಲಿ ಪಾಸ್ ಆದವರಿಗಂತಲೇ ಕಾಲೇಜು ತೆರೆಯಲಾಗಿದೆ. ಜತೆಗೆ ಈ ಕಾಲೇಜ್ ಸೇರಿಕೊಂಡರೆ, ಹಾಸ್ಟೆಲ್ ಕೂಡ ಉಚಿತವಂತೆ!
ಇನ್ನು “ಜಸ್ಟ್ ಪಾಸ್’ ಆಗಿರುವವರ ಕಾಲೇಜಿನಲ್ಲಿ ನಟ ರಂಗಾಯಣ ರಘು ಪ್ರಿನ್ಸಿಪಾಲ್ ಆಗಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಪ್ರಿನ್ಸಿಪಾಲ್ ಪಾತ್ರ ನಿರ್ವಹಿಸುತ್ತಿರುವುದು ರಂಗಾಯಣ ರಘು, ಸಿನಿಮಾದಲ್ಲಿ ತಮ್ಮ ಜೀವಮಾನದ ಸಂಪಾದನೆಯಿಂದ ಕಾಲೇಜು ಶುರು ಮಾಡಿ, ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗುವ ಗುರುವಾಗಿ ಕಾಣಿಸಿಕೊಂಡಿದ್ದಾರೆ. “ಜಸ್ಟ್ ಪಾಸ್’ ಆದವರಲ್ಲಿ ಒಬ್ಬೊಬ್ಬರಿಗೆ ಒಂದೊಂದು ಟ್ಯಾಲೆಂಟ್ ಇರುತ್ತದೆ. ಹಾಗೆಯೇ ಒಂದಷ್ಟು ತಲೆಹರಟೆ ವಿದ್ಯಾರ್ಥಿಗಳೂ ಇರುತ್ತಾರೆ. ಇವರನ್ನೆಲ್ಲ ಹೇಗೆ ನಿಭಾಯಿಸುತ್ತಾರೆ. ಅವರಿಗೂ ಒಂದೊಳ್ಳೆ ದಾರಿ ಹೇಗೆ ಕಲ್ಪಿಸುತ್ತಾರೆ ಎಂಬುದೇ “ಜಸ್ಟ್ ಪಾಸ್’ ಸಿನಿಮಾದ ಒನ್ ಲೈನ್ ಎನ್ನುತ್ತದೆ ಚಿತ್ರತಂಡ.
“ಈ ಚಿತ್ರದಲ್ಲಿ ಕಥೆ ಒಂದು ತೂಕವಾದರೆ, ರಂಗಾಯಣ ರಘು ಅವರ ಪಾತ್ರವೇ ಒಂದು ತೂಕ. ಅವರಿಗೆ ಕಥೆ ಹೇಳಿದಾಕ್ಷಣ, ಕಾಸ್ಟೂಮ್ ಬಗ್ಗೆ ಅವರೇ ಹೇಗಿರಬೇಕೆಂದು ಡಿಸೈನ್ ಮಾಡಿಕೊಂಡರು. ಯಾಕಂದ್ರೆ ಅವರ ಪಾತ್ರ ಪ್ರಿನ್ಸಿಪಾಲ್. ಅವರದ್ದೇ ಕಾಲೇಜು, ತೂಕವಾದ ವ್ಯಕ್ತಿತ್ವ, ನ್ಯಾಷನಲ್ ಅವಾರ್ಡ್ ಕೂಡಾ ಬಂದಿರುತ್ತೆ. ಸದಾ ಸಮಾಜಮುಖೀಯಾಗಿ ಚಿಂತಿಸುವ ಪಾತ್ರ ಅವರದ್ದು. ಮೂರು ಪಂಚೆ, 3 ಶರ್ಟು, ಕೋಟು ಮತ್ತು 2 ಪೇಟ ಇಟ್ಟುಕೊಂಡಿರುವ ಸೀದಾ ಸಾದಾ ಮನುಷ್ಯ. ಇಡೀ ಸಿನಿಮಾದಲ್ಲಿ ಒಂದೇ ಚಪ್ಪಲಿ ಬಳಸಿದ್ದಾರೆ. ಅವರ ಪಾತ್ರದ ಬಗ್ಗೆ ಮತ್ತಷ್ಟು ವಿಶೇಷತೆಗಳಿವೆ. ಅವೆಲ್ಲವನ್ನೂ ಸಿನಿಮಾದಲ್ಲಿ ನೋಡಿದರೆ ಚೆನ್ನಾಗಿರುತ್ತೆ’ ಎಂಬುದು ನಿರ್ದೇಶಕ ಕೆ. ಎಂ. ರಘು ಮಾತು.
“ಜಸ್ಟ್‌ಪಾಸ್’ ಸಿನಿಮಾದಲ್ಲಿ ಶ್ರೀ ನಾಯಕನಾಗಿದ್ದು, ಯುವ ಪ್ರತಿಭೆ ಪ್ರಣತಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು ಅವರೊಂದಿಗೆ ಸಾಧು ಕೋಕಿಲ, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ, ದಾನಪ್ಪ, ಗೋವಿಂದೇ ಗೌಡ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ರಾಯ್ಸ್ ಎಂಟರ್ ಟೈನ್ಮೆಂಟ್ ಲಾಂಛನದಲ್ಲಿ ಕೆ. ವಿ. ಶಶಿಧರ್ ನಿರ್ಮಿಸುತ್ತಿರುವ “ಜಸ್ಟ್ ಪಾಸ್’ ಸಿನಿಮಾಕ್ಕೆ ಕೆ. ಎಂ. ರಘು ನಿರ್ದೇಶನವಿದೆ. ಸಿನಿಮಾದ ಹಾಡುಗಳಿಗೆ ಹರ್ಷವರ್ಧನ್ ರಾಜ್ ಸಂಗೀತ ಸಂಯೋಜಿಸಿದ್ದು, ಸುಜಯ್ ಕುಮಾರ್ ಛಾಯಾಗ್ರಹಣವಿದೆ.