ಗೆಳತಿಯರೊಟ್ಟಿಗೆ ರೂಮ್‌ನಲ್ಲಿದ್ದ ಆಕೆಗೆ, ಸಮೀಪದ ಅಂಗಡಿಯಿಂದ ದಿನಾ ಬೆಳಗ್ಗೆ ಹಾಲು ತರುವುದು ಅಭ್ಯಾಸವಾಗಿತ್ತು. ಅಂಥವಳಿಗೆ, ಒಬ್ಬ ರೋಮಿಯೋ ಗಂಟುಬಿದ್ದ. ಅವನು ಅದೆಲ್ಲಿ ಹೊಂಚು ಹಾಕುತ್ತಿದ್ದನೋ ಏನೋ, ಇವಳು ಹಾಲು ತರಲು ಹೋದ ತಕ್ಷಣ ಫಾಲೋ ಮಾಡುತ್ತಿದ್ದ. ಇವಳಿಗೆ ಕೇಳಿಸುವಂತೆ, ಏನೇನೊ ಮಾತಾಡುತ್ತಿದ್ದ. ಈ ಹುಡುಗಿಗೆ, ತಿರುಗಿ ಮಾತಾಡಲು ಭಯ. ಗೆಳತಿಯರಿಗೆ ಹೇಳ್ಳೋಣ ಅಂದರೆ, ಅವರೆಲ್ಲಾ ಊರಿಗೆ ಹೋಗಿಬಿಟ್ಟಿದ್ದಾರೆ! ರೂಮ್‌ನ ಓನರ್‌ಗೆ ಹೇಳಿದರೆ, ಆತ- ಏನಾದರೂ ತಪ್ಪು ತಿಳಿದರೆ… ಎಂಬ ದಿಗಿಲು, ಅಂಜಿಕೆ…
ಲಾಕ್‌ಡೌನ್ ಕಾರಣಕ್ಕೆ ಹೆಚ್ಚು ಜನಸಂಚಾರ ಇರುವುದಿಲ್ಲ ಎಂದು ಗೊತ್ತಾದಾಗ, ಅವನಿಗೆ ಇನ್ನಷ್ಟು ಧೈರ್ಯ ಬಂತು. ಯಾರೂ ಕೇಳುವವರಿಲ್ಲ ಎಂಬ ಹಮ್ಮಿನಲ್ಲಿ ಅವಳಿಗೆ ಟಚ್
ಆಗಿಬಿಡುವಷ್ಟು ಹತ್ತಿರದಲ್ಲೇ ನಡೆಯತೊಡಗಿದ. ಹಿರಿದು ತಿನ್ನುವಂಥ ಅವನ ನೋಟ ಕಂಡೇ ಇವಳಿಗೆ ಹೆದರಿಕೆಯಾಯಿತು. ಏನಾದರೂ ಮಾಡಿ ಅವನಿಗೆ ಬುದ್ಧಿ ಕಲಿಸಬೇಕು ಅಂದುಕೊಂಡವಳಿಗೆ, ಒಂದು ಉಪಾಯ ಹೊಳೆಯಿತು.
ಬೆಳಗ್ಗೆ ಎಂದಿನಂತೆಯೇ ಹಾಲು ತರಲು ಹೋದಳು. ಫಾಲೋ ಮಾಡಿಕೊಂಡು ಅವನೂ ಬಂದ. ಅವಳನ್ನು ಒಮ್ಮೆ ಟಚ್ ಮಾಡಿ ಹೋಗಿಬಿಡಬೇಕು ಅಂದುಕೊಂಡು ಹತ್ತಿರ ಬಂದನಲ್ಲ… ಆಗಲೇ ಇವಳು- “ಅಕ್ಷೀ, ಅಕ್ಷೀ, ಅಕ್ಷೀ’ ಎಂದು ಮೂರುಬಾರಿ ಸೀನಿಬಿಟ್ಟಳು! ಹುಡುಗ, ಹಾವು ತುಳಿದವನಂತೆ ಬೆಚ್ಚಿಬಿದ್ದು ಪರಾರಿಯಾದ!