Advertisement

ಮತದಾನಕ್ಕೆ ಕೆಲವೇ ದಿನ: ಇವಿಎಂ, ವಿವಿಪ್ಯಾಟ್‌ ಬಗ್ಗೆ ತಿಳಿಯಬೇಕೆ?

04:03 PM Apr 29, 2023 | Team Udayavani |

ಉಡುಪಿ: ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಜಿಲ್ಲಾಡಳಿತ ಹಾಗೂ ಚುನಾವಣ ಆಯೋಗದ ಮೂಲಕ ಹಲವಾರು ರೀತಿಯ ಪೂರಕ ಕ್ರಮಗಳನ್ನು ನಡೆಸಲಾಗುತ್ತಿದೆ.

Advertisement

ಸಿಬಂದಿಗೆ ತರಬೇತಿ, ಸಭೆಗಳನ್ನು ಆಯೋಜಿಸಿ ವಿವಿಧ ಮಾಹಿತಿ ನೀಡಲಾಗುತ್ತಿದೆ. ಮತದಾನದಂದು ಕಾಣಸಿಗುವ ಇವಿಎಂ (ಇಲೆಕ್ಟ್ರಾನಿಕ್‌ ವೋಟಿಂಗ್‌ ಮೆಶಿನ್‌) ಯಂತ್ರ, ಬ್ಯಾಲೆಟ್‌ ಪೇಪರ್‌ ಬಗ್ಗೆ ಮತದಾರರಿಗೆ ಒಂದು ಕಿರು ಮಾಹಿತಿ ಇಲ್ಲಿದೆ.

ಎಲೆಕ್ಟ್ರಾನಿಕ್‌ ಮಾಧ್ಯಮದ ಮೂಲಕ ಮತದಾನ ಮಾಡಲು ಕಲ್ಪಿಸುವ ಸಾಧನವೇ ಇವಿಎಂ. ಮತದಾನ ಮಾಡುವ ಹಾಗೂ ಮತ ಎಣಿಕೆ ಮಾಡುವ ಸಾಧನ. ಇವಿಎಂನಲ್ಲಿ ಕಂಟ್ರೋಲ್‌ ಯುನಿಟ್‌ ಹಾಗೂ ಬಾಲೆಟಿಂಗ್‌ ಯುನಿಟ್‌ ಎನ್ನುವ ಎರಡು ಸಾಧನಗಳ ಮೂಲಕ ಇವಿಎಂ ಮಷಿನ್‌ ಅನ್ನು ವಿನ್ಯಾಸ ಮಾಡಲಾಗಿದೆ.

ತಾನು ಉದ್ದೇಶಿಸಿದ ಅಭ್ಯರ್ಥಿಗೆ ಮತ ಬಿದ್ದಿದೆಯೇ ಇಲ್ಲವೇ ಎಂದು ಮತದಾರ ಖಾತರಿಪಡಿಸಿಕೊಳ್ಳಲು ಇರುವ ಯಂತ್ರವೇ ವಿವಿಪ್ಯಾಟ್‌ (ವೋಟರ್‌ ವೆರಿಫೈಯೆಬಲ್‌ ಪೇಪರ್‌ ಟ್ರಾಯಲ್‌) ಮೆಷಿನ್‌. ಇವಿಎಂನಲ್ಲಿ ಮತದಾನ ಮಾಡಿದ ಕೂಡಲೇ ವಿವಿಪ್ಯಾಟ್‌ನಲ್ಲಿ ಮತದಾರ ಗುಂಡಿ ಒತ್ತಿದ ಕೂಡಲೇ ಮತ ಚಲಾಯಿಸಿದ ಅಭ್ಯರ್ಥಿಯ ಹೆಸರು, ಚಿಹ್ನೆ, ಕ್ರಮ ಸಂಖ್ಯೆ ಮುಂತಾದ ಮಾಹಿತಿಗಳು ಕಾಣಿಸಿಕೊಳ್ಳುತ್ತವೆ. ಅದು ಮುದ್ರಣ ಕೂಡ ಆಗುತ್ತದೆ. ಈ ಚೀಟಿ 7 ಸೆಕೆಂಡುಗಳ ಕಾಲ ಮತದಾರರಿಗೆ ಕಾಣಿಸಿಕೊಂಡು ಬಳಿಕ ಬಾಕ್ಸ್‌ನೊಳಗೆ ಬೀಳುತ್ತದೆ. ಚುನಾವಣೆ ಮೋಸ ತಡೆಯಲು ಈ ಯಂತ್ರವನ್ನು ವಿನ್ಯಾಸಗೊಳಿಸಲಾಗಿದೆ. ಇವಿಎಂ ಹಾಗೂ ವಿವಿಪ್ಯಾಟ್‌ ತಾಳೆಯಾಗದಿದ್ದರೆ, ವಿವಿಪ್ಯಾಟ್‌ನಲ್ಲಿ ಮುದ್ರಣವಾಗಿರುವ ಚೀಟಿಗಳನ್ನು ಎಣಿಕೆ ಮಾಡಲಾಗುತ್ತದೆ.

ಇವಿಎಂನಲ್ಲಿ ಕೇವಲ ಕಂಟ್ರೋಲ್‌ ಯುನಿಟ್‌ ಮತ್ತು ಬ್ಯಾಲೆಟ್‌ ಯುನಿಟ್‌ ಇರುತ್ತದೆ. ಬ್ಯಾಲೆಟ್‌ ಯುನಿಟ್‌ ಅಂದರೆ ಮತ ಚಲಾಯಿಸುವ ಯಂತ್ರ. ಕಂಟ್ರೋಲ್‌ ಯುನಿಟ್‌ ಅಂದರೆ ಈ ಮತಗಳು ಹೋಗಿ ಸಂಗ್ರಹವಾಗುವ ಯಂತ್ರ. ವಿವಿ ಪ್ಯಾಟ್‌ನಲ್ಲಿ ಇವುಗಳ ಜತೆಗೆ ವಿವಿ ಪ್ಯಾಟ್‌ ಯಂತ್ರ ಇರುತ್ತದೆ. ಇದು ಬ್ಯಾಲೆಟ್‌ ಯುನಿಟ್‌ ಪಕ್ಕದಲ್ಲಿರುತ್ತದೆ.
ಜಿಲ್ಲೆಗೆ ಈಗಾಗಲೇ ಇವಿಎಂ ಯಂತ್ರಗಳು ಆಗಮಿಸಿದ್ದು, ಆಯಾ ವಿಧಾನಸಭಾ ಕ್ಷೇತ್ರಗಳಿಗೆ ಹಂಚಿಕೆಯಾಗಿದೆ. 1,111 ಮತಗಟ್ಟೆಗಳಿಗೆ ಶೇ.120 ಇವಿಎಂ ಮತಯಂತ್ರಗಳನ್ನು ಹಂಚಿಕೆ ಮಾಡಲಾಗಿದೆ. ಎಲ್ಲ ಕ್ಷೇತ್ರಗಳಿಗೆ ತಲಾ ಶೇ. 20 ಹೆಚ್ಚುವರಿ ಯಂತ್ರಗಳನ್ನು ನೀಡಲಾಗಿದೆ. ಶೇ. 30 ಹೆಚ್ಚುವರಿ ವಿವಿ ಪ್ಯಾಟ್‌ಗಳನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next