ಉಡುಪಿ: ಬರದಿಂದ ತತ್ತರಿಸುತ್ತಿರುವ ಸಂದರ್ಭ ಎಚ್ಚೆತ್ತ ಸರಕಾರ ಅರಣ್ಯೀಕರಣಕ್ಕೆ ಮುಂದಾಗಿದೆ. ರಾಜ್ಯದ ಪ್ರತಿ ಗ್ರಾ.ಪಂ.ನಲ್ಲಿ ಕನಿಷ್ಠ 500 ಸಸಿಗಳನ್ನು ಜೂ. 11ರಂದು ನೆಡಲು ಮುಂದಾಗಿದೆ. ರಾಜ್ಯದಲ್ಲಿರುವ 6,000 ಗ್ರಾ.ಪಂ.ಗಳಲ್ಲಿ ಗಿಡ ನೆಡುವ ಗುರಿ ಸುಮಾರು 30 ಲಕ್ಷ. ಇದು ಕೇವಲ ಆರಂಭವಷ್ಟೆ. ಮುಂದೆ ರಾಜ್ಯದಲ್ಲಿ 2 ಕೋಟಿ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ.
ಇದುವರೆಗೆ ಮಳೆಗಾಲದಲ್ಲಿ ವನಮಹೋತ್ಸವದ ಸಂದರ್ಭ ಅರಣ್ಯ ಇಲಾಖೆ ಸಹಯೋಗದಲ್ಲಿ ಶಾಲೆ, ಅಂಗನವಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಗಿಡ ನೆಡಲಾಗುತ್ತಿತ್ತು. ಈ ಬಾರಿ ಜೂ. 11ರಂದು ದಿನ ನಿಗದಿಪಡಿಸಿ ಗಿಡ ನೆಡಲು ಗಮನವನ್ನು ಕೇಂದ್ರೀಕರಿಸಲಾಗಿದೆ. ಗೋಮಾಳ, ರುದ್ರಭೂಮಿ, ಹುಲ್ಲುಗಾವಲು, ರಸ್ತೆ ಬದಿ, ಕೆರೆಯ ಅಕ್ಕಪಕ್ಕ, ಸರಕಾರಿ ಪಾಳುಭೂಮಿ, ಶಾಲಾ ಕಾಲೇಜು, ವಿ.ವಿ., ಸರಕಾರಿ ಕಚೇರಿ, ಖಾಸಗಿ ಕಚೇರಿ ಜಾಗ ಇತ್ಯಾದಿ ಮಾಹಿತಿಯನ್ನು ಸಂಗ್ರಹಿಸಿ ಅರಣ್ಯ ಬೆಳೆಸಲು ಸಿದ್ಧತೆ ಮಾಡಿಕೊಳ್ಳಬೇಕೆಂದು ಗ್ರಾಮೀಣಾಭಿವೃದ್ಧಿ ಸಚಿವಾಲಯ ಪ್ರತಿ ಜಿಲ್ಲೆಗಳಿಗೆ ಸೂಚನೆ ನೀಡಿದೆ.
ರೈತರ ಜಮೀನಿನಲ್ಲಿ, ಕೃಷಿ ಅನುಪಯುಕ್ತ ಭೂಮಿಗಳ ಮಾಹಿತಿ ಸಂಗ್ರಹಿಸಿ ಅವರಿಂದಲೂ ಗಿಡಗಳನ್ನು ನೆಡಲು ಪ್ರೋತ್ಸಾಹಿಸಬೇಕೆಂಬ ಗುರಿಯೂ ಇದೆ. ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ವಿಭಾಗ, ತೋಟಗಾರಿಕೆ ಇಲಾಖೆಗಳಲ್ಲಿ ಬೆಳೆಸಿದ ಸಸ್ಯಗಳನ್ನು ಖರೀದಿಸಿ ಗಿಡಗಳನ್ನು ನೆಡಲಾಗುತ್ತಿದೆ.
ಗಿಡಗಳನ್ನು ನೆಟ್ಟರೆ ಸಾಲದು, ಇವುಗಳ ಪಾಲನೆ ನಡೆಯಬೇಕು. ಇದಕ್ಕೆ ಬೇಕಾದ ಗುಂಡಿಗಳನ್ನು ತೆಗೆದು ಮಳೆ ಬರುವಾಗ ಗಿಡಗಳನ್ನು ನೆಡಲು ಸಿದ್ಧತೆ ನಡೆಸಲಾಗುತ್ತಿದೆ. ಇದುವರೆಗೂ ಮಳೆ ಬಾರದ ಕಾರಣ ಜೂ. 11ರೊಳಗೆ ಗಿಡ ನೆಡಲು ಬೇಕಾದ ವಾತಾವರಣ ಸಜ್ಜಾಗಬಹುದೆ ಎಂಬ ಸಂಶಯ ಉಂಟಾಗುತ್ತಿದೆ. ಇಂತಹ ಸಂದರ್ಭ ಉಂಟಾದರೆ ಸರಕಾರ ದಿನಾಂಕವನ್ನು ಪರಿಷ್ಕರಿಸಲೂಬಹುದು.
ಸರಕಾರದ ಸಮುದಾಯ ಜಮೀನಿನಲ್ಲಿ ಬೆಳೆಸಿದ ಗಿಡಗಳಿಂದ ಲಭ್ಯವಾಗುವ ಕಿರು ಅರಣ್ಯ ಉತ್ಪನ್ನಗಳ ಮಾರಾಟದಿಂದ ಬರುವ ಹಣವನ್ನು ಅರಣ್ಯವನ್ನು ಸತತ ಸಂರಕ್ಷಣೆ ಮಾಡಿದ ಕೂಲಿಕಾರರಿಗೆ ಶೇ.50, ಸಮುದಾಯಕ್ಕೆ ಶೇ.25, ನಿರ್ವಹಣೆಗೆ ಶೇ.25 ಮೀಸಲಿರಿಸಲೂ ನಿರ್ಧರಿಸಲಾಗಿದೆ.
ಮುಂದಿನ ದಿನಗಳಲ್ಲಿ ಅರಣ್ಯ ಪ್ರದೇಶಗಳನ್ನು ಬೆಳೆಸಲು ಪ್ರತಿ ಗ್ರಾ.ಪಂ. ಆದಾಯದ ಶೇ.1 ಭಾಗವನ್ನು ಇದಕ್ಕೆ ಮೀಸಲಿಡಲೂ ಸರಕಾರಿ ಚಿಂತನೆ ನಡೆಸಿದೆ.
ಸೂಚನೆ ನೀಡಲಾಗಿದೆ.
ಜಿಲ್ಲೆಯ ಎಲ್ಲ 158 ಗ್ರಾ.ಪಂ.ಗಳ ಶಾಲೆ, ಅಂಗನವಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಗಿಡಗಳನ್ನು ನೆಡಲಾಗುವುದು. ಈ ಕುರಿತು ಗ್ರಾ.ಪಂ.ಗಳಿಗೆ
ಸೂಚನೆ ನೀಡಲಾಗಿದೆ.
-ಸಿಂಧು ಬಿ. ರೂಪೇಶ್, ಜಿ.ಪಂ. ಸಿಇಒ, ಉಡುಪಿ.