ಮಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೂನ್ 1ರಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸ ಕೈಗೊಳ್ಳುತ್ತಿದ್ದು ರೈತ ವಿದ್ಯಾ ನಿಧಿ ಯೋಜನೆಯಡಿ ಜಿಲ್ಲೆಯ ಫಲಾನುಭವಿಗಳಾಗಿರುವ ರೈತರ ಮಕ್ಕಳೊಂದಿಗೆ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಸಂವಾದ ನಡೆಸಲಿದ್ದಾರೆ.
ಈ ನಿಟ್ಟಿನಲ್ಲಿ ಶುಕ್ರವಾರ ನಗರದ ಜಿ.ಪಂ. ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲು ಅವರು, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
22 ಸಾವಿರ ಫಲಾನುಭವಿಗಳು
ಮುಖ್ಯಮಂತ್ರಿಯವರ ಮಹತ್ವಾಕಾಂಕ್ಷೆಯ ಯೋಜನೆಯಾದ ಮುಖ್ಯಮಂತ್ರಿ ರೈತ ವಿದ್ಯಾ ನಿಧಿ ಯೋಜನೆಯಡಿ ಜಿಲ್ಲೆಯ 22 ಸಾವಿರ ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ. ಈ ಯೋಜನೆಯ ಬಗ್ಗೆ ಫಲಾನುಭವಿಗಳಾಗಿರುವ ವಿದ್ಯಾರ್ಥಿ ಗಳೊಂದಿಗೆ ಮುಖ್ಯಮಂತ್ರಿ ನೇರವಾಗಿ ಮಾತನಾಡಿ, ಯೋಜನೆಯ ಸಾಧಕಗಳ ಬಗ್ಗೆ ತಿಳಿದುಕೊಳ್ಳಲಿದ್ದಾರೆ.
ಎಸೆಸ್ಸೆಲ್ಸಿ, ಪಿಯುಸಿ, ಡಿಗ್ರಿ, ಐಟಿಐ, ಡಿಪ್ಲೊಮಾ, ತಾಂತ್ರಿಕ ಶಿಕ್ಷಣ ಸೇರಿದಂತೆ ಇತರ ಕೋರ್ಸುಗಳಲ್ಲಿರುವ ಫಲಾನುಭವಿ ವಿದ್ಯಾರ್ಥಿಗಳನ್ನು ಸಂವಾದ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ ಹಾಗೂ ಇತರ ಇಲಾಖೆಗಳ ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
Related Articles
ಶಾಸಕ ಉಮಾನಾಥ ಕೋಟ್ಯಾನ್, ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ| ಎಂ. ಮೋಹನ ಆಳ್ವ, ಜಿ.ಪಂ. ಸಿಇಒ ಡಾ| ಕುಮಾರ್, ಮಂಗಳೂರು ಮನಪಾ ಆಯುಕ್ತ ಅಕ್ಷಯ ಶ್ರೀಧರ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಮಿಶ್ರ, ಅಪರ ಜಿಲ್ಲಾಧಿಕಾರಿ ಡಾ| ಕೃಷ್ಣಮೂರ್ತಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸೀತಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸುಧಾಕರ್, ಪ.ಪೂ. ಶಿಕ್ಷಣ ಇಲಾಖೆ ಉಪನಿರ್ದೇಶಕ ಜಯಣ್ಣ ಉಪಸ್ಥಿತರಿದ್ದರು.