ಪೋರ್ಟ್ ಆಫ್ ಸ್ಪೇನ್: ಜುಲೈ-ಆಗಸ್ಟ್ ತಿಂಗಳಲ್ಲಿ ಭಾರತ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ಗೆ ಪ್ರವಾಸ ಕೈಗೊಳ್ಳಲಿದ್ದು, ಇದರ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಗೊಂಡಿದೆ. ಇದಕ್ಕೆ ಬಿಸಿಸಿಐನ ಅಂತಿಮ ಮುದ್ರೆ ಬೀಳಬೇಕಿದ್ದು, ಅನಂತರ ವೇಳಾಪಟ್ಟಿ ಅಧಿಕೃತಗೊಳ್ಳಲಿದೆ.
ಈ ಸರಣಿಯ ವೇಳೆ 2 ಟೆಸ್ಟ್, 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಲಾಗುವುದು. ಹೆಚ್ಚುರಿಯಾಗಿ 2 ಟಿ20 ಪಂದ್ಯಗಳನ್ನುಅಮೆರಿಕದ ಫ್ಲೋರಿಡಾದಲ್ಲಿ ಆಡುವ ಸಾಧ್ಯತೆ ಇದೆ. ಇದಿನ್ನೂ ಅಧಿಕೃತಗೊಂಡಿಲ್ಲ.
ಐಸಿಸಿ ಟೆಸ್ಟ್ ವಿಶ್ವಕಪ್ ಫೈನಲ್ ವೇಳೆ ಬಿಸಿಸಿಐ ಮತ್ತು “ಕ್ರಿಕೆಟ್ ವೆಸ್ಟ್ ಇಂಡೀಸ್’ನ ವರಿಷ್ಠರು ಮಾತುಕತೆ ನಡೆಸಿ ವೇಳಾಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ.
ಈಗಿನ ವೇಳಾಪಟ್ಟಿಯಂತೆ ಟೆಸ್ಟ್ ಪಂದ್ಯಗಳು ಡೊಮಿನಿಕಾ (ಜು. 12-16) ಮತ್ತು ಟ್ರಿನಿಡಾಡ್ನಲ್ಲಿ (ಜು. 20-24) ನಡೆಯಲಿವೆ. ಏಕದಿನ ಪಂದ್ಯಗಳ ತಾಣ ಬಾರ್ಬಡಾಸ್ (ಜು. 27, 29) ಮತ್ತು ಟ್ರಿನಿಡಾಡ್ (ಆ. 1). ಟಿ20 ಪಂದ್ಯಗಳನ್ನು ಟ್ರಿನಿಡಾಡ್ (ಆ. 4) ಮತ್ತು ಗಯಾನಾದಲ್ಲಿ (ಆ. 6, ಆ. 8) ಆಡಲಾಗುವುದು.