Advertisement

ಜು. 1: 100 ಜೇಡ ಪ್ರಭೇದಗಳ 185 ಛಾಯಾಚಿತ್ರ ಪ್ರದರ್ಶನ

11:23 AM Jun 29, 2018 | Team Udayavani |

ಮಹಾನಗರ: ಜೇಡಗಳ ಸಂತತಿ ಕ್ಷೀಣಿಸುತ್ತಿರುವ ಕಾಲಘಟ್ಟದಲ್ಲಿ ಅದೇ ಜೇಡಗಳ ಬಗ್ಗೆ ಆಸಕ್ತಿ ಮೂಡಿಸಲು ತಂಡವೊಂದು ಕ್ರಿಯಾಶೀಲವಾಗಿದೆ. ‘ಸಾಲಿಗ’ ಹೆಸರಿನಲ್ಲಿ ತಂಡ ರಾಜ್ಯದ ನಾನಾ ಕಡೆಗಳಲ್ಲಿ ಜೇಡಗಳ ಛಾಯಾಚಿತ್ರ ಪ್ರದರ್ಶನ ಹಮ್ಮಿಕೊಂಡು ಜೇಡ ಪ್ರಭೇದದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಈ ತಂಡ ಮಾಡುತ್ತಿದೆ.

Advertisement

ಅಳಿದುಳಿದಿರುವ ಪ್ರಭೇದಗಳಲ್ಲಿ ಜೇಡ ಸಂತತಿಯೂ ಒಂದು. ಹಿಂದೆಲ್ಲ ಬೇಕಾದಷ್ಟಿದ್ದ ಜೇಡಗಳು ಪ್ರಸ್ತುತ ಅಳಿವಿನಂಚಿಗೆ ಸಾಗುತ್ತಿವೆ. ಆದರೆ ಪರಿಸರ ಸಮತೋಲನ ಕಾಪಾಡುವಿಕೆಯಲ್ಲಿ ಜೇಡಗಳ ಪಾಲೂ ಮಹತ್ವದ್ದು. ಈ ವಿಚಾರವನ್ನು ಜನ ಸಾಮಾನ್ಯರಿಗೆ ತಿಳಿಸಿಕೊಡುವ ಉದ್ದೇಶದಿಂದ ‘ಸಾಲಿಗ’ ತಂಡವು ಜೇಡಗಳ ಕುರಿತು ಛಾಯಾಚಿತ್ರ ಪ್ರದರ್ಶನದೊಂದಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಜೇಡವನ್ನು ಸಾಲಿಗ ಎಂಬುದಾಗಿಯೂ ಕರೆಯುವುದರಿಂದ ತಂಡಕ್ಕೆ ಈ ಹೆಸರಿಡಲಾಗಿದೆ.

ಜು. 1: ಪ್ರದರ್ಶನ
ಈ ತಂಡವು ಪ್ರತಿ ತಿಂಗಳು ರಾಜ್ಯದ ವಿವಿಧೆಡೆ ಪ್ರದರ್ಶನ ನಡೆಸುತ್ತಿವೆ. ಮೈಸೂರು, ಮಡಿಕೇರಿ, ಚಾಮರಾಜನಗರ ಸೇರಿದಂತೆ ಎಂಟು ಕಡೆಗಳಲ್ಲಿ ಈಗಾಗಲೇ ಪ್ರದರ್ಶನ ಹಮ್ಮಿಕೊಂಡು ಯಶಸ್ವಿಯಾಗಿದೆ. ಜು.1ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಕೊಡಿಯಾಲಬೈಲ್‌ ಕರ್ಣಾಟಕ ಬ್ಯಾಂಕ್‌ ಸಭಾಂಗಣದಲ್ಲಿ ಜೇಡಗಳ ಛಾಯಾಚಿತ್ರ ಪ್ರದರ್ಶನ ನಡೆಯುತ್ತಿದ್ದು, ನಗರದಲ್ಲಿ ಮೊದಲ ಬಾರಿಗೆ ಈ ಪ್ರದರ್ಶನ ಹಮ್ಮಿಕೊಳ್ಳಲಾಗುತ್ತಿದೆ. ವಸಂತ ಕಜೆ ಬರೆದಿರುವ ‘ಐಟಿಯಿಂದ ಕೃಷಿಗೆ’ ಪುಸ್ತಕ ಲೋಕಾರ್ಪಣೆಯೂ ಈ ವೇಳೆ ನಡೆಯಲಿದೆ. ಡಿವಿಜಿ ಬಳಗದ ಸಹಯೋಗದಲ್ಲಿ ಸಮಾರಂಭ ಜರಗಲಿದೆ. ಪ್ರದರ್ಶನದಲ್ಲಿ 100 ಜೇಡ ಪ್ರಭೇದಗಳ 185 ಛಾಯಾಚಿತ್ರಗಳಿರಲಿದ್ದು, ಜೇಡಗಳೆಂದರೆ ಏನು, ಅವುಗಳ ಆಹಾರ ವಿಧಾನ, ಪರಿಸರ ಉಳಿಯುವಲ್ಲಿ ಜೇಡಗಳ ಕೊಡುಗೆ ಏನು ಎಂಬ ಕುರಿತು ಜಾಗೃತಿ ಬರಹಗಳನ್ನೂ ಪ್ರದರ್ಶಿಸಲಾಗುತ್ತದೆ. ಜತೆಗೆ ತಂಡದ ಸದಸ್ಯರು ಜೇಡಗಳ ಕುರಿತು ಸಾರ್ವಜನಿಕರಿಗಿರುವ ಪ್ರಶ್ನೆಗಳಿಗೂ ಉತ್ತರಿಸಲಿದ್ದಾರೆ.

ನಾಲ್ವರು ಸ್ನೇಹಿತರ ತಂಡ
ವಿಶೇಷವೆಂದರೆ ‘ಸಾಲಿಗ’ ತಂಡವು ನಾಲ್ವರು ಸಮಾನಮನಸ್ಕ ಸ್ನೇಹಿತರ ನ್ನೊಳಗೊಂಡ ತಂಡ. ನಾಲ್ವರೂ ವಿಭಿನ್ನ ಕೆಲಸಗಳನ್ನು ನಿರ್ವಹಿಸುತ್ತಿದ್ದು, ಜೇಡಗಳ ಸಂತತಿ ಬಗ್ಗೆ ಆಸಕ್ತಿ ಹೊಂದಿದವರಾಗಿದ್ದಾರೆ. ತಂಡದಲ್ಲಿರುವ ಡಾ|ಅಭಿಜಿತ್‌ ವೈದ್ಯ ಹಾಗೂ ಕೃಷಿ ವೃತ್ತಿಯಲ್ಲಿ ತೊಡಗಿದ್ದರೆ, ನಿತಿನ್‌ ಬಾಳಿಗ ಹಾಗೂ ಸುಮುಖ ಜಾವಗಲ್‌ ಎಂಜಿನಿಯರ್‌ರಾಗಿದ್ದಾರೆ. ಪವನ್‌ ರಾಮಚಂದ್ರ ಉದ್ಯಮಿಯಾಗಿದ್ದಾರೆ.

ಜೇಡಗಳ ಬಗ್ಗೆ ಇವರಿಗಿರುವ ಆಸಕ್ತಿಯೇ ಈ ಹಿಂದೆ ಜೇಡ ಮೇಳ ಆಯೋಜಿಸುವ ಪ್ರೇರಣೆ ನೀಡಿತ್ತು. ಆ ಮೇಳದಲ್ಲಿ ಛಾಯಾಚಿತ್ರದಲ್ಲಿ ಆಸಕ್ತಿಯಿದ್ದ ಹೊಸ ಮುಖಗಳಿಗೆ ಜೇಡಗಳ ಛಾಯಾಚಿತ್ರಗಳ ಕುರಿತು ಕಾರ್ಯಾಗಾರವನ್ನೂ ಹಮ್ಮಿ ಕೊಳ್ಳಲಾಗಿತ್ತು.

Advertisement

ಇದೇ ಮೇಳದಲ್ಲಿ ಪ್ರದರ್ಶಿಸಿದ ಛಾಯಾಚಿತ್ರಗಳನ್ನು ನೋಡಿ ಹಲವು ಕಡೆಗಳಲ್ಲಿ ಪ್ರದರ್ಶನ ಆಯೋಜಿಸುವಂತೆ ತಂಡದ ಸದಸ್ಯರಿಗೆ ಕರೆಗಳು ಬಂದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಜೇಡ ಛಾಯಾಚಿತ್ರ ಪ್ರದರ್ಶನ ಆಯೋಜಿಸುವುದಕ್ಕೆ ಮುಂದಾಗಿದ್ದಾರೆ. ಆಗಸ್ಟ್‌ನಲ್ಲಿ ವಯನಾಡ್‌ ಮತ್ತು ಕಾಸರಗೋಡಿನಲ್ಲಿ ಪ್ರದರ್ಶನ ನಡೆಯುತ್ತಿದೆ.

ರಾಜ್ಯದ ಹೊರಭಾಗಕ್ಕೂ ವಿಸ್ತರಣೆ
ಜೇಡ ಪ್ರಭೇದಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದು ಜೇಡ ಛಾಯಾಚಿತ್ರ ಪ್ರದರ್ಶನದ ಉದ್ದೇಶ. ರಾಜ್ಯಾದ್ಯಂತ ಜೇಡ ಛಾಯಾಚಿತ್ರ ಪ್ರದರ್ಶನ ಆಯೋಜಿಸುತ್ತೇವೆ. ಹೊರ ಭಾಗಗಳಿಂದಲೂ ಪ್ರದರ್ಶನ ಆಯೋಜಿಸುವಂತೆ ಬೇಡಿಕೆಗಳು ಬರುತ್ತಿವೆ. ಆ ನಿಟ್ಟಿನಲ್ಲಿಯೂ ಯೋಚಿಸಲಾಗುವುದು.
– ಡಾ| ಅಭಿಜಿತ್‌, ಸಾಲಿಗ ತಂಡದ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next