ಮಂಗಳೂರು: ಸಮಾಜದಲ್ಲಿ ನಾಯಾಂಗ ವ್ಯವಸ್ಥೆ ಅತ್ಯಂತ ಗೌರವಯುತ ಹಾಗೂ ಎಚ್ಚರಿಕೆ ಹುದ್ದೆ. ಹೀಗಾಗಿ ಯುವ ನ್ಯಾಯವಾದಿಗಳು ತಮ್ಮ ಸಾಮರ್ಥ್ಯ ಅರಿತು ನ್ಯಾಯಾಂಗ ವ್ಯವಸ್ಥೆ ಬಲಪಡಿಸುವ ಕಾರ್ಯ ಮಾಡಬೇಕು ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಜಸ್ಟಿಸ್ ಉದಯ್ ಉಮೇಶ್ ಲಲಿತ್ ಹೇಳಿದರು.
ಅವರು ಶನಿವಾರ ನಗರದ ಎಸ್‌ಡಿಎಂ ಕಾನೂನು ಕಾಲೇಜು ಸಭಾಂಗಣದಲ್ಲಿ ಬೆಳ್ಳಿಹಬ್ಬ ದತ್ತಿನಿಧಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದ ಆಗುಹೋಗು ಗಮನಿಸಿ ತಮ್ಮ ಸಾಮರ್ಥ್ಯ ವೃದ್ಧಿಸುವುದು ನ್ಯಾಯವಾದಿಯ ಕರ್ತವ್ಯ. ನಿಮ್ಮ ಸಾಮರ್ಥ್ಯವೇ ನಿಮ್ಮನ್ನು ಗೆಲ್ಲಿಸುತ್ತದೆ ಎಂದು ಅವರು ಹೇಳಿದರು.
ಯಾವುದೇ ಪ್ರಕರಣವನ್ನೂ ಕೈಗೆತ್ತಿಕೊಳ್ಳುವಾಗಲೂ ಅದರ ಕುರಿತು ತಯಾರಿ ಅತಿ ಅಗತ್ಯ. ತಯಾರಿಯಲ್ಲಿ ನಾವು ಕೊಂಚ ಎಡವಿದರೂ ನ್ಯಾಯ ನಮ್ಮ ಕೈತಪ್ಪಿ ಹೋಗುವ ಸಾಧ್ಯತೆ ಇದೆ. ಹೀಗಾಗಿ ಕಾನೂನಿನ ಎಲ್ಲ ಆಯಾಮ
ಗಳನ್ನೂ ತಿಳಿದುಕೊಂಡು ಭಿನ್ನವಾಗಿ ಯೋಚಿಸುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದರು.
ಪ್ರಸ್ತುತ ಸುಪ್ರೀಂಕೋರ್ಟ್‌ನಲ್ಲಿ ಕಾರ್ಯಾಚರಿಸುತ್ತಿರುವ 28 ಮಂದಿ ನ್ಯಾಯಾಧೀಶರಲ್ಲಿ 7 ಮಂದಿ ಹೊಸ ದಿಲ್ಲಿಯ ಒಂದೇ ಕಾಲೇಜಿನಲ್ಲಿ ಕಲಿತವರು ಎಂಬುದು ಗಮನಿಸಬೇಕಾದ ಅಂಶ. ಅದರಲ್ಲೂ 3 ಮಂದಿ ಒಂದೇ ತರಗತಿಯವರು ಎಂಬುದು ವಿಶೇಷ ಎಂದು ಅವರು ತಿಳಿಸಿದರು.
ಎಸ್‌ಡಿಎಂ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಪ್ರಭಾಕರ್ ಎಸ್. ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜ| ಉದಯ್ ಉಮೇಶ್ ಲಲಿತ್ ಅವರನ್ನು ಸಂಸ್ಥೆ ವತಿಯಿಂದ ಗೌರವಿಸಲಾಯಿತು. ಉಪಪ್ರಾಂಶುಪಾಲೆ ಸುಸಮ್ಮ ತೋಮಸ್, ವಿದ್ಯಾರ್ಥಿ ವಿಕ್ರಮ್ ಉತ್ತಯ್ಯ ಉಪಸ್ಥಿತರಿದ್ದರು. ಪ್ರಾಧ್ಯಾಪಕ ಸಾಯಿನಾಥ್ ಸಮ್ಮಾನ ಪತ್ರ ವಾಚಿಸಿದರು. ಪ್ರಾಂಶುಪಾಲ ಡಾ| ತಾರಾನಾಥ್ ಶೆಟ್ಟಿ ಸ್ವಾಗತಿಸಿದರು.