Advertisement

ನ್ಯಾಯಾಂಗ ನಿಂದನೆ ದಾವೆ: ಅರ್ಜಿದಾರರಿಗೆ 11 ಲಕ್ಷ ರೂ. ದಂಡ

10:55 PM Jan 28, 2022 | Team Udayavani |

ಬೆಂಗಳೂರು: ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಟಿ.ಜಿ. ಶಿವಶಂಕರೇ ಗೌಡ ಅವರ ವಿರುದ್ಧವೇ ಸಿವಿಲ್‌ ನ್ಯಾಯಾಂಗ ನಿಂದನೆ ದಾವೆ ಹೂಡಿದ್ದ ಉಡುಪಿ ಜಿಲ್ಲೆಯ ಕಾರ್ಕಳ ಮೂಲದ ಜಿತೇಂದ್ರ ಕುಮಾರ್‌ ರಾಜನ್‌ ಎಂಬವರಿಗೆ ಬರೋಬ್ಬರಿ 11 ಲಕ್ಷ ರೂ. ದಂಡ ವಿಧಿಸಲಾಗಿದೆ.

Advertisement

ಅರ್ಜಿಯನ್ನು ವಿಚಾರಣೆ ನಡೆಸಿದ ಹಿರಿಯ ನ್ಯಾ| ಬಿ. ವೀರಪ್ಪ ಹಾಗೂ ನ್ಯಾ| ಎಂ.ಜಿ. ಉಮಾ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ದಂಡ ವಿಧಿಸಿ ಆದೇಶಿಸಿದೆ.

ಜಿತೇಂದ್ರ ಕುಮಾರ್‌ ರಾಜನ್‌ ಪ್ರತ್ಯೇಕ 11 ಅರ್ಜಿಗಳನ್ನು ಸಲ್ಲಿಸಿದ್ದರು. ಅದರಂತೆ ಒಂದೊಂದು ಅರ್ಜಿಗೆ ತಲಾ 1 ಲಕ್ಷ ರೂ.ಗಳಂತೆ ಒಟ್ಟು 11 ಲಕ್ಷ ರೂ. ದಂಡ ವಿಧಿಸಲಾಗಿದೆ.

ದಂಡದ ಮೊತ್ತವನ್ನು 8 ವಾರಗಳಲ್ಲಿ ವಕೀಲರ ಪರಿಷತ್ತಿಗೆ ಪಾವತಿಸಬೇಕು. ನಿಗದಿತ ಅವಧಿಯಲ್ಲಿ ದಂಡದ ಮೊತ್ತ ಪಾವತಿಸದಿದ್ದರೆ ಜಿಲ್ಲಾಧಿಕಾರಿಗಳು ದಂಡ ವಸೂಲಿಗೆ ಕ್ರಮ ಕೈಗೊಳ್ಳಬೇಕು. ದಂಡದ ಮೊತ್ತ ಪಾವತಿಯಾಗದಿದ್ದರೆ ವಕೀಲರ ಪರಿಷತ್ತು ಅರ್ಜಿದಾರರ ವಿರುದ್ಧ ನ್ಯಾಯಾಂಗ ನಿಂದನೆ ದಾವೆ ಹೂಡಬಹುದು ಎಂದು ಹೈಕೋರ್ಟ್‌ ಆದೇಶಿಸಿದೆ.

ಅದೇ ರೀತಿ ಅನಗತ್ಯವಾಗಿ ಸಿವಿಲ್‌ ನ್ಯಾಯಾಂಗ ನಿಂದನೆ ದಾವೆ ಹೂಡಿ ನ್ಯಾಯಾಲಯದ ಅಮೂಲ್ಯ ಸಮಯ ಹಾಳು ಮಾಡಿದ್ದಲ್ಲದೆ ರಿಜಿಸ್ಟ್ರಾರ್‌ ಜನರಲ್‌ ಅವರ ವಿರುದ್ಧ ದಾವೆ ಹೂಡುವ ಮೂಲಕ ನ್ಯಾಯಾಂಗದ ಮೇಲೆ ಸವಾರಿ ಮಾಡಿ ನ್ಯಾಯಾಂಗದ ಅಧಿಕಾರಿಗಳನ್ನು ಬೆದರಿಸುವ ಅರ್ಜಿದಾರರ ಕ್ರಮ ಅಕ್ಷಮ್ಯ. ಅಲ್ಲದೇ ಇದು ನ್ಯಾಯಾಂಗದ ವ್ಯವಸ್ಥೆಯನ್ನು ಅಣಕಿಸಿದಂತಾಗುತ್ತದೆ. ಹಾಗಾಗಿ, ಅರ್ಜಿದಾರರ ವಿರುದ್ಧ ಸ್ವಯಂಪ್ರೇರಿತ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸುವಂತೆ ರಿಜಿಸ್ಟ್ರಾರ್‌ ಜನರಲ್‌ಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

Advertisement

ಇದನ್ನೂ ಓದಿ:ನಾಗರ ಹಾವು ಮತ್ತು ನಾಯಿ ನಡುವೆ ಘೋರ ಕಾದಾಟ: ಎರಡೂ ಜೀವ ಅಂತ್ಯ

ಪ್ರಕರಣವೊಂದಕ್ಕೆ ಸಂಬಂಧಿಸಿ ಅರ್ಜಿದಾರ ಸಲ್ಲಿಸಿದ್ದ ರಿಟ್‌ ಅರ್ಜಿಗಳನ್ನು 2021ರ ಮೇ 19ರಂದು ವಜಾಗೊಳಿಸಿದ್ದ ಏಕಸದಸ್ಯ ನ್ಯಾಯಪೀಠ, 1 ಲಕ್ಷ ರೂ. ದಂಡ ವಿಧಿಸಿತ್ತು. ದಂಡದ ಮೊತ್ತವನ್ನು ವಸೂಲಿ ಮಾಡುವಂತೆ ರಿಜಿಸ್ಟಾರ್‌ ಜನರಲ್‌ ಅವರಿಗೆ ನಿರ್ದೇಶನ ನೀಡಿತ್ತು. ಆದರೆ, ದಂಡದ ಮೊತ್ತ ಪಾವತಿಸದೆ ರಿಜಿಸ್ಟ್ರಾರ್‌ ಜನರಲ್‌ ವಿರುದ್ಧವೇ ಸಿವಿಲ್‌ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದ. ಇದು ನ್ಯಾಯಾಲಯದ ಕೆಂಗಣ್ಣಿಗೆ ಕಾರಣವಾಗಿದೆ.
ನ್ಯಾಯಾಂಗದ ಮೇಲೆ ಸವಾರಿ ಸಹಿಸುವುದಿಲ್ಲ

ಇತ್ತೀಚಿನ ದಿನಗಳಲ್ಲಿ ಸುಳ್ಳು ನ್ಯಾಯಾಂಗ ನಿಂದನೆ ಅರ್ಜಿಗಳನ್ನು ಸಲ್ಲಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಈ ಪ್ರಕರಣದಲ್ಲಿ ನ್ಯಾಯಾಂಗದ ಅಧಿಕಾರಗಳ ಮೇಲೆ ನ್ಯಾಯಾಂಗ ನಿಂದನೆ ಆರೋಪ ಮಾಡಲಾಗಿದೆ. ಇದು ನ್ಯಾಯಾಂಗವನ್ನು ಬೆದರಿಸುವ ಮತ್ತು ನ್ಯಾಯಾಂಗದ ಮೇಲೆ ಸವಾರಿ ಮಾಡಿದಂತೆ. ಇಂಥದ್ದನ್ನು ನೋಡಿ ನ್ಯಾಯಾಲಯ ಮೌನವಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಸುಳ್ಳು ಅರ್ಜಿ ಸಲ್ಲಿಸಿ ನ್ಯಾಯಾಲಯದ ಅಮೂಲ್ಯ ಸಮಯವನ್ನು ಹಾಳು ಮಾಡುವುದನ್ನು, ನ್ಯಾಯಾಂಗ ಪ್ರಕ್ರಿಯೆಗಳನ್ನು ದುರ್ಬಳಕೆ ಮಾಡಿಕೊಳ್ಳುವ ಇಂತಹ ನಿಂದನಾತ್ಮಕ ನಡವಳಿಕೆಗಳನ್ನು ಮಟ್ಟ ಹಾಕಬೇಕು. ನ್ಯಾಯಾಂಗದ ಘನತೆ ಎತ್ತಿ ಹಿಡಿಯಬೇಕು. ಸಾಮಾನ್ಯವಾಗಿ “ಪಾರ್ಟಿ ಇನ್‌ ಪರ್ಸನ್‌’ (ಖುದ್ದು ವಾದ ಮಂಡನೆ) ಅರ್ಜಿಗಳಲ್ಲಿ ನ್ಯಾಯಾಲಯ ದಯೆ, ತಾಳ್ಮೆ ತೋರುತ್ತದೆ. ಆದರೆ, ನ್ಯಾಯಾಲಯದ ಒಳ್ಳೆಯತನವನ್ನು ದೌರ್ಬಲ್ಯವೆಂದು ತಿಳಿದರೆ ಸುಮ್ಮನಿರಲು ಆಗದು ಎಂದು ಹೈಕೋರ್ಟ್‌ ಆದೇಶದಲ್ಲಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next