ಬೆಂಗಳೂರು: ತಮ್ಮ ಆಸ್ತಿ ವಿವರ ಘೋಷಣೆ ಮಾಡಿ ಹಾಗೂ 2010ರಲ್ಲಿ ಅಂದಿನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಭೂಕಬಳಿಕೆ ಆರೋಪ ಕೇಳಿ ಬಂದಾಗ ಅದರ ವಿರುದ್ಧ ಧ್ವನಿ ಎತ್ತಿ ದಿಟ್ಟತನ ಪ್ರದರ್ಶಿಸಿದ್ದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಿ.ವಿ. ಶೈಲೇಂದ್ರ ಕುಮಾರ್ (72) ವಿಧಿವಶರಾದರು.
ನ್ಯಾ. ಶೈಲೇಂದ್ರ ಕುಮಾರ್ ಅವರಿಗೆ ಶುಕ್ರವಾರ ಬೆಳಗ್ಗೆ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿತು. ತಕ್ಷಣ ಕುಟುಂಬಸ್ಥರು ಸಮೀಪದ ಖಾಸಗಿ ಆಸ್ಪತ್ರೆಗೆ ಅವರನ್ನು ಕರೆದುಕೊಂಡು ಹೋದರು. ಆದರೆ, ಮಾರ್ಗ ಮಧ್ಯದಲ್ಲೇ ಅವರು ಕೊನೆಯುಸಿರೆಳೆದರು.
ಚಾಮರಾಜ ಪೇಟೆಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಕುಟುಂಬ ಮೂಲಗಳು ತಿಳಿಸಿವೆ. 2010ರಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಯಾಗಿದ್ದ ಪಿ.ಡಿ.ದಿನಕರನ್ ವಿರುದ್ಧ ಭೂಕಬಳಿಕೆ ಆರೋಪ ಕೇಳಿ ಬಂದಾಗ ಅದರ ವಿರುದ್ಧ ನ್ಯಾ. ಶೈಲೇಂದ್ರ ಕುಮಾರ್ ಧ್ವನಿ ಎತ್ತಿದ್ದರು. ನ್ಯಾ. ದಿನಕರನ್ ವಿರುದ್ಧದ ಆರೋಪದ ಹಿನ್ನೆಲೆಯಲ್ಲಿ ನ್ಯಾ.ಶೈಲೇಂದ್ರ ಕುಮಾರ್ ತಾವೇ “ಪೂರ್ಣ ನ್ಯಾಯಾಲಯ’ ಸಭೆ ಕರೆದಿದ್ದರು.
ಇದಕ್ಕೆ ಬೇರೆ ನ್ಯಾಯಮೂರ್ತಿಗಳು ಬೆಂಬಲ ನೀಡದಿದ್ದಾಗ ತಾವೊಬ್ಬರೇ ಸಭೆ ನಡೆಸಿ ತಮ್ಮ ಸ್ವಂತ “ಬ್ಲಾಗ್’ನಲ್ಲಿ ಬರೆದುಕೊಂಡಿದ್ದರು. ಅಲ್ಲದೇ ಆಗಿನ ಮುಖ್ಯ ನ್ಯಾಯಮೂರ್ತಿ ಪಿ.ಡಿ. ದಿನಕರನ್ ಅವರ ಕೆಲವು ಆಡಳಿತಾತ್ಮಕ ನಿರ್ಧಾರಗಳನ್ನು ಪ್ರಶ್ನಿಸಿ ಸಹ ತೀರ್ಪು ನೀಡಿದ್ದರು.
ಇದನ್ನು ಹೈಕೋರ್ಟ್ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಮುಖ್ಯವಾಗಿ ತಮ್ಮ ಹಾಗೂ ಕುಟುಂಬದ ಆಸ್ತಿ ಬಹಿರಂಗಪಡಿಸಲು ಅನುಮತಿ ಕೊಡಬೇಕೆಂದು ನ್ಯಾ. ಶೈಲೇಂದ್ರ ಕುಮಾರ್ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಪತ್ರ ಬರೆದಿದ್ದರು. ಇದಕ್ಕೆ ಒಪ್ಪಿಗೆ ಕೊಡದಿದ್ದಾಗ ಸ್ವಂತ ಬ್ಲಾಗ್‌ನಲ್ಲಿ ತಮ್ಮ ಹಾಗೂ ಕುಟುಂಬದ ಸದಸ್ಯರ ಆಸ್ತಿ ವಿವರನ್ನು ಬಹಿರಂಗಪಡಿಸಿದ್ದರು.
ಈ ವಿಚಾರವೂ ಸಹ ಸುಪ್ರೀಂಕೋರ್ಟ್‌ವರೆಗೆ ಹೋಗಿತ್ತು. 1951ರ ಸೆಪ್ಟೆಂಬರ್ 5ರಂದು ಜನಿಸಿದ್ದ ನ್ಯಾ. ಶೈಲೇಂದ್ರ ಕುಮಾರ್, 1976ರಲ್ಲಿ ವಕೀಲ ವೃತ್ತಿ ಆರಂಭಿಸಿದ್ದರು. 2000ನೇ ಇಸ್ವಿಯಲ್ಲಿ ಹೈಕೋರ್ಟ್‌ಗೆ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕಗೊಂದ್ದರು. ಸುದೀರ್ಘ 13 ವರ್ಷಗಳ ಕಾಲ ಹೈಕೋರ್ಟ್ ನ್ಯಾಯಮೂರ್ತಿಳಾಗಿ ಸೇವೆ ಸಲ್ಲಿಸಿ 2013ರಲ್ಲಿ ನಿವೃತ್ತರಾಗಿದ್ದರು.