ಚಿತ್ರದುರ್ಗ: ನ್ಯಾಯಾಧೀಶರು ತೀರ್ಪು ನೀಡುವಾಗ ಮಾನವೀಯತೆಯನ್ನೂ ಪರಿಗಣಿಸಬೇಕು. ನ್ಯಾಯವನ್ನು ಎತ್ತಿ ಹಿಡಿದು ವೃತ್ತಿ ಘನತೆ ಕಾಪಾಡಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿ ಎಚ್.ಎಂ. ವಿರೂಪಾಕ್ಷಯ್ಯ ಹೇಳಿದರು.
ಬಡ್ತಿ ಪಡೆದು ಮೈಸೂರಿಗೆ ವರ್ಗಾವಣೆಗೊಂಡ ಅವರಿಗೆ ಜಿಲ್ಲಾ ವಕೀಲರ ಸಂಘದಿಂದ ವಕೀಲರ ಭವನದಲ್ಲಿ ಹಮ್ಮಿಕೊಂಡಿದ್ದ ಅಭಿನಂದನೆ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ತೀರ್ಪು ನೀಡುವಾಗ ಕೇವಲ ಕಾನೂನನ್ನೇ ದೃಷ್ಟಿಯಲ್ಲಿಟ್ಟುಕೊಳ್ಳುವುದರ ಜೊತೆಗೆ ಮಾನವೀಯತೆ ಮತ್ತು ಸಾಮಾನ್ಯ ಜ್ಞಾನವನ್ನು ಬಳಸಿ ತೀರ್ಪು ನೀಡಬೇಕು. ಸಿ.ಪಿ.ಸಿ., ಸಿ.ಆರ್.ಪಿ.ಸಿ ಸದಾ ನಿಮ್ಮ ಜೊತೆ ಇರಬೇಕು. ನ್ಯಾಯಾಲಯದಲ್ಲಿ ನ್ಯಾಯ ಪಡೆಯಲು ಬರುವ ನೊಂದ ಕಕ್ಷಿದಾರರಿಗೆ ನ್ಯಾಯ ಕೊಡಿಸುವ ಜವಾಬ್ದಾರಿ ವಕೀಲರು ಹಾಗೂ ನ್ಯಾಯಾಧೀಶರ ಮೇಲಿದೆ. ವಕೀಲರ ಸಹಕಾರ ಇಲ್ಲದಿದ್ದರೆ ನ್ಯಾಯಾಧೀಶರು ಏನು ಮಾಡಲೂ ಆಗುವುದಿಲ್ಲ. ರಾಜ್ಯದ ವಿವಿಧೆಡೆ ಕೆಲಸ ಮಾಡಿದ್ದೇನೆ. ಚಿತ್ರದುರ್ಗದಲ್ಲಿ ಕೆಲಸ ಮಾಡುವಾಗ ಸಿಕ್ಕಷ್ಟು ಖುಷಿ ಬೇರೆ ಕಡೆ ಸಿಗಲಿಲ್ಲ ಎಂದರು.
ಉತ್ತಮ ವಕೀಲನಾಗಿ ಸಮಾಜದಲ್ಲಿ ಕೀರ್ತಿ ಗಳಿಸಬೇಕಾದರೆ ಶ್ರಮಪಟ್ಟು ಓದಬೇಕು. ಕಕ್ಷಿದಾರರೇ ನಿಮಗೆ ಪ್ರಭುಗಳಾಗಿದ್ದು, ಯಾವುದೇ ಕಾರಣಕ್ಕೂ ಕಕ್ಷಿದಾರರಿಗೆ ಅನ್ಯಾಯವಾಗಬಾರದು. ವಕೀಲರು ಮತ್ತು ನ್ಯಾಯಾಧೀಶರ ಮೇಲೆ ಜನ ಹಾಗೂ ಕಕ್ಷಿದಾರರು ಇಟ್ಟಿರುವ ನಂಬಿಕೆ, ಆತ್ಮವಿಶ್ವಾಸಕ್ಕೆ ದ್ರೋಹ ಬಗೆಯದೆ ಸಮಾಜದ ಹಿತವನ್ನು ಗಮನದಲ್ಲಿಟ್ಟುಕೊಂಡಿರಬೇಕು ಎಂದು ತಿಳಿಸಿದರು.
ಪದೋನ್ನತಿ ಪಡೆದು ಬೆಂಗಳೂರಿಗೆ ವರ್ಗಾವಣೆಯಾಗಿರುವ ಹಿರಿಯ ವಿಭಾಗದ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಸಿ. ಸೆಲ್ವಕುಮಾರ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಸರ್ಕಾರಿ ನೌಕರಿಯಲ್ಲಿ ಪದೋನ್ನತಿ, ವರ್ಗಾವಣೆ ಸಹಜ. ಆದರೆ ನಾವು ಕೆಲಸ ಮಾಡಿದ ಸ್ಥಳದಲ್ಲಿ ವಕೀಲರೊಂದಿಗೆ ಸಹಕಾರ, ವಿಶ್ವಾಸ, ಅಭಿಮಾನವಿಟ್ಟುಕೊಂಡಿರುವುದು ಮಾತ್ರ ಕೊನೆಯವರೆಗೂ ನೆನಪಿನಲ್ಲಿ ಉಳಿಯುತ್ತದೆ. ಚಿತ್ರದುರ್ಗದಿಂದ ವರ್ಗವಾಗಿ ಭಾರವಾದ ಮನಸ್ಸಿನಿಂದ ಹೋಗುತ್ತಿದ್ದೇನೆ. ಚಿತ್ರದುರ್ಗದಲ್ಲಿ ನಾನು ಕೆಲಸ ಮಾಡಿದ ಸಂದರ್ಭದಲ್ಲಿ ಎಲ್ಲಿಯೂ ಅಹಿತಕರ ಘಟನೆ, ಸಂದರ್ಭ, ಸನ್ನಿವೇಶ ಬರಲಿಲ್ಲ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಸ್.ಬಿ. ವಸ್ತ್ರಮಠ ಮಾತನಾಡಿ, ನ್ಯಾಯಾಧೀಶರ ನಿರ್ಧಾರ ಸರಿಯೋ ತಪ್ಪೋ, ಒಳ್ಳೆಯವರೋ ಕೆಟ್ಟವರೋ ಎಂದು ನಿರ್ಧರಿಸುವವರು ವಕೀಲರು. ಇಲ್ಲಿಂದ ವರ್ಗಾವಣೆಯಾಗಿ ಹೋಗುತ್ತಿರುವ ಇಬ್ಬರು ನ್ಯಾಯಾಧೀಶರು ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ಚಳ್ಳಕೆರೆಯಲ್ಲಿ ನ್ಯಾಯಾಧೀಶರ ಕೊರತೆಯಿದೆ. ಇದರಿಂದ ಪ್ರಕರಣಗಳನ್ನು ಬೇಗ ಇತ್ಯರ್ಥ ಮಾಡುವುದು ತಡವಾಗಬಹುದು. ವಕೀಲ ವೃತ್ತಿ ಅತ್ಯಂತ ಪ್ರಾಮಾಣಿಕವಾದುದು. ಕಷ್ಟುಪಟ್ಟು ಕಾನೂನು ಓದಿ ಸೆಕ್ಷನ್‌ಗಳನ್ನು ತಿಳಿದುಕೊಂಡರೆ ಮುಂದೆ ಒಂದಲ್ಲ ಒಂದು ದಿನ ಫಲ ಸಿಗುತ್ತದೆ. ಕಕ್ಷಿದಾರರ ಬಗ್ಗೆ ವಕೀಲರು, ನ್ಯಾಯಾಧೀಶರುಗಳಿಗೆ ಅರ್ಪಣಾ ಮನೋಭಾವವಿರಬೇಕು ಎಂದು ಹೇಳಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಬಿ. ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ವೀರಣ್ಣ, ನ್ಯಾಯಾಧೀಶರುಗಳಾದ ಭಂಡಾರಿ, ಬಸವರಾಜ ಲಿಂಗಾರೆಡ್ಡಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶಿವು ಯಾದವ್, ಉಪಾಧ್ಯಕ್ಷ ವೀರಭದ್ರಪ್ಪ ಇದ್ದರು. ವಕೀಲರಾದ ನಟರಾಜ್, ಆರ್. ಉದಯಶಂಕರ್, ಕೆ.ಎಸ್. ವಿಜಯ, ಬಿ.ಕೆ. ರಹಮತ್‌ವುಲ್ಲಾ, ಮಹೇಶ್ವರಪ್ಪ, ಲೋಕೇಶ್ ಮತ್ತಿತರರು ಮಾತನಾಡಿದರು.