ಬೆಂಗಳೂರು: ಹೆಚ್ಚುವರಿ ಶಿಕ್ಷಕರ ಮರು ಹಂಚಿಕೆ ಮತ್ತು ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಯ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಜೂ. 6ರಿಂದ ಪ್ರಾರಂಭಗೊಂಡು ಜುಲೈ 31ಕ್ಕೆ ವರ್ಗಾವಣೆಯ ಎಲ್ಲ ಪ್ರಕ್ರಿಯೆಗಳು ಮುಕ್ತಾಯಗೊಳ್ಳಲಿದೆ.
ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು, ಮುಖ್ಯೋಪಾಧ್ಯಾಯರು ಮತ್ತು ತತ್ಸಮಾನ ವೃಂದದ ಸುಮಾರು 75 ಸಾವಿರ ಶಿಕ್ಷಕರ ಅರ್ಜಿಗಳು ವಿಲೇವಾರಿ ಆಗಲಿದ್ದು, ಸುಮಾರು 30 ಸಾವಿರ ಶಿಕ್ಷಕರಿಗೆ ಪ್ರಯೋಜನವಾಗಲಿದೆ ಎಂದು ಸರಕಾರತಿಳಿಸಿದೆ.
ಹೆಚ್ಚುವರಿ ಶಿಕ್ಷಕರ (ಪ್ರಾ. ಮತ್ತು ಪ್ರೌಢ ಶಿಕ್ಷಕರು) ಪರಿಷ್ಕೃತ ಕರಡು ಪಟ್ಟಿ ಜೂ. 6 ರಂದು ಪ್ರಕಟಗೊಳ್ಳಲಿದೆ. ಆಕ್ಷೇಪಣೆ ಸಲ್ಲಿಸಲು ಜೂ. 10ರ ವರೆಗೆ ಸಮಯವಿದೆ. ಅಂತಿಮ ತಾತ್ಕಾಲಿಕ ಪಟ್ಟಿ ಜೂ. 14ರಂದು ಪ್ರಕಟಗೊಳ್ಳಲಿದೆ. ಹೆಚ್ಚುವರಿ ಶಿಕ್ಷಕರ ಕೌನ್ಸೆಲಿಂಗ್ ಜೂ. 20 ಮತ್ತು 21ರಂದು ನಡೆಯಲಿದೆ. ಶಿಕ್ಷಕರ ಮರುಹೊಂದಾಣಿಕೆ ಕ್ರಮ ಜೂ. 22ರಂದು ನಡೆಯಲಿದೆ.
ತಾಂತ್ರಿಕ ಸಹಾಯಕರ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕ ಮತ್ತು ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆ ಜೂ. 8ರಂದು ಪ್ರಾರಂಭ ಗೊಳ್ಳಲಿದೆ. ನಿರ್ದಿಷ್ಟಪಡಿಸಿದ ಹುದ್ದೆಯಲ್ಲಿ 5 ವರ್ಷದ ಅವಧಿ ಪೂರ್ಣಗೊಳಿಸಿದ ಅಧಿಕಾರಿ, ಶಿಕ್ಷಕರ ಪಟ್ಟಿ ಜೂನ್ 8ರಂದು ಪ್ರಕಟಿಸಲಾಗುತ್ತದೆ. ಜೂ. 17ಕ್ಕೆ ಆದ್ಯತೆ ಪಟ್ಟಿ ಪ್ರಕಟ, ಜೂ. 23ಕ್ಕೆ ಸ್ಥಳ ನಿಯುಕ್ತಿ ಪ್ರಕ್ರಿಯೆ ನಡೆಯಲಿದೆ. ಜೂ. 26ರಂದು ಜಿಲ್ಲೆಯೊಳಗೆ ಅತೀ ಹೆಚ್ಚಿನ ಮಕ್ಕಳ ದಾಖಲಾತಿ ಇರುವ ಶಾಲೆಗಳಲ್ಲಿ ಇಳಿಕೆ ಕ್ರಮಾಂಕದಲ್ಲಿ ಶಿಕ್ಷಕರ ಮರುಹೊಂದಾಣಿಕೆ ಕ್ರಮ ನಡೆಯಲಿದೆ.
Related Articles
ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಯಲ್ಲಿ ಆದ್ಯತೆ ಕ್ಲೇಮ್ ಮಾಡಲು ಬಯಸುವ ಶಿಕ್ಷಕರು ಆದ್ಯತೆಯ ದಾಖಲೆ ಹಾಗೂ ಇತರ ಆಕ್ಷೇಪಣೆಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸಲ್ಲಿಸಲು ಜೂ. 7ರಿಂದ 9ರ ವರೆಗೆ ಅವಕಾಶ ನೀಡಲಾಗಿದೆ. ಕೋರಿಕೆ ಮತ್ತು ಪರಸ್ಪರ ವರ್ಗಾವಣೆಗೆ ಅರ್ಹ/ಅನರ್ಹ ಶಿಕ್ಷಕರ ಅಂತಿಮ ತಾತ್ಕಾಲಿಕ ಆದ್ಯತಾ ಪಟ್ಟಿ ಜೂ. 28ರಂದು ಪ್ರಕಟವಾಗಲಿದೆ. ಜು. 7ರಂದು ಸ್ಥಳ ನಿಯುಕ್ತಿಗೆ ಶಿಕ್ಷಕರ ಅಂತಿಮ ಆದ್ಯತಾ ಪಟ್ಟಿ ಪ್ರಕಟಗೊಳ್ಳಲಿದೆ.
ಆ ಬಳಿಕ ಜಿಲ್ಲಾ ಹಂತದ ವರ್ಗಾವಣೆಗೆ ಸಂಬಂಧಿಸಿ ಕೌನ್ಸೆಲಿಂಗ್‌ಗೆ ಲಭ್ಯವಿರುವ ವೃಂದವಾರು/ವಿಷಯವಾರು ಖಾಲಿ ಹುದ್ದೆಗಳ ಮಾಹಿತಿ ಜು. 10ರಂದು ಪ್ರಕಟಗೊಳ್ಳಳಿದೆ. ಇನ್ನು ಜು.11 ಮತ್ತು 12ರಂದು ಪ್ರಾಥಮಿಕ, ಜು. 13 ಮತ್ತು ಜು. 14ರ ವರೆಗೆ ಪ್ರೌಢಶಾಲಾ ಶಿಕ್ಷಕರ ಅಂತಿಮ ಜೇಷ್ಠತಾ ಪಟ್ಟಿಯಂತೆ ಗಣಕೀಕೃತ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿ ಪ್ರಕ್ರಿಯೆ ನಡೆಯಲಿದೆ. ಜು. 15ರಂದು ಜೇಷ್ಠತಾ ಪಟ್ಟಿಯಂತೆ ಪರಸ್ಪರ ವರ್ಗಾವಣೆಗಳ ಗಣಕೀಕೃತ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿ ಪ್ರಕ್ರಿಯೆ, ಜು. 17ಕ್ಕೆ ತಾಂತ್ರಿಕ ಸಹಾಯಕರ ಸ್ಥಳ ನಿಯುಕ್ತಿ ಪ್ರಕ್ರಿಯೆ ನಡೆಯಲಿದೆ.
ವಿಭಾಗೀಯ ಹಂತದ ವರ್ಗಾವಣೆ ಕ್ರಮಗಳಲ್ಲಿ ಜು. 17ರಂದು ಕೌನ್ಸೆಲಿಂಗ್‌ಗೆ ಲಭ್ಯವಿರುವ ವೃಂದವಾರು/ವಿಷಯವಾರು ಖಾಲಿ ಹುದ್ದೆಗಳ ಪ್ರಕಟನೆ, ಪ್ರಾಥಮಿಕ ಶಾಲಾ ಶಿಕ್ಷಕರ ಗಣಕೀಕೃತ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿ ಜು. 18ರಿಂದ 20ರ ವರೆಗೆ, ಅದೇ ಪ್ರೌಢ ಶಾಲಾ ಶಿಕ್ಷಕರ ಸ್ಥಳ ನಿಯುಕ್ತಿ ಪ್ರಕ್ರಿಯೆ ಜು. 21ರಿಂದ 24ರ ವರೆಗೆ ನಡೆಯಲಿದೆ. ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸ್ಥಳ ನಿಯುಕ್ತಿ ಪ್ರಕ್ರಿಯೆ ಜುಲೈ 25ರಂದು ನಡೆಯಲಿದೆ. ಈ ಮೂರು ವಿಭಾಗದ ಸ್ಥಳ ನಿಯುಕ್ತಿ ಚಟುವಟಿಕೆ ಜುಲೈ 25ರಂದು ಸಹ ನಡೆಯಲಿದೆ.
ಅಂತರ್ ವಿಭಾಗೀಯ ಹಂತದ ವರ್ಗಾವಣೆ ಕ್ರಮಗಳಡಿ ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್‌ನ ಅಂತಿಮ ಖಾಲಿ ಹುದ್ದೆಗಳ ಪಟ್ಟಿ ಜು. 25ರಂದು ಪ್ರಕಟಗೊಳ್ಳಲಿದೆ. ಪರಸ್ಪರ ವರ್ಗಾವಣೆಗಳ ಗಣಕೀಕೃತ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿ ಪ್ರಕ್ರಿಯೆ ಜು. 31ರಂದು ನಡೆಯಲಿದೆ ಎಂದು ಶಿಕ್ಷಣ ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ.