ನವದ್ವೀಪ್: ಬಂಗಾಲದ ಜನತೆ ತೃಣಮೂಲ ಕಾಂಗ್ರೆಸ್ ಆಡಳಿತವನ್ನು ಅಂತ್ಯಗೊಳಿಸಲು ತೀರ್ಮಾನಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.
ಪಶ್ಚಿಮ ಬಂಗಾಲ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯ “ಪರಿವರ್ತನಾ ಯಾತ್ರೆ’ಗೆ ಚಾಲನೆ ನೀಡಿದ ಅವರು, “ಅಧಿಕಾರಕ್ಕೆ ಬರುವ ಮೊದಲು ಟಿಎಂಸಿ ಮಾ, ಮಟಿ, ಮನುಷ್ (ತಾಯಿ, ಭೂಮಿ ಮತ್ತು ಜನತೆ) ಎಂಬ ಸ್ಲೋಗನ್ ಹೊಂದಿತ್ತು. ಆದರೆ ಈಗ ಸರ್ವಾಧಿಕಾರ, ಸುಲಿಗೆ, ಮುಸ್ಲಿಮ್- ಎಂದು ತನ್ನ ಸ್ಲೋಗನ್ ಬದಲಿಸಿಕೊಂಡಿದೆ. ಅಂಫಾನ್ ಸೈಕ್ಲೋನ್‌ಗೆ ನೀಡಿದ ಪರಿಹಾರದ ಹಣವನ್ನೂ ದುರುಪಯೋಗ ಮಾಡಲಾಗಿದೆ. ಆ ಹಣ ಟಿಎಂಸಿ ಕಾರ್ಯಕರ್ತರ ಕಿಸೆ ಸೇರಿದೆ’ ಎಂದು ಆರೋಪಿಸಿದರು.
ರೈತರೊಂದಿಗೆ ಭೋಜನ: ಮಾಲ್ಡಾದಲ್ಲಿ ನಡೆದ ಸಮುದಾಯದ ಹಬ್ಬದಲ್ಲಿ ರೈತರೊಂದಿಗೆ ಕುಳಿತು ಕಿಚಡಿ ಸವಿದ ನಡ್ಡಾ, ಬಳಿಕ ನಡೆದ ಕಾರ್ಯಕ್ರಮದಲ್ಲೂ ದೀದಿಯ ರೈತ ವಿರೋಧಿ ನಿಲುವುಗಳನ್ನು ಎತ್ತಿಹಿಡಿದರು. “ಮಮತಾ ಬಂಗಾಲಿ ರೈತರಿಗೆ ಮಾಡಿದ್ದಾದರೂ ಏನು? ಆಕೆಯ ದುರಾಸೆ, ಅಹಂಕಾರದ ಕಾರಣಕ್ಕಾಗಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನೇ ಜಾರಿಗೊಳಿಸಿರಲಿಲ್ಲ. ಇದರಿಂದ ಬಂಗಾಲದ 70 ಲಕ್ಷ ರೈತರಿಗೆ ನಷ್ಟವಾಗಿತ್ತು’ ಎಂದು ವಿಷಾದಿಸಿದರು.
ಪ್ರಧಾನಿ ಮೋದಿ ಸರಕಾರ ರೈತರಿಗೆ ನೀಡಿದ ಕೊಡುಗೆಗಳನ್ನು ವಿವರಿಸಿದರು. ಬಳಿಕ ಕೇಂದ್ರೀಯ ಉಪೋಷ್ಣವಲಯದ ತೋಟಗಾರಿಕಾ ಸಂಶೋಧನ ಸಂಸ್ಥೆಗೆ ಭೇಟಿ ನೀಡಿ, ಉತ್ಪನ್ನಗಳ ಸಂಸ್ಕರಣೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಅಭಿಷೇಕ್ ತಿರುಗೇಟು: ಮೇದಿನಿಪುರದ ಯಾವುದೇ ಕ್ಷೇತ್ರದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ಸ್ಪರ್ಧಿಸಿದರೂ 50 ಸಾವಿರಕ್ಕೂ ಅಧಿಕ ಮತಗಳಿಂದ ಸೋಲುತ್ತಾರೆ ಎಂದು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಭವಿಷ್ಯ ನುಡಿದಿದ್ದಾರೆ. ಅಲ್ಲದೆ ಟಿಎಂಸಿ 250 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದಿದ್ದಾರೆ.