Advertisement

ಬೆಳ್ಳಿ ಚಮಚ ಕದ್ದ ಪತ್ರಕರ್ತರು!

08:41 AM Jan 11, 2018 | |

ಹೊಸದಿಲ್ಲಿ: ಪತ್ರಕರ್ತರು ಅನ್ಯಾಯ, ಅಕ್ರಮ, ವಂಚನೆಗಳನ್ನು ಬಯಲಿಗೆಳೆದು ಸುದ್ದಿ ಮಾಡುವವರು. ಆದರೆ ಅವರೇ ಸುದ್ದಿಯ ಸರಕಾದರೆ? ಬ್ರಿಟನ್‌ಗೆ ಹೋದಾಗ ಅಲ್ಲಿ ಕಳ್ಳತನ ಮಾಡಿದ ಕಾರಣಕ್ಕೆ ಈಗ ಭಾರತೀಯ ಪತ್ರಕರ್ತರೇ ಸುದ್ದಿಗೆ ಗ್ರಾಸವಾಗಿದ್ದಾರೆ. ಅವರು ಕಳ್ಳತನ ಮಾಡಿದ ಕಾರಣಕ್ಕೆ ಪಶ್ಚಿಮ ಬಂಗಾಲ  ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಮುಜುಗರಕ್ಕೀಡಾಗಬೇಕಾಗಿದೆ. 

Advertisement

ಇಂಥ ತಲೆತಗ್ಗಿಸುವಂಥ ಘಟನೆ ನಡೆದದ್ದು ಲಂಡನ್‌ನಲ್ಲಿ. ಸಿಎಂ ಮಮತಾ ಬ್ಯಾನರ್ಜಿ ಅವರ ಯುರೋಪ್‌ ಪ್ರವಾಸದ ವೇಳೆ ಅವರೊಂದಿಗೆ ಪತ್ರಕರ್ತರೂ ಅಲ್ಲಿಗೆ ತೆರಳಿ ದ್ದರು. ಲಂಡನ್‌ನಲ್ಲಿ ಅವರಿಗಾಗಿ ವಿಶೇಷ ಔತಣಕೂಟ ಏರ್ಪಡಿಸಲಾಗಿತ್ತು. ಉಭಯ ದೇಶಗಳ ಅಧಿಕಾರಿಗಳು, ಉದ್ಯಮಿಗಳು ಇದರಲ್ಲಿ ಪಾಲ್ಗೊಂಡಿದ್ದರು. ಅದರಲ್ಲಿ ಪತ್ರಕರ್ತರೂ ಭಾಗಿಯಾಗಿದ್ದರು. ಹೊಟೇಲ್‌ನ ಟೇಬಲ್‌ ಮೇಲೆ ಬೆಳ್ಳಿಯ ಚಮಚ, ಫೋರ್ಕ್‌ಗಳನ್ನು ಇರಿಸಲಾಗಿತ್ತು. ಔತಣದ ವೇಳೆ ಇದನ್ನು ಗಮನಿಸಿದ ಪತ್ರಕರ್ತರು, ಅವುಗಳನ್ನು ಒಂದೊಂದಾಗಿ ತಮ್ಮ ಚೀಲಗಳೊಳಗೆ ಇರಿಸಿಕೊಳ್ಳಲಾರಂಭಿಸಿದರು. ಇದನ್ನು ಹೊಟೇಲ್‌ ಸಿಬಂದಿ ಸಿಸಿಟಿವಿಯಲ್ಲಿ ಗಮನಿಸುತ್ತಿದ್ದರು.

ಕೂಡಲೇ ಹೊಟೇಲ್‌ ಸಿಬಂದಿ, “ನೀವು ಅಚಾತುರ್ಯದಿಂದ ಚಮಚಗಳನ್ನು ಬ್ಯಾಗಿನಲ್ಲಿ ಇರಿಸಿಕೊಂಡಿದ್ದರೆ ಅವುಗಳನ್ನು ಮರಳಿ, ಅವುಗಳಿದ್ದ ಜಾಗದಲ್ಲಿ ಇಡಿ’ ಎಂದು ಘೋಷಿಸಿದರು. ಸುಮಾರು ಬಾರಿ ಇದೇ ಘೋಷಣೆ ಮರುಕಳಿಸಿತು. ನಾಚಿದ ಪತ್ರಕರ್ತರು ಅವರು ಕದ್ದಿದ್ದ ವಸ್ತುಗಳನ್ನು ಮರಳಿಸಿದರು. ಆದರೆ ಒಬ್ಬ ಪತ್ರಕರ್ತ ಮಾತ್ರ ಮರಳಿಸುವ ಗೋಜಿಗೇ ಹೋಗಲಿಲ್ಲ. ಕೊನೆಗೆ ಅವರಿಂದ ಹೊಟೇಲ್‌ ಆಡಳಿತ 50 ಪೌಂಡ್‌ ದಂಡ ಕಟ್ಟಿಸಿಕೊಂಡಿತು. ಇವರು ಬಂಗಾಲದ ಪ್ರಮುಖ ಪತ್ರಿಕೆಯೊಂದರಲ್ಲಿ ಕೆಲಸ ಮಾಡುವ ಹಿರಿಯ ಪತ್ರಕರ್ತರು ಎನ್ನಲಾಗಿದೆ. ಈ ಘಟನೆ ಬಳಿಕ ಮಮತಾ ಅವರು ಪತ್ರಕರ್ತರನ್ನು ದೂರವಿರಿಸಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next