Advertisement
ತಥಾಕಥಿತ ನಕಲಿ ಪತ್ರದ ಪ್ರಕರಣವೊಂದರಲ್ಲಿ ಹಿರಿಯ ಪತ್ರಕರ್ತರೊಬ್ಬರು ಬಂಧನಕ್ಕೊಳಗಾದ ಪ್ರಸಂಗವನ್ನು ಕರ್ನಾಟಕದ ಮಾಧ್ಯಮ ರಂಗ ಒಂದು ತೆರನ ಆಲಸ್ಯದಿಂದೆಂಬಂತೆ ಕಣ್ಣು ಮುಚ್ಚಿ ಒಪ್ಪಿಕೊಂಡಿರುವುದು ನಿಜಕ್ಕೂ ದಿಗ್ಭ್ರಮೆ ಹುಟ್ಟಿಸುವಂಥ ಸಂಗತಿಯಾಗಿದೆ. ಸೇವಾ ಹಿರಿತನವಿರುವ ವ್ಯಕ್ತಿಯಾಗಿರುವ ಹೇಮಂತ್ ಕುಮಾರ್ ಅವರು ಬೆಂಗಳೂರು ಪತ್ರಿಕಾ ಬಳಗದಲ್ಲಿ ಅತ್ಯಂತ ಸುಪರಿಚಿತ ವ್ಯಕ್ತಿಯೂ ಆಗಿದ್ದಾರೆ.
Related Articles
Advertisement
ಹೇಮಂತ ಕುಮಾರ್ ತಾತ್ಕಾಲಿಕ ನೆಲೆಯ ಅಥವಾ ಪೀತ ಪತ್ರಕರ್ತರಲ್ಲ. ಅವರು ಒಂದೆರಡು ರಾಷ್ಟ್ರೀಯ ಇಂಗ್ಲಿಷ್ ದೈನಿಕಗಳ ಅಧಿಕೃತ ವರದಿಗಾರರಾಗಿದ್ದವರು; ಸುದ್ದಿಗಳಲ್ಲಿ ಯಾವುದು ನಕಲಿ, ಯಾವುದು ಢೋಂಗಿ, ಯಾವುದು ಹಳೆಯದು, ಯಾವುದು ಹೊಸದು ಎಂಬ ಬಗ್ಗೆ ವಿವೇಚನೆಯುಳ್ಳವರು. ಅವರು ಸುದ್ದಿಯನ್ನು ವರದಿ ಮಾಡಿದ್ದಾರೆ. ಕೃತಕವಾಗಿ ತಯಾರಿಸಿಲ್ಲ. ವಾಮಪಂಥೀಯ ಪತ್ರಕರ್ತರು ಇರಬಹುದಾದರೆ, ಬಲಪಂಥೀಯ ಪತ್ರಕರ್ತರೂ ಇರುವುದು ಅತ್ಯಂತ ಸಹಜವೇ ಆಗಿದೆ. ಬಲಪಂಥೀಯ ಪತ್ರಕರ್ತರ ಬಗ್ಗೆ ಕೆಲವರು ಪೂರ್ವಾಗ್ರಹ ಇರಿಸಿಕೊಂಡಿರುವುದನ್ನು ಕಂಡಿದ್ದೇನೆ. ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ನಿರ್ದಯ ವರದಿಯೊಂದು ಪ್ರಕಟವಾಗಿರುವುದನ್ನು ಕಂಡೆ. ರಸ್ತೆ ದುರಂತಕ್ಕೀಡಾದ ವಿದ್ಯಾರ್ಥಿಯೊಬ್ಬನಿಗೆ ಸಂಬಂಧಿಸಿದ ವರದಿ ಅದು. ಸಾವಿನ ವಿಷಾದನೀಯ ಅಂಶವನ್ನು ಕಿತ್ತು ಹಾಕುವ ಉದ್ದೇಶದಿಂದಲೋ ಏನೋ, ಆ ಹುಡುಗ ಓರ್ವ ಬಲಪಂಥೀಯ ಪತ್ರಿಕೆಯ ಸಂಪಾದಕರ ಪುತ್ರ ಎಂಬ ವಾಕ್ಯ ಆ ವರದಿಯಲ್ಲಿತ್ತು.
ಕರ್ನಾಟಕದಲ್ಲಿ ಮುಖ್ಯ ವಾಹಿನಿಯ ಪತ್ರಿಕೆಗಳಿಗೆ ಸೇರಿದ ಪತ್ರಕರ್ತರನ್ನು ಪೊಲೀಸರು ಬಂಧಿಸಿರುವ ಘಟನೆಗಳು ನಡೆದಿರುವುದು ಇಲ್ಲವೇ ಇಲ್ಲ ಎಂಬಷ್ಟು ಅಪರೂಪ. ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಮಾತ್ರವೇ (1975-77) ಆರೆಸ್ಸೆಸ್ ಒಲವಿನ ಕೆಲ ಪತ್ರಕರ್ತರು ಬಂಧನಕ್ಕೊಳಗಾಗಿದ್ದರು. ಹೀಗೆ ದಸ್ತಗಿರಿಗೊಳಗಾದವರಲ್ಲಿ ಅತ್ಯಂತ ಪ್ರಮುಖರೆಂದರೆ ಕಠೊರ ಕಾಯ್ದೆಯಾದ ‘ಮೀಸಾ’ದಡಿಯಲ್ಲಿ ಬಂಧನಕ್ಕೊಳಗಾದ ‘ವಿಕ್ರಮ’ ಪಾಕ್ಷಿಕದ ಸಂಪಾದಕ ಬೆ.ಸು.ನಾ. ಮಲ್ಯ. ಮಾನನಷ್ಟ ಮೊಕದ್ದಮೆ, ಬ್ಲಾಕ್‌ವೆುೕಲ್, ಹಣ ವಸೂಲಿ ಇತ್ಯಾದಿ ಪ್ರಕರಣಗಳಲ್ಲಿ ಪತ್ರಕರ್ತರು ಬಂಧನಕ್ಕೊಳಗಾಗಿದ್ದುದು ಹೌದು. ಇತ್ತೀಚೆಗಷ್ಟೆ ಬ್ಲಾಕ್‌ವೆುೕಲ್ ಆರೋಪದ ಮೇಲೆ ಕೆಲ ಟಿ.ವಿ. ಪತ್ರಕರ್ತರನ್ನು (ಅಥವಾ ಲೈಟ್ಬಾಯ್‌ಗಳನ್ನು, ಕ್ಯಾಮರಾಮನ್‌ಗಳನ್ನು) ಬಂಧಿಸಲಾಗಿತ್ತು.
ರಾಜ್ಯದ ಉನ್ನತ ಪೊಲೀಸಧಿಕಾರಿಗಳು, ಅದರಲ್ಲೂ ಮುಖ್ಯವಾಗಿ ಹೇಮಂತ್ ಅವರನ್ನು ಬಂಧಿಸಿರುವ ಅಪರಾಧ ತನಿಖಾ ವಿಭಾಗ (ಸಿಐಡಿ)ದ ಉನ್ನತಾಧಿಕಾರಿಗಳು ಪತ್ರಿಕಾ ಸ್ವಾತಂತ್ರ್ಯ ಕುರಿತಂತೆ ಸರ್ವೋಚ್ಚ ಹಾಗೂ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ನೀಡಿರುವ ತೀರ್ಪುಗಳನ್ನು ಹಾಗೂ ಕಾಯ್ದೆಗಳನ್ನು ಒಮ್ಮೆ ಓದಿ ನೋಡಬೇಕಾಗಿದೆ. ಹೇಮಂತ್ ಪ್ರಕರಣದಲ್ಲಿ ದೂರುದಾರರು ಗೃಹ ಸಚಿವರೇ ಆಗಿರುವುದರಿಂದ, ಇಲ್ಲಿ ಅತ್ಯಗತ್ಯವಾಗಿದ್ದ ‘ಮಾನಸಿಕ ಶ್ರದ್ಧೆ’ಯ ಆನ್ವಯಿಸುವಿಕೆಯನ್ನು ಪೊಲೀಸರು ಈ ಪ್ರಕರಣದಲ್ಲಿ ಕೈ ಬಿಟ್ಟಿರುವುದಕ್ಕೆ ಬಹುಶಃ ಇದೇ ಕಾರಣ.
ಪೊಲೀಸರು ನಿರ್ವಹಿಸಬೇಕಿದ್ದ ಪ್ರಾಥಮಿಕ ತನಿಖಾ ಪ್ರಕ್ರಿಯೆ ಯಾವುದರ ಬಗ್ಗೆ? ನೀಡಲಾದ ದೂರಿನಲ್ಲಿರುವ ನಿಜಾಯಿತಿಯ ಬಗ್ಗೆ. ಈ ಪ್ರಕರಣದಲ್ಲಿ ಮುಖ್ಯವಾದ ವಾದ ಆ ಪತ್ರ ನಕಲಿ ಎಂಬುದಾಗಿದೆ. ಪತ್ರ ನಕಲಿಯೇ ಅಲ್ಲವೇ ಎಂದು ನಿರ್ಧರಿಸಬೇಕಾದುದು ನ್ಯಾಯಾಲಯ. ಅಲ್ಲದೆ ಯಾವನೇ ಜವಾಬ್ದಾರಿಯುತ ಹಾಗೂ ಅನುಭವೀ ಪತ್ರಕರ್ತನ ದೃಷ್ಟಿಯಲ್ಲಿ ಲಿಂಗಾಯತ ವಿವಾದ ಹೊಸದಲ್ಲ. ಈಗಿನ ಮಟ್ಟಿಗೆ ವರದಿಗೆ ತಕ್ಕುದಲ್ಲದ್ದು . ಈ ವಿವಾದ ತಲೆಯೆತ್ತಿದ್ದು ವರ್ಷದ ಹಿಂದೆ ನಡೆದ ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ. ಅನುಭವಸ್ಥನಾದ ಪತ್ರಕರ್ತನೊಬ್ಬ ಇಂಥ ವಿಷಯಗಳನ್ನು ಮುಟ್ಟಲಾರ.
ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ದೊರಕಿಸಬೇಕೆಂದು ಆಗ್ರಹಿಸುವುದಕ್ಕೆ ಸಂಬಂಧಿಸಿದ ಈ ವಿವಾದವನ್ನು ಮತ್ತೆ ಕೆದಕುವಂತೆ ನಿರ್ದೇಶವಿತ್ತವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಎಂಬ ಉಲ್ಲೇಖ ಆ ‘ಫೋರ್ಜರಿ ಪತ್ರ’ದಲ್ಲಿದೆ ಎನ್ನಲಾಗಿದೆ. ಸೋನಿಯಾ ಗಾಂಧಿಯವರಿಗೆ ತಾನು (ಪಾಟೀಲ್) ಬರೆದಿರುವುದೆಂದು ಹೇಳಲಾಗುತ್ತಿರುವ ಈ ಪತ್ರವನ್ನು ಬಿಜೆಪಿ ನಾಯಕ ಯಡಿಯೂರಪ್ಪ ಉಲ್ಲೇಖೀಸಿರುವುದನ್ನು ಪಾಟೀಲ್ ಆಕ್ಷೇಪಿಸಿದ್ದಾರೆ. ನಕಲಿ ಪತ್ರವನ್ನು ಪ್ರಕಟಿಸಿರುವ ಇಂಗಿಷ್ ದೈನಿಕವೊಂದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗವನ್ನು (ರಾಜ್ಯದ ಮುಖ್ಯ ಚುನಾವಣಾ ಧಿಕಾರಿಯನ್ನು) ಆಗ್ರಹಿಸಿದ್ದಾರೆ. ಭಾರತೀಯ ದಂಡ ಸಂಹಿತೆ (ಐಪಿಸಿ), ಜನ ಪ್ರಾತಿನಿಧ್ಯ ಕಾಯ್ದೆ – ಈ ಎರಡರ ಅಡಿ ಯಲ್ಲೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುವ ದೂರು ಸಲ್ಲಿಸಿದ್ದಾರೆ.
ನಕಲಿ ಅಥವಾ ಸುಳ್ಳು ಸುದ್ದಿ ಬಿತ್ತರಿಸುವ ಕೃತ್ಯಕ್ಕೆ ಸಂಬಂಧಿಸಿದಂತೆ ಕ್ರಮ ತೆಗೆದು ಕೊಳ್ಳುವುದಕ್ಕೆ ತಕ್ಕಷ್ಟು ಅವಕಾಶ ನಮ್ಮ ‘ದಂಡ ಸಂಹಿತೆ’ಗಳಲ್ಲಿ ಇಲ್ಲ. ಆರ್ಥಾತ್, ಇಂಥ ಅವಕಾಶಗಳು ಸಾಕಷ್ಟಿಲ್ಲ; ಇಂಥ ಪ್ರಕರಣಗಳನ್ನು ಭಾರತೀಯ ಪತ್ರಿಕಾ ಮಂಡಳಿಗೆ ಒಪ್ಪಿಸಬೇಕಾ ಗುತ್ತದೆಂಬಂಥ ಅಭಿಪ್ರಾಯ ಸದ್ಯ ಚಾಲ್ತಿಯಲ್ಲಿದೆ. ಪೊಲೀಸರು ‘ಸುದ್ದಿ ವಾಹಕ’ (ಪತ್ರಕರ್ತ)ನನ್ನು ಬಂಧಿಸಿದ ಮಾತ್ರಕ್ಕೆ ಸಮಸ್ಯೆ ಪರಿಹಾರ ವಾದಂತಾಗಲಿಲ್ಲ. ಕಳೆದ ವರ್ಷವಷ್ಟೇ ಪ್ರಧಾನಿ ನರೇಂದ್ರ ಮೋದಿ ಯವರು, ಸುಳ್ಳು ಸುದ್ದಿ ಹರಡುವ ಪತ್ರಕರ್ತರ ಪ್ರಮಾಣ ಪತ್ರಗಳನ್ನು ರದ್ದು ಪಡಿಸಲು ಮುಂದಾಗಿದ್ದ ಸುದ್ದಿ ಹಾಗೂ ಪ್ರಸಾರ ಸಚಿವೆ ಸ್ಮತಿ ಇರಾನಿಯವರನ್ನು ಹಾಗೆ ಮಾಡದಂತೆ ತಡೆದಿದ್ದರು. ಐಪಿಸಿಯಡಿಯಲ್ಲಿ ಸುಳ್ಳು ಸುದ್ದಿಯ ಪ್ರಕಟಣೆ – ಪ್ರಸಾರವನ್ನು ತ್ವೇಷಪೂರ್ಣ ಭಾಷಣದೊಂದಿಗೆ ಸಮೀಕರಿಸಲಾಗಿದೆ; ಸೆಕ್ಷನ್ 155 (ದಂಗೆ ಸಂಬಂಧದ ಉದ್ರೇಕಕಾರಿ ಭಾಷಣ), ಸೆಕ್ಷನ್ 295 (ಆರಾಧನಾ ಸ್ಥಳಗಳನ್ನು ಅಪವಿತ್ರಗೊಳಿಸುವಿಕೆ), ಹಾಗೂ ಸೆಕ್ಷನ್ 499 (ಮಾನಹಾನಿ) ಮುಂತಾದ ಸೆಕ್ಷನ್‌ಗಳಡಿಯ ಅಪರಾಧ ಕೃತ್ಯಗಳಂತೆಯೇ ಸುಳ್ಳುಸುದ್ದಿ ಹರಡುವಿಕೆಯನ್ನು ಅಪರಾಧವೆಂದು ಪರಿಗಣಿಸ ಲಾಗುತ್ತದೆ.
ಹೇಮಂತ ಕುಮಾರ್ ಅವರ ಬಂಧನ ಪ್ರಕರಣವನ್ನು, ಜೆಡಿಎಸ್ ಕಾಂಗ್ರೆಸ್ ಸರಕಾರ ಸುದ್ದಿ ಮಾಧ್ಯಮ ಕ್ಷೇತ್ರದೊಂದಿಗೆ ಹೊಂದಿರುವ ಅಹಿತಕರ ಸಂಬಂಧದ ಹಿನ್ನೆಲೆಯಲ್ಲಿ ನೋಡಬೇಕಾಗಿದೆ. ಸುದ್ದಿ ಹಾಗೂ ಪ್ರಸಾರ ಖಾತೆ ಮುಖ್ಯಮಂತ್ರಿಗಳ ಕೈಯಲ್ಲೇ ಇದೆ. ಸುದ್ದಿ ಸಂಗ್ರಹಕ್ಕೆಂದು ವಿಧಾನಸೌಧಕ್ಕೆ ಬರುವ ಪತ್ರಕರ್ತರಿಗೆ ವಾಹನ ಪ್ರಯಾಣ ಪಾಸ್‌ಗಳನ್ನು ನೀಡುವ ವ್ಯವಸ್ಥೆಯನ್ನು ಸರಕಾರ ಈಗಾಗಲೇ ನಿಲ್ಲಿಸಿಬಿಟ್ಟಿದೆ. ಸೆಕ್ರೆಟರಿಯೇಟ್‌ನಲ್ಲಿರುವ ಇದಕ್ಕೆ ಸಂಬಂಧಿಸಿದ ವಿಭಾಗದಲ್ಲಿರುವ ಒಬ್ಬ ಕಿರಿಯ ಅಧಿಕಾರಿಗೆ, ಹೀಗೆ ಪಾಸ್ ವಿತರಣ ವ್ಯವಸ್ಥೆ ನಿಲ್ಲಿಸಿದ್ದು, ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಡೆದಿರುವ ಪ್ರಹಾರ ಎಂಬುದು ಇನ್ನೂ ಗೊತ್ತಾಗಿಲ್ಲ. ವಿಧಾನಸೌಧ ಸರಕಾರದಲ್ಲಿರುವವರಿಗಷ್ಟೇ ಸೇರಿದ್ದು ಎಂಬ ಅರ್ಥ ಬರುವ ರೀತಿಯಲ್ಲಿ ಮುಖ್ಯಮಂತ್ರಿಗಳು, ಪತ್ರಕರ್ತರನ್ನು ವಿಧಾನಸೌಧದೊಳಕ್ಕೆ ಪ್ರವೇಶಿಸದಂತೆ ತಡೆ ಹೇರಲಾಗುವುದೆಂಬ ಬೆದರಿಕೆ ಹಾಕಿಯಾಗಿದೆ. ಈಗ ಅವರು ಮಾಧ್ಯಮದ ಮಂದಿಗೆ ಬಹಿಷ್ಕಾರ ಹಾಕಲು ಬಯಸಿದ್ದಾರೆ; ಅವರ ಗೃಹ ಸಚಿವರಂತೂ ಒಬ್ಬ ಪತ್ರಕರ್ತನ ಬಂಧನಕ್ಕೆ ಕಾರಣರಾಗಿದ್ದಾರೆ.