Advertisement
ಒಂದು ಸಂಘ ಅಥವಾ ಸಂಸ್ಥೆ ಹೆಚ್ಚೆಂದರೆ ಎರಡು ಅವಧಿಗೆ ಚುನಾವಣೆ ಗೆದ್ದು ಮುನ್ನಡೆಸಬೇಕೆಂದರೆ ಅವರ ಕಣ್ಣೀರು ಕಪಾಳಕ್ಕೆ ಬಂದು ಹೋಗಿರುತ್ತವೆ. ಆದರೆ ಇಡೀ ದೇಶದಲ್ಲಿಯೇ ಯಾರೂ ಮಾಡದಂತಹ ಒಂದು ದಾಖಲೆಯನ್ನು ನಾಡೋಜ ಡಾ|ಪಾಟೀಲ ಪುಟ್ಟಪ್ಪ ಮಾಡಿದ್ದು, ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಒಂದಲ್ಲ, ಹತ್ತಲ್ಲ, ಬರೊಬ್ಬರಿ ಅರ್ಧ ಶತಮಾನಗಳ ಕಾಲ ಆಳಿ ಸೈ ಎನಿಸಿಕೊಂಡಿದ್ದು ನಿಜಕ್ಕೂ ಕನ್ನಡ ಸಾಂಸ್ಕೃತಿಕ ಲೋಕದ ಪಾಲಿಗೆ ಒಂದು ಹೆಮ್ಮೆಯ ವಿಷಯ.
Related Articles
Advertisement
ಚಳವಳಿಗೆ ಇಂಧನವಾಗಿದ್ದ ಪಾಟೀಲ ಪುಟ್ಟಪ್ಪ : ಕನ್ನಡ ನಾಡು-ನುಡಿಗೆ ಧಕ್ಕೆಯಾದಾಗ ಮೊದಲು ಸಿಂಹ ಗರ್ಜಣೆ ಕೂಗು ಹೊರಬೀಳುತ್ತಿದ್ದಿದ್ದು ಕರ್ನಾಟಕ ವಿದ್ಯಾವರ್ಧಕ ಸಂಘದ್ದು ಅರ್ಥಾರ್ಥ ಪಾಟೀಲ ಪುಟ್ಟಪ್ಪ ಅವರದ್ದು. ಕರ್ನಾಟಕ ಏಕೀಕರಣ, ಮಹಿಷಿ ವರದಿ ಜಾರಿ, ಗೋಕಾಕ ಚಳವಳಿ, ರೈತ ಚಳವಳಿ, ಬಂಡಾಯ ಚಳುವಳಿ, ಹೈಕೋರ್ಟ್ ಪೀಠ, ನೈಋತ್ಯ ರೈಲ್ವೆ ವಲಯ ಸ್ಥಾಪನೆ, ಕಳಸಾ-ಬಂಡೂರಿ ಹೋರಾಟ ಹೀಗೆ ನಾಡು-ನುಡಿಯ ಹೋರಾಟಗಳಿಗೆ ನೆಲೆ ಒದಗಿಸಿದ್ದು ಕರ್ನಾಟಕ ವಿದ್ಯಾವರ್ಧಕ ಸಂಘ ಮತ್ತು ಅದರ ಅಧ್ಯಕ್ಷರಾಗಿದ್ದ ನಾಡೋಜ ಪಾಪು ಅವರು. ವಿಶೇಷವಾಗಿ ಗೋಕಾಕ ಚಳವಳಿ ಸಂದರ್ಭದಲ್ಲಿ ವರನಟ ಡಾ.ರಾಜ್‌ಕುಮಾರ್ ಅವರು ಹೋರಾಟಕ್ಕೆ ಧುಮುಕುವುದಕ್ಕೆ ಪ್ರೇರೇಪಿಸಿದ್ದು ಪಾಪು ಅವರೇ. ಉತ್ತರ ಕರ್ನಾಟಕ ಭಾಗದಲ್ಲಿ ಕನ್ನಡದ ವಿಚಾರವನ್ನು ಮನೆ ಮನೆಗೆ ತಲುಪುವಂತೆ ಮಾಡಿದ ಈ ಚಳವಳಿಗೆ ಇಂಧನ ತುಂಬಿದ್ದೇ ವಿದ್ಯಾವರ್ಧಕ ಸಂಘ. ಅಂದಿನ ಕಾಲಕ್ಕೆ ಬರೀ ಚಹಾ, ಚುರುಮರಿ ತಿಂದು ಹೋರಾಟ ರೂಪಿಸಿದ ಕೀರ್ತಿ ಪಾಪು ಅವರಿಗೆ ಸಲ್ಲುತ್ತದೆ.
ಸೆಡ್ಡು ಹೊಡೆದ ಬಿಜೆಪಿಗೆ ಗುದ್ದಿ ಗೆದ್ದಿದ್ದ ಚಾಣಾಕ್ಷ : ಪಾಪು ಅವರ ರಾಜಕೀಯ ತಂತ್ರಗಾರಿಕೆ ಕೆಲವು ಸಲ ರಾಷ್ಟ್ರೀಯ ಪಕ್ಷಗಳ ಮುಖಂಡರನ್ನು ತಬ್ಬಿಬ್ಬು ಮಾಡಿದ್ದು ಸತ್ಯ. ಕವಿಸಂ ಚುನಾವಣೆಯಲ್ಲಿ ಪಾಪು ಅವರನ್ನು ಸೋಲಿಸುವುದಕ್ಕೆ ಕೊನೆಪಕ್ಷ ಕೊಂಚ ಬಿಸಿ ಮುಟ್ಟಿಸುವುದಕ್ಕಾಗಿ ಬಿಜೆಪಿ ವರಿಷ್ಠರು ಒಂದು ಕಾಲಕ್ಕೆ ಚರ್ಚಿಸಿದ್ದರು. ಹುಬ್ಬಳ್ಳಿ-ಧಾರವಾಡದ ಬಿಜೆಪಿ ಮುಖಂಡರ ವಿಚಾರಗಳನ್ನು ನಾಡೋಜ ಪಾಪು ಅವರು ಬಹಿರಂಗವಾಗಿ ಖಂಡಿಸಿ ಹೋರಾಟಕ್ಕೆ ಇಳಿದಿದ್ದರು. ಇದರಿಂದ ಕೆರಳಿದ ಬಿಜೆಪಿ ಮುಖಂಡರು ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆಯಲ್ಲಿ ಪರೋಕ್ಷವಾಗಿ ಪಾಲ್ಗೊಂಡು ಪಾಪು ಅವರನ್ನು ಸೋಲಿಸಲು ತಂತ್ರ ಹೆಣೆದರು. ಪರಿಣಾಮವಾಗಿ ಸಂಗೀತ ಪ್ರಾಧ್ಯಾಪಕರಾಗಿದ್ದ ಡಾ|ಮೃತ್ಯುಂಜಯ ಅಗಡಿ ನೇತೃತ್ವದಲ್ಲಿ ಕಣಕ್ಕಿಳಿದ ಇಡೀ ತಂಡವೇ ಧೂಳಿಪಟವಾಗಿ ಹೋಯಿತು. ಹಗಲಿರುಳು ವಿರಮಿಸದೆ ಬಿಜೆಪಿ ಕಾರ್ಯಕರ್ತರ ಪಡೆ ಪಾಪು ವಿರುದ್ಧ ಕೆಲಸ ಮಾಡಿತು. ಆದರೆ ಸಂಘದ ಚುನಾವಣೆ ಫಲಿತಾಂಶ ಬಂದ ದಿನ ಬಿಜೆಪಿ ಮುಖಂಡರಿಗೆ ತೀವ್ರ ಮುಖಭಂಗವಾಯಿತು. ಪಾಪು ಮತ್ತು ಅವರ ಬೆಂಬಲಿಗರು ಪ್ರತಿ ಬಾರಿಯಷ್ಟೇ ಮತಗಳನ್ನು ಪಡೆದು ವಿಜಯಶಾಲಿಯಾದರು.
130 ವರ್ಷ; ಒಂದು ಲಕ್ಷ ಕಾರ್ಯಕ್ರಮದ ಸಂಭ್ರಮ : ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಇದೀಗ ಬರೊಬ್ಬರಿ 130 ವರ್ಷಗಳು ತುಂಬಿವೆ. 1890ರಲ್ಲಿ ಸ್ಥಾಪನೆಯಾದ ಈ ಸಂಘದಿಂದ ಪ್ರತಿದಿನವೂ ಕಾರ್ಯಕ್ರಮಗಳು, ಸಭೆ, ಸಮಾರಂಭ, ಚಿಂತನಗೋಷ್ಠಿ, ವಿಚಾರ ಸಂಕಿರಣ, ಪ್ರತಿಭಟನೆ, ಸಾಂಸ್ಕೃತಿಕ ಕಾರ್ಯಕ್ರಮ ಹೀಗೆ ಒಂದಿಲ್ಲ ಒಂದು ಕಾರ್ಯ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ಕಳೆದ 25 ವರ್ಷಗಳಿಂದ ನಾಡೋಜ ಡಾ|ಪಾಪು ಅವರು ವಿದ್ಯಾವರ್ಧಕ ಸಂಘದಲ್ಲಿ ಬರೊಬ್ಬರಿ ಮೂರು ಸಭಾಗೃಹಗಳಲ್ಲಿಯೂ ಕಾರ್ಯಕ್ರಮ ನಡೆಸುವುದಕ್ಕೆ ಅವಕಾಶ ನೀಡಿದರು. ಹೀಗಾಗಿ ಪ್ರತಿದಿನ ಮುಂಜಾನೆ, ಸಂಜೆ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಸಾಹಿತ್ಯಗೋಷ್ಠಿ, ಜಾನಪದಸಂವಾದ, ಪುಸ್ತಕ ಬಿಡುಗಡೆ, ಸಂಘ ಸಂಸ್ಥೆಗಳ ಇತರ ಕಾರ್ಯಕ್ರಮಗಳು ಒಟ್ಟಿನಲ್ಲಿ ವಿದ್ಯಾವರ್ಧಕ ಸಂಘದವರೇ ಮಾಹಿತಿ ನೀಡುವ ಪ್ರಕಾರ ಅಂದಾಜು ಸಂಘ ಶುರುವಾದಾಗಿನಿಂದ ಈವರೆಗೂ ಇಲ್ಲಿ 1 ಲಕ್ಷಕ್ಕೂ ಅಧಿಕ ಕಾರ್ಯಕ್ರಮಗಳು ನಡೆದಿವೆ. ಇದು ಕೂಡ ವಿಶ್ವ ದಾಖಲೆಯೇ ಸರಿ. ಕಳೆದ 25 ವರ್ಷಗಳಲ್ಲಿಯೇ ಇಲ್ಲಿ 50 ಸಾವಿರ ಕಾರ್ಯಕ್ರಮ ನಡೆದಿವೆ. ಇದಕ್ಕೆ ಪ್ರೇರಕ ಶಕ್ತಿಯಾಗಿ ನಿಂತಿದ್ದು ನಾಡೋಜ ಪಾಪು ಅವರು.
-ಬಸವರಾಜ ಹೊಂಗಲ್