Advertisement

ಡೆಮಾಲಿಷನ್‌ ಶುರು: ಜೋಶಿಮಠದಲ್ಲಿ ಕಾರ್ಯಾಚರಣೆ ; ಸೆಲಾಂಗ್‌ ಗ್ರಾಮಕ್ಕೆ ಅಪಾಯ

12:51 AM Jan 15, 2023 | Team Udayavani |

ಜೋಶಿಮಠ: ಅಪಾಯದಲ್ಲಿ ಸಿಲುಕಿರುವ ಉತ್ತರಾಖಂಡದ ಜೋಶಿಮಠ ಪಟ್ಟಣದ ಎರಡು ಹೊಟೇಲ್‌ಗ‌ಳನ್ನು ಕೆಡವಿಹಾಕುವ ಕಾರ್ಯ ಶನಿವಾರದಿಂದ ಶುರುವಾಗಿದೆ. ಹೊಟೇಲ್‌ ಕಟ್ಟಡದಿಂದಾಗಿ ಸುತ್ತಮುತ್ತಲಿನ ಮನೆಗಳಿಗೆ ಹಾನಿ ಹೆಚ್ಚಿದೆ. ಈ ಮನೆಗಳನ್ನು ಉಳಿಸಲು ಹೊಟೇಲ್‌ಗ‌ಳನ್ನು ನೆಲಸಮ ಮಾಡುವುದು ಅನಿವಾರ್ಯವಾಗಿದೆ ಎಂದು ರಾಜ್ಯ ಸರಕಾರ ಹೇಳಿದೆ.

Advertisement

ಉತ್ತರಾಖಂಡ ರಾಜ್ಯ ವಿಪತ್ತು ನಿರ್ವಹಣ ಪಡೆ (ಎಸ್‌ಡಿಆರ್‌ಎಫ್), ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆ(ಎನ್‌ಡಿಆರ್‌ಎಫ್) ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರ ಸಮ್ಮುಖದಲ್ಲಿ ಹೊಟೇಲ್‌ ಮಲಾರಿ ಇನ್‌ ಮತ್ತು ಹೊಟೇಲ್‌ ಮೌಂಟ್‌ ವೀವ್‌ ಕಟ್ಟಡಗಳನ್ನು ಕೆಡವಿಹಾಕುವ ಕಾರ್ಯ ನಡೆದಿದೆ.

ಸೆಲಾಂಗ್‌ ಗ್ರಾಮಕ್ಕೆ ಅಪಾಯ: ಜೋಶಿ ಮಠದಲ್ಲಿ ಉದ್ಭವಿಸಿರುವ ಸಮಸ್ಯೆಯೇ ಸಮೀಪದ ಸೆಲಾಂಗ್‌ ಗ್ರಾಮದಲ್ಲಿ ಕಾಣಿಸಿಕೊಂಡಿದೆ. ಜೋಶಿಮಠದಿಂದ 5 ಕಿ.ಮೀ. ದೂರದ, ಬದರಿನಾಥ್‌ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್‌-58) ಯಲ್ಲಿ ಇರುವ ಸೆಲಾಂಗ್‌ ಗ್ರಾಮದ ಅನೇಕ ಮನೆಗಳು ಮತ್ತು ಜಮೀನಿನಲ್ಲಿ ಕಳೆದ ಕೆಲವು ತಿಂಗಳಿನಿಂದ ಬಿರುಕು ಕಾಣಿಸಿಕೊಂಡಿದೆ. ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಅಲ್ಲದೇ ಎನ್‌ಟಿಪಿಸಿ ಕೈಗೊಂಡಿರುವ ತಪೋವನ್‌-ವಿಷ್ಟುಗಢ ಜಲವಿದ್ಯುತ್‌ ಯೋಜನೆ ಕಾಮಗಾರಿ ಯನ್ನು ಪ್ರತಿಭಟನೆ ಮೂಲಕ ಗ್ರಾಮಸ್ಥರು ಸ್ಥಗಿತಗೊಳಿಸಿದ್ದಾರೆ.

ಸಮಗ್ರ ಪರಿಹಾರ ಪ್ಯಾಕೇಜ್‌: “ಸಂತ್ರಸ್ತ ಕುಟುಂಬಗಳ ವಿವಿಧ ಬೇಡಿಕೆಗಳನ್ನು ಪರಿಗಣಿಸಿ, ಅವರಿಗೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಮಗ್ರ ಪರಿಹಾರ ಪ್ಯಾಕೇಜ್‌ ವರದಿ ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಕೆಲವರಿಗೆ ನಗದು ರೂಪದಲ್ಲಿ ಪರಿಹಾರ ಬೇಕಿದ್ದು, ಕೆಲವರಿಗೆ ಮನೆ ರೂಪದಲ್ಲಿ ಬೇಕಿದೆ,’ ಎಂದು ಚಮೋಲಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಹಿಮಾಂಶು ಖುರಾನಾ ತಿಳಿಸಿದ್ದಾರೆ.

ಸೋರಿಕೆಯಿಂದ ಬಿರುಕು: ಪ್ರಾಥಮಿಕ ವರದಿ ಪ್ರಕಾರ ಉತ್ತರ ಪ್ರದೇಶದ ಬಾಗ³ತ್‌ ಪಟ್ಟಣದ ಹಲವು ಮನೆಗಳಲ್ಲಿ ಕಾಣಿಸಿ ಕೊಂಡ ಬಿರುಕಿಗೆ ನೀರಿನ ಪೈಪ್‌ಲೈನ್‌ನಲ್ಲಿ ಉಂಟಾದ ಸೋರಿಕೆಯೇ ಕಾರಣ ಎಂಬುದು ಖಚಿತವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Advertisement

ಸರ್ವಪಕ್ಷಗಳ ಸಭೆಗೆ ಆಗ್ರಹ: ಜೋಶಿಮಠ ಮತ್ತು ಕರ್ಣಪ್ರಯಾಗದಲ್ಲಿನ ಪರಿಸ್ಥಿತಿ ಕುರಿತು ಚರ್ಚಿಸಲು ಹಾಗೂ ಅಲ್ಲಿನ ನಿವಾಸಿಗಳ ಪುನರ್ವಸತಿ ನಿಟ್ಟಿನಲ್ಲಿ ಸರ್ವ ಪಕ್ಷಗಳ ಸಭೆ ಆಯೋಜಿಸುವಂತೆ ಕೇಂದ್ರ ಸರಕಾರಕ್ಕೆ ಸಿಪಿಐ ಆಗ್ರಹಿಸಿದೆ.

ಹೇಳಿಕೆ ನೀಡದಿರಿ
ಜೋಶಿಮಠ ಪರಿಸ್ಥಿತಿ ಕುರಿತು ಹೇಳಿಕೆ ನೀಡದಂತೆ ಹಲವು ಸರಕಾರಿ ಇಲಾಖೆಗಳು, ಸಂಸ್ಥೆಗಳು ಮತ್ತು ಅದರ ತಜ್ಞರಿಗೆ ಉತ್ತರಾಖಂಡ ಸರಕಾರ ಸೂಚನೆ ನೀಡಿದೆ. ಇಸ್ರೋ ಬಿಡುಗಡೆಗೊಳಿಸುವ ಉಪಗ್ರಹ ಚಿತ್ರಗಳ ಕುರಿತು ತಜ್ಞರ ಮತ್ತು ಅಧಿಕಾರಿಗಳ ಭಿನ್ನ ಹೇಳಿಕೆಗಳು ಜೋಶಿಮಠದ ನಿವಾಸಿಗಳಲ್ಲಿ ಗೊಂದಲ ಉಂಟು ಮಾಡಿದೆ. ಅಲ್ಲದೇ ಸಮನ್ವಯ ಕೊರತೆಯಿಂದಾಗಿ ಅಧಿಕಾರಿಗಳ ಹೇಳಿಕೆಗಳು ಜನರಲ್ಲಿ ಆತಂಕ ಹೆಚ್ಚಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಮಾಧ್ಯಮಗಳ ಮುಂದೆ ಅನಾವಶ್ಯಕವಾಗಿ ಹೇಳಿಕೆ ನೀಡದಂತೆ ಸರಕಾರ ಸೂಚಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next