Advertisement

ಮೋದಿ ಸ್ವಾಗತಿಸಲು ಬಾರದ ಜೋಶಿ

11:17 AM Apr 13, 2019 | Team Udayavani |
ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರು ಹುಬ್ಬಳ್ಳಿಗೆ ಬಂದಾಗ ಅವರ ಸ್ವಾಗತಕ್ಕೆ ಪಟ್ಟಿ ನೀಡಿದ ಬಹುತೇಕರು ಗೈರು ಹಾಜರಿ, ಬಿಜೆಪಿಯಲ್ಲಿನ ಸಂಘಟನಾ ಸಂಪರ್ಕ ಕೊರತೆ ಎದ್ದು ಕಾಣುವಂತೆ ಮಾಡಿದೆ ಎಂದು ಹೇಳಲಾಗುತ್ತಿದೆ.
ಪ್ರಧಾನಿ ಮೋದಿಯವರು ನಗರಕ್ಕೆ ಆಗಮಿಸಿದಾಗ ಹಿರಿಯ ನಾಯಕರು, ಪಕ್ಷದ ಜಿಲ್ಲಾ ಘಟಕಗಳ ಅಧ್ಯಕ್ಷರು ಇಲ್ಲವೆ ಪ್ರಮುಖ ಮುಖಂಡರು ಹಾಜರಿದ್ದು ಸ್ವಾಗತ ಕೋರಬೇಕಾಗಿತ್ತು. ಆದರೆ, ಪ್ರಧಾನಿ ಸ್ವಾಗತಕ್ಕೆ ಪಟ್ಟಿ ನೀಡಿದ ಹತ್ತು ಜನರಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಸೇರಿದಂತೆ ಆರು ಜನರು ಗೈರು ಹಾಜರಾಗಿ, ನಾಲ್ವರು ಮಾತ್ರ ಇದ್ದರು.
ಪ್ರಧಾನಿ ಮೋದಿಯವರ ಸ್ವಾಗತಕ್ಕೆ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ, ಸಂಗನಗೌಡ ರಾಮನಗೌಡ್ರ, ಶಂಕರ ಕುಮಾರ ದೇಸಾಯಿ, ಬಸವರಾಜ ಹೊಸೂರು, ಕೆಂಚಪ್ಪ ಮಲ್ಲಪ್ಪನವರ, ನಿಂಗಪ್ಪ ಮಾಯಣ್ಣವರ, ಸುರೇಶರಾವ್‌, ದುತ್ತು ಭಟ್‌, ಹರೀಶ, ಗಿರೀಶ ನರೇಂದ್ರ ಅವರ ಪಟ್ಟಿ ನೀಡಲಾಗಿತ್ತು.
ಆದರೆ ಪ್ರಧಾನಿಯವರ ಸ್ವಾಗತ ಕೋರಲು ಹೋಗಿದ್ದು ಮಾತ್ರ ಬಿಜೆಪಿ ಜಿಲ್ಲಾ ಕೈಗಾರಿಕಾ ಪ್ರಕೋಷ್ಠ ಅಧ್ಯಕ್ಷ ಎಸ್‌.ಆರ್‌. ರಾಮನಗೌಡರ, ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೆಂಚಪ್ಪ ಮಲ್ಲಮ್ಮನವರ, ಐಟಿ ಸೆಲ್‌ನ ಸಂಚಾಲಕ ಶಂಕರಕುಮಾರ ದೇಸಾಯಿ, ಧಾರವಾಡ ಎಪಿಎಂಸಿ ಸದಸ್ಯ ಬಸವರಾಜ ಹೊಸೂರ. ಎಸ್‌ಪಿಜಿ-ಪೊಲೀಸ್‌ ಪರದಾಟ: ಪ್ರಧಾನಿ ಅವರಿದ್ದ ವಿಶೇಷ ವಿಮಾನ ಹುಬ್ಬಳ್ಳಿ ನಿಲ್ದಾಣದಲ್ಲಿ ಲ್ಯಾಂಡ್‌ ಆಗಿದ್ದರೂ ಪ್ರಧಾನಿಯವರ ಸ್ವಾಗತಕ್ಕೆ ಪಕ್ಷದದಿಂದ ಪಟ್ಟಿ ಕೊಟ್ಟವರಾರು ಬಾರದ್ದರಿಂದ ಒತ್ತಡಕ್ಕೆ ಸಿಲುಕಿದಂತಾದ ಎಸ್‌ಪಿಜಿ ಹಾಗೂ ಪೊಲೀಸರು ಕೆಲ ಕ್ಷಣ ಪರದಾಡಿದ ಸ್ಥಿತಿಗೆ ತಲುಪಿದ್ದರು.
ಎಸ್‌ಪಿಜಿಯವರಂತ ನಿಮಿಷ, ನಿಮಿಷಕ್ಕೂ ಹೊರಬಂದು ಪಟ್ಟಿಯಲ್ಲಿದ್ದವರು ಬಂದರಾ, ಬೇಗ ಕರೆಯಿಸಿ ಎಂದು ಹೇಳಿದರಾದರೂ ಸ್ಥಳೀಯ ಪೊಲೀಸರು ಬಿಜೆಪಿಯ ಕೆಲ ಮುಖಂಡರನ್ನು ಮೊಬೈಲ್‌ ಮೂಲಕ ಸಂಪರ್ಕ ಮಾಡಲು
ಯತ್ನಿಸಿದರೂ ಅವರು ಪ್ರತಿಕ್ರಿಯಿಸಲಿಲ್ಲ ಎಂದು ಹೇಳಲಾಗುತ್ತಿದೆ. ಪ್ರಧಾನಿಯವರ ವಿಮಾನ ಲ್ಯಾಂಡ್‌ ಆಗುತ್ತಿದ್ದಂತೆಯೇ ಪಟ್ಟಿಯಲ್ಲಿದ್ದ ನಾಲ್ವರು ಆಗಮಿಸಿದ್ದು ತಿಳಿಯುತ್ತಿದ್ದಂತೆಯೇ ನಿಟ್ಟಿಸಿರು ಬಿಟ್ಟ ಪೊಲೀಸ್‌ ಹಾಗೂ ಎಸ್‌ಪಿಜಿಯವರು, ತರಾತುರಿಯಲ್ಲಿ ನಾಲ್ವರನ್ನು ವಿಮಾನ ನಿಲ್ದಾಣ ಒಳಗಡೆ ಕರೆದ್ಯೊಯ್ದದ್ದು ಕಂಡು ಬಂದಿತು.
ಮಹಾನಗರ ಪಟ್ಟಿಗೆ ಸಿಗಲಿಲ್ಲ ಅನುಮತಿ?: ಪ್ರಧಾನಿಯವರ ಆಗಮನ ಹಿನ್ನೆಲೆಯಲ್ಲಿ ಅವರನ್ನು ಸ್ವಾಗತಿಸಲು ಬಿಜೆಪಿ ಮಹಾನಗರ ಜಿಲ್ಲಾ ಘಟಕದಿಂದ ಯಾರು ಸ್ವಾಗತಕ್ಕೆ ಹೋಗಬೇಕು ಎಂಬ ಪಟ್ಟಿಯೊಂದನ್ನು ನೀಡಲಾಗಿತ್ತು. ಆದರೆ, ಪಟ್ಟಿ ತಡವಾಗಿ ದೆಹಲಿಗೆ ರವಾನೆಯಾಗಿದ್ದರಿಂದ ಆ ಪಟ್ಟಿಗೆ ಅನುಮತಿ ದೊರೆತಿಲ್ಲ ಎಂದು ಹೇಳಲಾಗುತ್ತಿದೆ.
ಪ್ರಧಾನಿಯವರ ಸ್ವಾಗತ ಹಾಗೂ ಬೀಳ್ಕೊಡುವಿಕೆಗೆ ಪ್ರತ್ಯೇಕವಾಗಿ 10-12 ಜನರ ಎರಡು ಪಟ್ಟಿ ಸಿದ್ಧಪಡಿಸಲು ಸೂಚಿಸಲಾಗಿತ್ತು. ಬಿಜೆಪಿ ಮಹಾನಗರ ಜಿಲ್ಲಾ ಘಟಕ ಹಾಗೂ ಗ್ರಾಮೀಣ ಜಿಲ್ಲಾ ಘಟಕದಿಂದ ಪಟ್ಟಿ ನೀಡಲು ಸೂಚಿಸಲಾಗಿತ್ತು ಎನ್ನಲಾಗಿದೆ. ಗ್ರಾಮೀಣ ಘಟಕದ ಪಟ್ಟಿ ದೆಹಲಿಗೆ ರವಾನೆಯಾಗಿದ್ದು, ಮಹಾನಗರ ಜಿಲ್ಲಾ ಪಟ್ಟಿಗೆ ಯಾರನ್ನು ಸೇರಿಸಬೇಕೆಂಬುದು ಒತ್ತಡ ಹಾಗೂ ಗೊಂದಲಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.
ತಮ್ಮ ತಮ್ಮವರ ಹೆಸರು ಸೇರಿಸಲು ಒತ್ತಡ ತಂದಿದ್ದರು ಎನ್ನಲಾಗಿದ್ದು, ಇದರಿಂದ ಪಟ್ಟಿ ಸಂಜೆವರೆಗೂ ಸಿದ್ಧಗೊಂಡು ರವಾನೆ ಆಗಿತ್ತು ಎನ್ನಲಾಗಿದೆ. ತಡವಾಗಿ ಪಟ್ಟಿ ಬಂದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಅದಕ್ಕೆ ಒಪ್ಪಿಗೆ ನೀಡದೆ ಇದ್ದುದ್ದರಿಂದ ಮಹಾನಗರ ಪಟ್ಟಿಯಲ್ಲಿನ ಯಾರೊಬ್ಬರಿಗೂ ಅವಕಾಶ ದೊರೆಯಲಿಲ್ಲ ಎಂದು ಹೇಳಲಾಗುತ್ತಿದೆ.
ಸದ್ಯದ ಸ್ಥಿತಿಯಲ್ಲಿ ಬಿಜೆಪಿ ಅಬ್ಬರ, ದೊಡ್ಡ ಬೆಂಬಲ ನಿಂತಿರುವುದೇ ಪ್ರಧಾನಿ ನರೇಂದ್ರ ಮೋದಿಯವರ ನಾಮಬಲದಿಂದ ಎಂಬುದು ಸ್ಪಷ್ಟ. ಆದರೆ, ಸ್ವತಃ ಮೋದಿಯವರು ನಗರಕ್ಕೆ ಬಂದಾಗ ಅವರ ಸ್ವಾಗತಕ್ಕೆ ಕನಿಷ್ಠ 10 ಜನ ಪಕ್ಷದ ಕಾರ್ಯಕರ್ತರು, ಪ್ರಮುಖರು ಇಲ್ಲ ಎಂದರೆ, ಶಿಸ್ತು, ಸಂಘಟನೆ, ಸಮರ್ಪಕ ಸಂಪರ್ಕಕ್ಕೆ ಹೆಸರಾದ ಬಿಜೆಪಿಯಲ್ಲಿನ ಸಂಘಟನಾ ಶಕ್ತಿ ಕುಗ್ಗುತ್ತಿದೆಯೋ ಅಥವಾ ಸ್ಥಳೀಯ ಮುಖಂಡರಲ್ಲಿ ಉದಾಸೀನತೆ ಬೆಳೆಯುತ್ತಿದೆಯೋ ಎಂಬ ಪ್ರಶ್ನೆ ಹುಟ್ಟು ಹಾಕುವಂತೆ ಮಾಡಿದೆ.
ಪ್ರಧಾನಿ ಬಂದಾಗ ಸ್ವಾಗತಕ್ಕೆ ಬಿಜೆಪಿ ಮಹಾನಗರ ಜಿಲ್ಲಾ ಹಾಗೂ ಧಾರವಾಡ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷರುಗಳಾಗಲಿ, ವಿಭಾಗೀಯ ಪ್ರಮುಖರಾಗಲಿ, ಪಕ್ಷದ ಹಿರಿಯ ನಾಯಕರಾಗಲಿ, ಒಬ್ಬರಾದರೂ ಇದ್ದಿದ್ದರೆ ಅದಕ್ಕೊಂದು ಅರ್ಥ ಬರುತ್ತಿತ್ತು ಎಂಬುದು ಬಿಜೆಪಿಯ ಕೆಲವರ ಅಸಮಾಧಾನವಾಗಿದೆ.
ಹುಬ್ಬಳ್ಳಿಗೆ ಬಂದು ಹೋದ ಪ್ರಧಾನಿ
ಹುಬ್ಬಳ್ಳಿ: ಲೋಕಸಭೆ ಚುನಾವಣೆ ಪ್ರಚಾರ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆ ಗಂಗಾವತಿಗೆ ತೆರಳಲು ಪ್ರಧಾನಿ ನರೇಂದ್ರ ಮೋದಿಯವರು, ಶುಕ್ರವಾರ ನಗರದ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿದರು.
ಶಿರಡಿಯಿಂದ ವಿಶೇಷ ವಿಮಾನದಲ್ಲಿ ಮಧ್ಯಾಹ್ನ 2:10 ಗಂಟೆ ಸುಮಾರಿಗೆ ಆಗಮಿಸಿದಾಗ ಅವರನ್ನು ಸ್ವಾಗತಿಸುವುದಕ್ಕೆ ಬಿಜೆಪಿಯ ಪ್ರಮುಖರು ಗೈರು ಹಾಜರಾಗಿದ್ದರು. ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಸೇರಿ ಹತ್ತು ಜನ ಮುಖಂಡರ ಹೆಸರನ್ನು ನೀಡಲಾಗಿದ್ದರೂ ನಾಲ್ವರು ಮಾತ್ರ ಬಂದಿದ್ದರು.
ಬಿಜೆಪಿ ಜಿಲ್ಲಾ ಕೈಗಾರಿಕಾ ಪ್ರಕೋಷ್ಠ ಅಧ್ಯಕ್ಷ ಎಸ್‌.ಆರ್‌. ರಾಮನಗೌಡರ, ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೆಂಚಪ್ಪ ಮಲ್ಲಮ್ಮನವರ, ಐಟಿ ಸೆಲ್‌ ಸಂಚಾಲಕ ಶಂಕರಕುಮಾರ ದೇಸಾಯಿ ಹಾಗೂ ಧಾರವಾಡ ಎಪಿಎಂಸಿ ಸದಸ್ಯ ಬಸವರಾಜ ಹೊಸೂರ ಅವರು ಗುಲಾಬಿ ಹೂ ನೀಡಿ ಪ್ರಧಾನಿಯವರನ್ನು ಸ್ವಾಗತಿಸಿದರು. ಈ ವೇಳೆ ಪಾದಮುಟ್ಟಿ ನಮಸ್ಕರಿಸಲು ಮುಂದಾದಾಗ “ಐಸಾ ನಹಿ ಕರನಾ’ ಎಂದು ಭುಜ ಹಿಡಿದು ಎತ್ತಿ ನಮಸ್ಕರಿಸಿದರು. ಅವರಲ್ಲಿನ ಧನ್ಯತಾಭಾವ ಕಂಡು ಬೆರಗಾದೆ ಎಂದು ಕೆಂಚಪ್ಪ ಮಲ್ಲಮ್ಮನವರ ಹೇಳಿದರು.
ಇದೇ ವೇಳೆ ಫ್ಲೈಯಿಂಗ್‌ ಸ್ಕ್ವಾಡ್‌ ಅಧಿಕಾರಿಗಳು ಪ್ರಧಾನಿ ಸಂಚರಿಸಲು ಆಗಮಿಸಿದ್ದ ಹೆಲಿಕಾಪ್ಟರ್‌ಗಳನ್ನು ಪರಿಶೀಲಿಸಿದರು. ಅಪರ ತಹಶೀಲ್ದಾರ ಪ್ರಕಾಶ ನಾಶಿ, ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ ಸಂಗಪ್ಪ ಬಾಡಗಿ ಉಪಸ್ಥಿತರಿದ್ದರು.
ಪೇಡೆ ಸವಿದರಾ ಮೋದಿ ?
ಈ ನಡುವೆ ಪ್ರಧಾನಿಯವರಿಗೆ ನಗರದ ಖ್ಯಾತ “ಓಶಿಯನ್‌ ಪರ್ಲ್’ ಹೊಟೇಲ್‌ ನಿಂದ ಭೋಜನ ಮತ್ತು ಹಣ್ಣಿನ ಪೇಯ
ಪೂರೈಸಲಾಗಿತ್ತು. ದಾಳಿಂಬೆ ಹಣ್ಣಿನ ರಸ, ಧಾರವಾಡ ಪೇಡೆ, ತಂದೂರಿ ತರಕಾರಿ ಸಹಿತ ಮಸಾಲ ಬ್ರೆಡ್‌, ಮಿನಿ ಸಸ್ಯಹಾರಿ ಚಿಟ್ಟಿನಾಡು ಪಫ್, ಸಾಬುದಾನಿ ವಡಾ, ನೆಲ್ಲಿಕಾಯಿ ಮತ್ತು ಪುದೀನ ಚೆಟ್ನಿ, ಆಲೂ ದಹಿ ಬೋಂಡಾ ಇನ್ನಿತರ ತಿನಿಸುಗಳನ್ನು ನೀಡಲಾಗಿತ್ತು ಎನ್ನಲಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next