Advertisement

ಮುಡಿಪು ಸಂತ ಜೋಸೆಫ್‌ ವಾಜ್‌ ಕ್ಷೇತ್ರ: ಯಾತ್ರಿ ನಿವಾಸ ಉದ್ಘಾಟನೆ

03:36 PM Nov 19, 2017 | |

ಉಳ್ಳಾಲ: ಮುಡಿಪು ಸಂತ ಜೋಸೆಫ್‌ ವಾಜ್‌ ಕ್ಷೇತ್ರದಲ್ಲಿ ನಿರ್ಮಾಣಗೊಂಡ ಯಾತ್ರಿ ನಿವಾಸ ಸೇರಿದಂತೆ ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಇನ್ನೂ ನಾಲ್ಕು ಪುಣ್ಯ ಕ್ಷೇತ್ರಗಳಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು,ಯಾತ್ರಿ ನಿವಾಸ ನಿರ್ಮಾಣದಿಂದ ಪ್ರವಾಸೋದ್ಯಮಕ್ಕೆ ಇನ್ನಷ್ಟು ಉತ್ತೇಜನ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ಅಭಿಪ್ರಾಯಪಟ್ಟರು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಪ್ರವಾಸೋದ್ಯಮ ಇಲಾಖೆ, ದ.ಕ. ಜಿಲ್ಲೆ , ಬಂಟ್ವಾಳ ತಾ| ಮುಡಿಪು ಕೈರಂಗಳ ಮುಕ್ತಿವಂತ ಜೋಸೆಫ್‌ ವಾಝ್ ಚರ್ಚ್‌ ಬಳಿ ನೂತನವಾಗಿ ನಿರ್ಮಾಣಗೊಂಡ ಯಾತ್ರಿ ನಿವಾಸ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಪುಣ್ಯ ಕ್ಷೇತ್ರಕ್ಕೆ ಸಂದರ್ಶನಕ್ಕೆ ಬರುವ ಪ್ರವಾಸಿಗರಿಗೆ ಯಾತ್ರಿ ನಿವಾಸದಿಂದ ಬಹಳಷ್ಟು ಪ್ರಯೋಜನವಾಗಲಿದ್ದು, ರಾತ್ರಿ ವೇಳೆಗೆ ಬರುವ ಪ್ರವಾಸಿಗರು ಇಲ್ಲಿ ತಂಗುವ ನಿಟ್ಟಿನಲ್ಲಿ ಚರ್ಚ್‌ನ ಬೇಡಿಕೆಯಂತೆ ಯಾತ್ರಿ ನಿವಾಸ ನಿರ್ಮಾಣ ವಾಗಿದೆ. ಈಗಾಗಲೇ ಉಳ್ಳಾಲ ದರ್ಗಾ, ಸೋಮೇಶ್ವರ ದೇವಸ್ಥಾನ, ಪೆರ್ಮನ್ನೂರು ಸಂತ ಸೆಬ್ಯಾಸ್ಟಿಯನ್‌ ಚರ್ಚ್‌ ಹಾಗೂ ಮಂಜನಾಡಿಗೆ ಯಾತ್ರಿ ನಿವಾಸ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು ಶೀಘ್ರವೇ ಈ ಕ್ಷೇತ್ರಗಳಲ್ಲಿ ಯಾತ್ರಿ ನಿವಾಸದ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದವರು ತಿಳಿಸಿದರು.

ಮಂಗಳೂರು ಕೆಥೊಲಿಕ್‌ ಧರ್ಮ ಪ್ರಾಂತ್ಯ ಅಧ್ಯಕ್ಷ ಅತಿ ವಂದನೀಯ ಡಾ| ಅಲೋಶಿಯಸ್‌ ಪಾವ್ಲ್   ಡಿ’ಸೋಜ ಅಧ್ಯಕ್ಷತೆ ವಹಿಸಿದ್ದರು.  ಕಾರ್ಯಕ್ರಮದಲ್ಲಿ ಚರ್ಚ್‌ ಪಾಲನಾ ಮಂಡಳಿ ವತಿಯಿಂದ ಸಚಿವ ಯು.ಟಿ. ಖಾದರ್‌ ಹಾಗೂ ಗುತ್ತಿಗೆದಾರ ಪಿಯುಷ್‌ ಮೊಂತೆರೋ ಅವರನ್ನು ಅಭಿನಂದಿಸಲಾಯಿತು. ಚರ್ಚ್‌ನ ಧರ್ಮಗುರು ವಂ| ಫಾ| ಬೆಂಜಮಿನ್‌ ಪಿಂಟೋ ಸಚಿವರಿಗೆ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿದರು.

ಜಿಲ್ಲಾ ಪಂಚಾಯತ್‌ ಸದಸ್ಯೆ ಮಮತಾ ಡಿ.ಎಸ್‌. ಗಟ್ಟಿ, ಬಂಟ್ವಾಳ ತಾಲೂಕು ಪಂಚಾಯತ್‌ ಅಧ್ಯಕ್ಷ ಚಂದ್ರಹಾಸ್‌ ಪಿ. ಕರ್ಕೇರ, ಸದಸ್ಯ ಹೈದರ್‌ ಕೈರಂಗಳ, ಮಾಜಿ ಉಪಾಧ್ಯಕ್ಷ ಉಮ್ಮರ್‌ ಪಜೀರು, ಮುಡಿಪು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಶಾಂತ ಕಾಜವ, ಸೂರಜ್‌ ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಾ| ಮಂಜುನಾಥ ಎಸ್‌. ರೇವಣ್‌ಕರ್‌, ಉಪಾಧ್ಯಕ್ಷ ರೋಶನ್‌ ಡಿ’ಸೋಜಾ , ಸಹಾಯಕ ಧರ್ಮಗುರು ಡೆನಿಸ್‌ ಲೋಬೋ, ಬಾಳೆಪುಣಿ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಲೀಲಾವತಿ, ಪಜೀರು ಗ್ರಾಮ ಪಂಚಾಯತ್‌ ಅಧ್ಯಕ್ಷ ಸೀತಾರಾಮ ಶೆಟ್ಟಿ ಪಜೀರು, ಪದ್ಮನಾಭ ನರಿಂಗಾನ ಮತ್ತಿತರರು ಉಪಸ್ಥಿತರಿದ್ದರು.

Advertisement

ಸಂತ ಜೋಸೆಫ್‌ ವಾಜ್‌ ಚರ್ಚ್‌ನ ಧರ್ಮಗುರು ಫಾ| ಬೆಂಜಮಿನ್‌ ಪಿಂಟೊ ಸ್ವಾಗತಿಸಿದರು. ಜೋಸೆಫ್‌ ವಾಜ್‌ ಸಮಿತಿ ಸದಸ್ಯ ಲ್ಯಾನ್ಸಿ ರೋಡ್ರಿಗಸ್‌ ಚೇಳೂರು ಕಾರ್ಯಕ್ರಮ ನಿರೂಪಿಸಿದರು. ಪಾಲನಾ ಮಂಡಳಿ ಸದಸ್ಯ ಮಾರ್ಷೆಲ್‌ ಡಿ’ಸೋಜ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next