Advertisement

ಅಡಿಕೆ ಕೊಳೆರೋಗ ಜಂಟಿ ಸಮೀಕ್ಷೆ

11:09 PM Sep 21, 2019 | mahesh |

ಪುತ್ತೂರು: ಅವಿಭಜಿತ ಪುತ್ತೂರು ತಾಲೂಕಿನಲ್ಲಿರುವ 68 ಕಂದಾಯ ಗ್ರಾಮಗಳಲ್ಲಿ ಅಡಿಕೆ ಕೊಳೆ ರೋಗದ ನಷ್ಟದ ಸಮೀಕ್ಷೆಯನ್ನು ಕಂದಾಯ ಇಲಾಖೆ, ತೋಟಗಾರಿಕೆ ಇಲಾ ಖೆಯ ಜಂಟಿ ಸಹಯೋಗದಲ್ಲಿ ತತ್‌ಕ್ಷಣ ಮಾಡಬೇಕು ಎಂದು ಶಾಸಕ ಸಂಜೀವ ಮಠಂದೂರು ಸೂಚನೆ ನೀಡಿದರು.

Advertisement

ಪುತ್ತೂರು ತಾ.ಪಂ. ಸಭಾಂಗಣದಲ್ಲಿ ಶನಿವಾರ ನಡೆದ ತ್ತೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೊಳೆರೋಗದ ಹಾನಿಯ ಕುರಿತು ನಿಮ್ಮಲ್ಲಿ ಏನು ಮಾಹಿತಿ ಇದೆ ಎನ್ನುವ ಶಾಸಕರ ಪ್ರಶ್ನೆಗೆ ಹಿರಿಯ ಸಹಾಯಕ ತೋಟಗಾರಿಕೆ ಅಧಿಕಾರಿ ರೇಖಾ ಉತ್ತರಿಸಿ, ಕೊಳೆರೋಗದ ಅರ್ಜಿ ನೀಡಲು ರೈತರಿಗೆ ಹೇಳಿದ್ದೇವೆ. ಈಗ ಬಂದ ಅರ್ಜಿಗಳನ್ನು ಮೇಲಧಿಕಾರಿಗಳಿಗೆ ಕಳುಹಿಸುತ್ತಿದ್ದೇವೆ ಎಂದು ಹೇಳಿದರು.

ಒಂದು ತಿಂಗಳಲ್ಲಿ ವರದಿ
ಸರಕಾರ ಹೇಳಿಯೇ ಸಮೀಕ್ಷೆ ಅಥವಾ ಪರಿಶೀಲನೆ ಮಾಡುವ, ವರದಿ ನೀಡುವ ಕ್ರಮ ಅನುಸರಿಸಬೇಕೇ? ಎಂದು ಇಲಾಖೆ ಅಧಿಕಾರಿಗಳಿಗೆ ಪ್ರಶ್ನಿಸಿದ ಶಾಸಕರು, ಈ ಬಾರಿ ಕೊಳೆರೋಗದಿಂದ ಹಾನಿಯಾದ ವರದಿ ನಮ್ಮಲ್ಲಿ ಇರಬೇಕು. ಈ ಕುರಿತು ಜಿಲ್ಲಾಧಿಕಾರಿಯೂ ಸೂಚನೆ ನೀಡಿದ್ದಾರೆ. ಮತ್ತೆ ಸರಕಾರಕ್ಕೆ ಸಲ್ಲಿಸಲು ಸಾಧ್ಯವಾಗುತ್ತದೆ. ಒಂದು ತಿಂಗಳಲ್ಲಿ ಈ ಕೆಲಸ ಆಗಬೇಕು ಎಂದರು.

ಕಳೆದ ಬಾರಿ ಕೊಳೆ ರೋಗದಿಂದ ಅಡಿಕೆ ಬೆಳೆಯುವ ರೈತರಿಗೆ ಸಾಕಷ್ಟು ನಷ್ಟ ಉಂಟಾಗಿದೆ. ಅವಿಭಜಿತ ತಾಲೂಕುಗಳಲ್ಲಿ ಸುಮಾರು 1,500 ಮಂದಿಗೆ ಪರಿಹಾರ ಸಿಕ್ಕಿಲ್ಲ ಯಾಕೆ ಎಂದು ಶಾಸಕರು ಪ್ರಶ್ನಿಸಿದರು.

ಜಿ.ಪಂ. ಸದಸ್ಯರಾದ ಶಯನಾ ಜಯಾನಂದ ಹಾಗೂ ಪಿ.ಪಿ. ವರ್ಗೀಸ್‌ ಕೊಳೆರೋಗ ಪರಿಹಾರ ನೀಡಿಕೆಯಲ್ಲಿ ವ್ಯತ್ಯಾಸ ಹಾಗೂ ತಾರತಮ್ಯವಾಗಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿ, ಯಾವ ಆಧಾರದಲ್ಲಿ ಪರಿಹಾರ ನೀಡಲಾಗಿದೆ ಮತ್ತು ಸಮೀಕ್ಷೆ ಎಲ್ಲಿ ನಡೆಸಲಾಗಿದೆ ಎಂದು ಪ್ರಶ್ನಿಸಿದರು.

Advertisement

ಆಧಾರ್‌ ಲಿಂಕ್‌ ಆಗದವರಿಗೆ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಮುಂದೆ ಬಾಕಿಯಾದವರಿಗೂ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಹಶೀಲ್ದಾರ್‌ ಅನಂತ ಶಂಕರ್‌ ಹೇಳಿದರು.

ಯಾವುದೇ ನೆಪ ಹೇಳದೆ ರೈತರಿಗೆ ಪರಿಹಾರ ಹಣ ಸಿಗಬೇಕು. ಯಾವುದೇ ರೈತನಿಗೂ ಅನ್ಯಾಯ, ತಾರತಮ್ಯ ಆಗ ಬಾರದು. ರೈತರು ಸುಶಿಕ್ಷಿತರಲ್ಲದೇ ಇರುವುದರಿಂದ ಅವರಿಗೆ ಮಾಹಿತಿ ನೀಡುವ ಕೆಲಸ ಇಲಾಖೆಯಿಂದ ಆಗಬೇಕು ಎಂದು ಇಲಾಖೆಗಳಿಗೆ ಶಾಸಕರು ಸೂಚಿಸಿದರು.

“ಶಾಶ್ವತ ನಾಟ್‌ ರೀಚೆಬಲ್ ಆಗುತ್ತೀರಿ’
ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದರೆ ಗಂಭೀರವಾಗಿ ಪರಿಗಣಿಸುವುದಾಗಿ ಎಚ್ಚರಿಕೆ ನೀಡಿದ ಶಾಸಕರು, ಕೆಳ ಹಂತದ ಅಧಿಕಾರಿಗಳ ನಿಗಾ ವಹಿಸುವ ಜಬಾಬ್ದಾರಿ ಆಯಾ ತಹಶೀಲ್ದಾರ್‌ಗೆ ಇರುತ್ತದೆ. ತಪ್ಪಿದವರಿಗೆ ಶಿಕ್ಷೆಯನ್ನೂ ನೀಡಬೇಕು. ಗ್ರಾಮಮಟ್ಟದ ಅಧಿಕಾರಿಗಳು ಯಾವಾಗಲೂ “ನಾಟ್‌ ರೀಚೆಬಲ್‌’ ಆಗಿರುತ್ತಾರೆ. ಹೀಗೇ ಮುಂದುವರಿದರೆ ಅವರನ್ನು ಶಾಶ್ವತವಾಗಿ ನಾಟ್‌ರೀಚೆಬಲ್‌ ಮಾಡಬೇಕಾಗುತ್ತದೆ ಎಂದು ಪುತ್ತೂರು ಮತ್ತು ಕಡಬ ತಹಶೀಲ್ದಾರ್‌ ಮೂಲಕ ಗ್ರಾಮ ಮಟ್ಟದ ಕಂದಾಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಭ್ರಷ್ಟಾಚಾರದಲ್ಲಿ ಭಾಗಿಯಾಗುವ ಕಂದಾಯ ಇಲಾಖೆ ಗ್ರಾಮಕರಣಿಕರು, ಕಂದಾಯ ನಿರೀಕ್ಷಕರ ಮೇಲೆ ಪೊಲೀಸ್‌ ಇಲಾಖೆ ಸುಮೊಟೊ ತರಹ ದೂರು ದಾಖಲಿಸಿ ಶಿಕ್ಷೆ ಕೊಡಿಸಬೇಕು ಎಂದು ತಹಶೀಲ್ದಾರ್‌ಗಳಿಗೆ ಸೂಚಿಸಿದರು.

ನಿಮ್ಮ ವ್ಯಾಪ್ತಿ ಎಷ್ಟು?
ಆಯುಷ್ಮಾನ್‌ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಪುತ್ತೂರು ತಾಲೂಕಿನಲ್ಲಿ ಎಷ್ಟು ಮಂದಿಗೆ ಆರೋಗ್ಯ ಕಾರ್ಡ್‌ ನೀಡಲಾಗಿದೆ ಎಂದು ಶಾಸಕರು ತಾಲೂಕು ಆರೋಗ್ಯಾಧಿಕಾರಿ ಡಾ| ಅಶೋಕ್‌ಕುಮಾರ್‌ ರೈ ಅವರನ್ನು ಪ್ರಶ್ನಿಸಿದರು. ಅವರು ಕಡಬ ಹೊರತುಪಡಿಸಿ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶಾಸಕರು, ನೀವು ಪುತ್ತೂರಿಗೆ ಸೀಮಿತ ಅಧಿಕಾರಿಯೇ ಅಥವಾ ತಾಲೂಕು ಆರೋಗ್ಯಾಧಿಕಾರಿಯೇ ಎಂದು ಪ್ರಶ್ನಿಸಿದರು. ಕಡಬದ ಡೇಟಾ ಎಂಟ್ರಿಗೆ ಆಪರೇಟರ್‌ ನೇಮಕವಾಗಿಲ್ಲ ಎಂದು ಅಧಿಕಾರಿ ಮಾಹಿತಿ ನೀಡಿದರು. ಇದರಿಂದ ಮತ್ತಷ್ಟು ಕೆರಳಿದ ಶಾಸಕರು, ಕಡಬದ ಮಾಹಿತಿಯನ್ನು ವಾರದೊಳಗೆ ಪೂರ್ಣವಾಗಿ ನೀಡಬೇಕು ಎಂದು ಎಚ್ಚರಿಸಿದರು.

ಅಪರಾಧ ಕಡಿಮೆಯಾಗುತ್ತಿದೆ
ಸಂಚಾರ ವ್ಯವಸ್ಥೆ, ಕಾನೂನು ಸುವ್ಯವಸ್ಥೆ ಕುರಿತು ಹಾಗೂ ದೂರುಗಳ ಕುರಿತ ಶಾಸಕರ ಪ್ರಶ್ನೆಗಳಿಗೆ ಉತ್ತರಿಸಿದ ಡಿವೈಎಸ್ಪಿ ದಿನಕರ ಶೆಟ್ಟಿ, ಅಪಘಾತ ತಡೆಯುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ನ ಸೂಚನೆಯಂತೆ ಬಿಗಿ ನಿಯಮ ಗಳನ್ನು ಅನುಸರಿಸಲಾಗುತ್ತಿದೆ. ಅಲ್ಲಲ್ಲಿ ತಪಾಸಣೆಗಳನ್ನು ನಡೆಸಲಾಗಿದೆ. ಮೋಟಾರು ಕಾಯ್ದೆಯಲ್ಲಿ ತಿದ್ದುಪಡಿ ಮಾಡಿರುವ ಕುರಿತು ಭಿನ್ನಾಭಿಪ್ರಾಯ ವಿದ್ದರೂ ಅಪರಾಧದ ಪ್ರಮಾಣ ಕಡಿಮೆ ಯಾಗುತ್ತಿದೆ. ಜನರು ಹಣದ ಮೌಲ್ಯ, ಕಾನೂನಿನ ಕುರಿತು ತಿಳಿದುಕೊಳ್ಳುತ್ತಿದ್ದಾರೆ ಎಂದರು.

ಮಂಗಳೂರು ಮಹಾನಗರ ಪಾಲಿಕೆ ಬಿಟ್ಟರೆ ಪುತ್ತೂರಿನಲ್ಲಿ ಅತ್ಯಂತ ಹೆಚ್ಚು ಪೊಲೀಸ್‌ ಠಾಣೆಗಳಿವೆ. ಪುತ್ತೂರು ನಗರ ಮತ್ತು ಉಪ್ಪಿನಂಗಡಿ ಭಾಗದಲ್ಲಿ ಸಂಚಾರ ತಡೆಯಾಗದಂತೆ ಶಾಲೆ ಸಮಯದಲ್ಲಿ ಸಿಪಿಐ ಮತ್ತು ಪಿಎಸ್‌ಐಗಳು ಗಸ್ತು ತಿರುಗಬೇಕು ಎಂದು ತಿಳಿಸಿದರು.

ಲೋಕೋಪಯೋಗಿ ರಸ್ತೆ ಅಭಿವೃದ್ಧಿ
ಅವಿಭಜಿತ ಪುತ್ತೂರು ತಾಲೂಕಿನ 4 ಮುಖ್ಯ ಜಿ.ಪಂ. ರಸ್ತೆಗಳ ಅಭಿವೃದ್ಧಿಗೆ 5.75 ಕೋಟಿ ರೂ., 3 ರಾಜ್ಯ ಹೆದ್ದಾರಿ ಕಾಮಗಾರಿಗೆ 7.20 ಕೋಟಿ ರೂ. ಹಾಗೂ ಉಪ್ಪಿನಂಗಡಿ ಪುತ್ತೂರು ರಸ್ತೆಯನ್ನು ಚತುಷ್ಪಥಗೊಳಿಸಲು 12 ಕೋಟಿ ರೂ. ಅನುದಾನ ಮಂಜೂರಾಗಿದೆ. ಉಪ್ಪಿನಂಗಡಿ – ಪುತ್ತೂರು ರಸ್ತೆಯ ಕೆಮ್ಮಾಯಿಯಿಂದ 34ನೇ ನೆಕ್ಕಿಲಾಡಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕದ ತನಕ 7 ಕಿ. ಮೀ. ರಸ್ತೆಯನ್ನು ಚತುಷ್ಪಥಗೊಳಿಸಲು ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ ಎಂದು ಲೊಕೋಪಯೋಗಿ ಇಲಾಖೆ ಅಧಿಕಾರಿ ತಿಳಿಸಿದರು.

ಈ ಕೆಲಸ ಆದಷ್ಟು ಬೇಗ ಆರಂಭವಾಗಬೇಕು. ಅದಕ್ಕೂ ಮೊದಲು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವ ಉಪ್ಪಿನಂಗಡಿ – ಪುತ್ತೂರು ರಸ್ತೆಯ ಕೆಲವು ಭಾಗಗಳಲ್ಲಿ ತೇಪೆ ಹಾಕಿ ಸುಗಮ ಸಂಚಾರಕ್ಕೆ ವ್ಯವಸ್ಥೆಯನ್ನು ತತ್‌ಕ್ಷಣ ಮಾಡಬೇಕು. ಮರಗಳನ್ನು ಕಡಿಯಲು ಈಗಲೇ ಅರಣ್ಯ ಇಲಾಖೆಯ ಅನುಮತಿ ಕೇಳಬೇಕು ಎಂದು ಶಾಸಕರು ಸೂಚಿಸಿದರು.

ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌, ಉಪಾಧ್ಯಕ್ಷೆ ಲಲಿತಾ ಈಶ್ವರ್‌, ಸ್ಥಾಯೀ ಸಮಿತಿ ಅಧ್ಯಕ್ಷ ಹರೀಶ್‌ ಬಿಜತ್ರೆ, ತಾ.ಪಂ. ಇಒ ನವೀನ್‌ ಭಂಡಾರಿ, ಪುತ್ತೂರು ತಹಶೀಲ್ದಾರ್‌ ಅನಂತ ಶಂಕರ ಹಾಗೂ ಕಡಬ ತಹಶೀಲ್ದಾರ್‌ ಜಾನ್‌ ಪ್ರಕಾಶ್‌, ಡಿವೈಎಸ್ಪಿ ದಿನಕರ ಶೆಟ್ಟಿ ಉಪಸ್ಥಿತರಿದ್ದರು. ಜಿ.ಪಂ. ಸದಸ್ಯರಾದ ಸರ್ವೋತ್ತಮ ಗೌಡ, ಪಿ.ಪಿ. ವರ್ಗೀಸ್‌, ಶಯನಾ ಜಯಾನಂದ, ನಾಮನಿರ್ದೇಶಿತ ಸದಸ್ಯ ಕಷ್ಣಕುಮಾರ್‌ ರೈ ಮತ್ತು ಶಶಿಕುಮಾರ್‌ ರೈ ಬಾಲೊಟ್ಟು ಚರ್ಚೆಯಲ್ಲಿ ಪಾಲ್ಗೊಂಡರು.

10.30ಕ್ಕೆ ಬಾಗಿಲು ಬಂದ್‌: ಎಚ್ಚರಿಕೆ
ತ್ತೈಮಾಸಿಕ ಕೆಡಿಪಿ ಸಭೆಗೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬರಬೇಕು. ಬದ್ಧತೆ ಮತ್ತು ಪ್ರಾಮಾಣಿಕೆಯಿಂದ ಕೆಲಸ ಮಾಡಬೇಕು. ಮೇಲಧಿಕಾರಿಗಳು ಸರಿ ಇದ್ದರೆ ಮಾತ್ರ ಕೆಳ ಹಂತದವರು ಅವರನ್ನು ಅನುಸರಿಸುತ್ತಾರೆ. ಸಭೆಗೆ ಗೈರು ಹಾಜರಾಗುವ, ಬೇಕಾಬಿಟ್ಟಿ ಬರುವ ಅ ಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಮುಂದಿನ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ 10.30ಕ್ಕೆ ಬಾಗಿಲು ಬಂದ್‌ ಮಾಡಲಾಗುತ್ತದೆ. ಇದು ಕೊನೆಯ ಎಚ್ಚರಿಕೆ ಎಂದು ಮಠಂದೂರು ಹೇಳಿದರು.

ಎಸ್ಪಿ ಕಚೇರಿ ಸ್ಥಳಾಂತರ
ಪುತ್ತೂರಿಗೆ ಎಸ್ಪಿ ಕಚೇರಿ ಸ್ಥಳಾಂತರವಾಗಿ ಬರಲಿದೆ. ಈ ಕುರಿತು ಇಲಾಖೆಯ ಉನ್ನತಾಧಿಕಾರಿಗಳಲ್ಲಿ, ಸಚಿವರಲ್ಲಿ ಮಾತನಾಡಿದ್ದೇನೆ. ಆಡಳಿತಾತ್ಮಕ ಹಾಗೂ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಈ ಕೆಲಸ ಆಗಲೇಬೇಕು. ಬಲಾ°ಡು ಹಾಗೂ ಕೆಮ್ಮಿಂಜೆ ಬಳಿ ಜಾಗ ಗುರುತಿಸಲಾಗಿದೆ. ಮಂಗಳೂರಿನಲ್ಲಿ ಕಮಿಷನರೆಟ್‌ ವ್ಯವಸ್ಥೆ ಇದೆ. ಪೊಲೀಸ್‌ ಇಲಾಖೆಯ ಕಡೆಯಿಂದಲೂ ನಗರಸಭೆಯ ಒಳಗಡೆ ಸೂಕ್ತ ಜಾಗವಿದ್ದರೆ ಗುರುತಿಸಿ ತಿಳಿಸಬಹುದು ಎಂದು ಶಾಸಕರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next